​ಈ ನಗರ ದೇಶದ ಆನ್‌ಲೈನ್ ಸಾಲಗಾರರ ರಾಜಧಾನಿ!

Update: 2019-01-23 03:58 GMT

ಬೆಂಗಳೂರು, ಜ.23: ಉದ್ಯಾನಗರಿ ಬೆಂಗಳೂರು ಇದೀಗ ದೇಶದಲ್ಲೇ ಗರಿಷ್ಠ ಸಂಖ್ಯೆಯ ಆನ್‌ಲೈನ್ ಸಾಲಗಾರರನ್ನು ಹೊಂದಿದ ನಗರ ಎನಿಸಿಕೊಂಡಿದೆ. ಬೆಂಗಳೂರು ನಗರದಲ್ಲಿ ಗರಿಷ್ಠ ಎಂದರೆ ವ್ಯಕ್ತಿಯೊಬ್ಬ 47.2 ಲಕ್ಷ ರೂಪಾಯಿ ಆನ್‌ಲೈನ್ ಸಾಲ ಪಡೆದಿದ್ದು, ಸರಾಸರಿ ಸಾಲಗಾರರು 2.7 ಲಕ್ಷ ರೂಪಾಯಿ ಆನ್‌ಲೈನ್ ಸಾಲ ಪಡೆಯುತ್ತಿದ್ದಾರೆ ಎನ್ನುವುದು ಬ್ಯಾಂಕ್‌ ಬಝಾರ್ ಎಂಬ ದೇಶದ ಅತಿದೊಡ್ಡ ಆನ್‌ಲೈನ್ ಸಾಲ ನೀಡಿಕೆ ಸಂಸ್ಥೆ ಸ್ವೀಕರಿಸಿದ 16 ಲಕ್ಷ ಅರ್ಜಿಗಳ ವಿಶ್ಲೇಷಣೆಯಿಂದ ತಿಳಿದುಬಂದಿದೆ.

ಮುಂಬೈ, ಕೊಲ್ಕತ್ತಾ, ದಿಲ್ಲಿ ಹಾಗೂ ಚೆನ್ನೈ ಕ್ರಮವಾಗಿ 40 ಲಕ್ಷ, 30 ಲಕ್ಷ, 26 ಲಕ್ಷ ಹಾಗೂ 25 ಲಕ್ಷ ರೂಪಾಯಿ ಗರಿಷ್ಠ ಆನ್‌ಲೈನ್ ಸಾಲ ಪಡೆದ ವ್ಯಕ್ತಿಗಳನ್ನು ಹೊಂದಿದ್ದು ನಂತರದ ಸ್ಥಾನಗಳಲ್ಲಿವೆ. ಬೆಂಗಳೂರಿನ ನಾಗರಿಕರು ಗರಿಷ್ಠ ಆನ್‌ಲೈನ್ ಸಾಲ ಪಡೆಯಲು ಬಹುಶಃ ಮುಖ್ಯ ಕಾರಣವೆಂದರೆ, ದೊಡ್ಡ ಮೊತ್ತದ ಆದಾಯ ಇರುವುದು ಹಾಗೂ ಗರಿಷ್ಠ ಪ್ರಗತಿ ಅವಕಾಶಗಳಿರುವುದು ಎಂದು ಬ್ಯಾಂಕ್ ಬಝಾರ್ ಸಿಇಓ ಅಧಿಲ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಇತರ ಮೆಟ್ರೊಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ವೇತನ ಹೊಂದಿದ ಮೊದಲ ಬಾರಿಯ ಸಾಲಗಾರರು ಇದ್ದಾರೆ ಎಂದು ಅವರು ವಿವರಿಸಿದ್ದಾರೆ.

ಇತರ ನಗರಗಳಲ್ಲಿ ಆಫ್‌ಲೈನ್ ವಿಧಾನದಲ್ಲಿ ಸಾಲ ಪಡೆಯುವವರು ಅಧಿಕ ಸಂಖ್ಯೆಯಲ್ಲಿ ಇರಬಹುದು. ಆದರೆ ಇದು ಆನ್‌ಲೈನ್ ಸಾಲಕ್ಕೆ ಸಂಬಂಧಿಸಿದ ಅಂಕಿಅಂಶ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಾಹನ ಸಾಲದಲ್ಲಿ ಕೂಡಾ ಬೆಂಗಳೂರು ಅಗ್ರಸ್ಥಾನದಲ್ಲಿದೆ. ವಾಹನಕ್ಕಾಗಿ ಬೆಂಗಳೂರಿನಲ್ಲಿ 49.9 ಲಕ್ಷ ರೂಪಾಯಿ ಸಾಲ ಪಡೆದಿದ್ದರೆ, ಚೆನ್ನೈನಲ್ಲಿ 46.8 ಲಕ್ಷ ಹಾಗೂ ದಿಲ್ಲಿಯಲ್ಲಿ 21.8 ಲಕ್ಷ ರೂಪಾಯಿ ಸಾಲ ಪಡೆದಿದ್ದಾರೆ. ಇದರಿಂದ ಬೆಂಗಳೂರಿಗರು ದುಬಾರಿ ಕಾರುಗಳನ್ನು ಖರೀದಿಸುತ್ತಿರುವುದು ತಿಳಿದುಬಂದಿದೆ. ಮಹಿಳೆಯೊಬ್ಬರು ಕಾರು ಖರೀದಿಸಲು ಪಡೆದ ಗರಿಷ್ಠ ಸಾಲ 12.9 ಲಕ್ಷ ರೂಪಾಯಿ.

2 ಹಾಗೂ 3ನೇ ಹಂತದ ನಗರಗಳಲ್ಲಿ ವಾಹನಕ್ಕಾಗಿ 20 ಲಕ್ಷ ರೂಗಿಂತ ಅಧಿಕ ಮೊತ್ತವನ್ನು ಜನ ವೆಚ್ಚ ಮಾಡುತ್ತಿಲ್ಲ. ಸರಾಸರಿ ಕಾರು ಸಾಲದ ಗಾತ್ರವನ್ನು ನೋಡಿದರೆ ಗ್ರಾಮೀಣ ಪ್ರದೇಶದಲ್ಲಿ ವಾಹನಕ್ಕಾಗಿ ಸರಾಸರಿ 5.2 ಲಕ್ಷ ರೂಪಾಯಿ ವೆಚ್ಚ ಮಾಡಿದರೆ, ನಗರಗಳಲ್ಲಿ 5.7 ಲಕ್ಷ ರೂಪಾಯಿ ವೆಚ್ಚ ಮಾಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News