ದೇಶದಲ್ಲಿ ಪ್ರತಿದಿನ ಸೃಷ್ಟಿಯಾಗುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ ಎಷ್ಟು ಗೊತ್ತೇ?

Update: 2019-01-23 04:10 GMT

ಹೊಸದಿಲ್ಲಿ, ಜ.23: ಭಾರತ ಪ್ರತಿದಿನ 25,940 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಪ್ರತಿದಿನ ಸೃಷ್ಟಿಸುತ್ತಿದ್ದು, ಈ ಪೈಕಿ ಶೇಕಡ 40ರಷ್ಟು ತ್ಯಾಜ್ಯ ಸಂಗ್ರಹಿಸುತ್ತಿಲ್ಲ. ಇದರಿಂದ ನದಿ ಹಾಗೂ ಚರಂಡಿ ವ್ಯವಸ್ಥೆಯಲ್ಲಿ ತಡೆ ಉಂಟಾಗುತ್ತಿದ್ದು, ಸಾಗರ ಪರಿಸರ ವ್ಯವಸ್ಥೆ ಹದಗೆಡುತ್ತಿದೆ. ಮಣ್ಣು ಹಾಗೂ ಜಲ ಸಂಪನ್ಮೂಲ ಕಲುಷಿತಗೊಳ್ಳುತ್ತಿದೆ; ಬಿಡಾಡಿ ಪ್ರಾಣಿಗಳು ಇವನ್ನು ಸೇವಿಸುತ್ತಿವೆ; ಮತ್ತೆ ಕೆಲವೆಡೆ ಬಯಲಲ್ಲಿ ಇದನ್ನು ಸುಡುತ್ತಿದ್ದು, ಮನುಷ್ಯನ ಆರೋಗ್ಯ ಹಾಗೂ ಪರಿಸರದ ಮೇಲೆ ಇದು ಗಂಭೀರ ಪರಿಣಾಮ ಬೀರುತ್ತಿದೆ.

ಮಣ್ಣಿನಲ್ಲಿ ಕರಗದ ಹಾಗೂ ಮರುಬಳಕೆಗೆ ಯೋಗ್ಯವಲ್ಲದ ಒಂದು ಬಾರಿಯಷ್ಟೇ ಬಳಸಬಹುದಾದ ಪ್ಲಾಸ್ಟಿಕ್ ನಿಷೇಧಿಸುವಂತೆ ಸೂಚಿಸಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಇತ್ತೀಚೆಗೆ ಕಳುಹಿಸಿದ ಸುತ್ತೋಲೆಯಲ್ಲಿ ಈ ಅಂಕಿ ಅಂಶಗಳನ್ನು ಉಲ್ಲೇಖಿಸಲಾಗಿದೆ.

ಪ್ರತಿದಿನ ಉತ್ಪತ್ತಿಯಾಗುವ 25,940 ಟನ್ ಪ್ಲಾಸ್ಟಿಕ್ ತ್ಯಾಜ್ಯದ ಪೈಕಿ ಶೇಕಡ 40 ಅಂದರೆ 10,376 ಟನ್ ತ್ಯಾಜ್ಯ ಸಂಗ್ರಹವಾಗುತ್ತಿಲ್ಲ. ಕೇವಲ 15,564 ಟನ್ ಮಾತ್ರ ಸಂಗ್ರಹಿಸಲಾಗುತ್ತಿದೆ. ದಿಲ್ಲಿ ಅತಿಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದಿಸುವ ರಾಜ್ಯ ಎನಿಸಿಕೊಂಡಿದ್ದು, ಪ್ರತಿದಿನ 689 ಟನ್ ಪ್ಲಾಸ್ಟಿಕ್ ತಾಜ್ಯ ಸೃಷ್ಟಿಯಾಗುತ್ತಿದೆ. ಚೆನ್ನೈ (429 ಟನ್), ಕೊಲ್ಕತ್ತಾ (425), ಮುಂಬೈ (408) ಹಾಗೂ ಬೆಂಗಳೂರು (313) ನಂತರದ ಸ್ಥಾನಗಳಲ್ಲಿವೆ. ಅಂದರೆ ಒಟ್ಟು ಸೃಷ್ಟಿಯಾಗುವ ಪ್ಲಾಸ್ಟಿಕ್ ತ್ಯಾಜ್ಯದ ಪೈಕಿ ಆರನೇ ಒಂದು ಭಾಗ ಕೇವಲ 60 ದೊಡ್ಡ ನಗರಗಳಲ್ಲಿ ಉತ್ಪತ್ತಿಯಾಗುತ್ತಿದೆ. ಮೇಲೆ ಹೆಸರಿಸಿದ ಐದು ನಗರಗಳು ಒಟ್ಟು ತ್ಯಾಜ್ಯ ಸೃಷ್ಟಿಗೆ ಶೇಕಡ 50ರಷ್ಟು ಕೊಡುಗೆ ನೀಡುತ್ತಿವೆ.

ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಈ ಬಗ್ಗೆ ಪ್ರಮುಖ 60 ನಗರಗಳಲ್ಲಿ ಸಮೀಕ್ಷೆ ಕೈಗೊಂಡಿದೆ. ಈ ನಗರಗಳು ಪ್ರತಿದಿನ 4,059 ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದಿಸುತ್ತಿವೆ ಎನ್ನುವುದು ಈ ಸಮೀಕ್ಷೆಯಿಂದ ತಿಳಿದುಬಂದಿದೆ. ಈ ಅಧ್ಯಯನ ವರದಿಯನ್ನು ಪರಿಸರ ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ 2022ರ ಒಳಗಾಗಿ ಒಂದು ಬಾರಿ ಉಪಯೋಗಿಸುವ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಲು ಉದ್ದೇಶಿಸಲಾಗಿದೆ.

ಕೇಂದ್ರ ಪರಿಸರ ಕಾರ್ಯದರ್ಶಿ ಸಿ.ಕೆ.ಮಿಶ್ರಾ ಸೋಮವಾರ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಈ ಕುರಿತ ಮಾರ್ಗಸೂಚಿಯನ್ನು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News