ಸಿದ್ಧಗಂಗಾ ಮಠದ ಉತ್ತರಾಧಿಕಾರಿಯಾಗಿ ಶಿವಕುಮಾರ ಅವರ ಹೆಸರು ಅಂತಿಮಗೊಳಿಸಿದ್ದು ದಾವೂದ್ ಸಾಹೇಬರು

Update: 2019-01-23 04:59 GMT

ತುಮಕೂರು, ಜ.23: ಎಂಬತ್ತೊಂಬತ್ತು ವರ್ಷಗಳ ಹಿಂದೆ ಶ್ರೀ ಸಿದ್ಧಗಂಗಾ ಮಠದ ಉತ್ತರಾಧಿಕಾರಿ ಮರುಳಾರಾಧ್ಯರು ನಿಧನರಾದ ಸಂದರ್ಭ ಮಠದ ನೂತನ ಉತ್ತರಾಧಿಕಾರಿಯಾಗಿ ಶಿವಣ್ಣ(ಕಾಯಕಯೋಗಿ ಡಾ.ಶಿವಕುಮಾರ ಸ್ವಾಮೀಜಿ)ಅವರ ಹೆಸರನ್ನು ಅಂತಿಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಅಂದಿನ ತುಮಕೂರು ವಿದ್ಯಾಧಿಕಾರಿ ದಾವೂದ್ ಸಾಹೇಬರು.

1930ರ ಜನವರಿ 16ರಂದು ಶ್ರೀ ಸಿದ್ಧಗಂಗಾ ಮಠದ ಉದ್ದಾನ ಶಿವಯೋಗಿಯವರ ಕಿರಿಯ ಸ್ವಾಮೀಜಿಯಾಗಿದ್ದ ಮರುಳಾರಾಧ್ಯರು ಆಕಸ್ಮಿಕವಾಗಿ ನಿಧನರಾಗುತ್ತಾರೆ. ಆಗ ಮಠದ ಮುಂದಿನ ಉತ್ತರಾಧಿಕಾರಿಯ ಹುಡುಕಾಟ ಆರಂಭವಾಗುತ್ತದೆ. ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವ ಜವಾಬ್ದಾರಿಯನ್ನು ಅಂದಿನ ತುಮಕೂರು ವಿದ್ಯಾಧಿಕಾರಿ ದಾವೂದ್ ಸಾಹೇಬರಿಗೆ ವಹಿಸಲಾಗುತ್ತದೆ.

ಅದರಂತೆ ಮಠದ ಭಕ್ತರ ಅಭಿಪ್ರಾಯ ಸಂಗ್ರಹಿಸಿದ ದಾವೂದ್ ಸಾಹೇಬರು ಬೆಂಗಳೂರಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ವೀರಾಪುರದ ಪಟೇಲ್ ಹೊನ್ನಪ್ಪ ಅವರ ಪುತ್ರ ಶಿವಣ್ಣ ಅವರನ್ನು ಶ್ರೀ ಸಿದ್ದಗಂಗಾ ಮಠದ ಉತ್ತರಾಧಿಕಾರಿ ಎಂದು ಅಂತಿಮಗೊಳಿಸುತ್ತಾರೆ. ಶಿವಣ್ಣ ಅವರ ಹಿನ್ನೆಲೆ ಬಗ್ಗೆ ಅರಿವಿದ್ದ ಮಠದ ಶಿವಯೋಗಿ ಸ್ವಾಮೀಜಿ 1930ರ ಮಾರ್ಚ್ 3ರಂದು ಶಿವಣ್ಣ ಅವರಿಗೆ ಶ್ರೀ ಮಠದ ಜವಾಬ್ದಾರಿ ವಹಿಸಿಕೊಟ್ಟಿದ್ದರು. ಮುಂದಕ್ಕೆ ಶಿವಣ್ಣ ಡಾ.ಶಿವಕುಮಾರ ಸ್ವಾಮೀಜಿಯಾಗಿ, ಕಾಯಕಯೋಗಿಯಾಗಿ ಏರಿದ ಎತ್ತರ ಈಗ ಇತಿಹಾಸ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News