ಚಿಕ್ಕಮಗಳೂರು: ಕಾಡಾನೆ ದಾಳಿಗೆ ರೈತ ಬಲಿ

Update: 2019-01-23 12:09 GMT

ಚಿಕ್ಕಮಗಳೂರು,ಜ.23: ರಾತ್ರಿ ವೇಳೆ ಹೊಲಕ್ಕೆ ನೀರು ಹಾಯಿಸಲು ತೆರಳಿದ್ದಾಗ ಕಾಡಾನೆ ದಾಳಿಗೊಳಗಾಗಿ ರೈತನೊಬ್ಬ ಮೃತಪಟ್ಟಿರುವ ಘಟನೆ ತಾಲೂಕಿನ ಶಿರವಾಸೆ ಗ್ರಾಮದಲ್ಲಿ ವರದಿಯಾಗಿದೆ.

ತಾಲೂಕಿನ ಶಿರವಾಸೆ ಗ್ರಾಮದ ಅರವಿಂದ ನಗರದ ನಿವಾಸಿ ಕುಮಾರನಾಯ್ಕ್(50) ಎಂಬವರೇ ಆನೆ ದಾಳಿಯಿಂದ ಮೃತಪಟ್ಟ ರೈತನಾಗಿದ್ದು, ಇವರು ಮಂಗಳವಾರ ರಾತ್ರಿ ಸುಮಾರು 9ರ ಹೊತ್ತಿನಲ್ಲಿ ನೆರೆಮನೆಯವರೊಂದಿಗೆ ತನ್ನ ಹೊಲದಲ್ಲಿ ಬೆಳೆದಿದ್ದ ಶುಂಠಿ ಬೆಳೆ ರಕ್ಷಣೆಗಾಗಿ ತೆರಳಿದ್ದರು. ಹೀಗೆ ಇಬ್ಬರು ಹೊಲದತ್ತ ತೆರಳುತ್ತಿದ್ದ ಈ ವೇಳೆ ಕಾಮೇನಹಳ್ಳಿ ಮೀಸಲು ಅರಣ್ಯದ ಕಡೆಯಿಂದ ಬಂದಿದ್ದ ಕಾಡಾನೆಯೊಂದು ದಿಢೀರ್ ಎದುರಾಗಿದೆ. ರಾತ್ರಿಯಾದ್ದರಿಂದ ಕಾಡಾನೆ ನಿಂತಿದ್ದನ್ನು ಗಮನಿಸದ ಇಬ್ಬರೂ ಅದರ ಸಮೀಪದಲ್ಲೇ ಹಾದು ಹೋಗುತ್ತಿದ್ದ ವೇಳೆ ಕಾಡಾನೆ ಇಬ್ಬರನ್ನೂ ಅಟ್ಟಿಸಿಕೊಂಡು ಬಂದಿದೆ. ಓಡುತ್ತಿದ್ದ ವೇಳೆ ನೆಲಕ್ಕೆ ಬಿದ್ದ ಕುಮಾರನಾಯ್ಕ್ ಏಳುವಷ್ಟರಲ್ಲಿ ದಾಳಿ ಮಾಡಿದ ಕಾಡಾನೆ ರೈತನನ್ನು ಸೊಂಡಿಲಿನಿಂದ ನೆಲಕ್ಕೆ ಬಡಿದು ಸಾಯಿಸಿದೆ ಎಂದು ತಿಳಿದು ಬಂದಿದೆ.

ಕುಮಾರನಾಯ್ಕರೊಂದಿಗಿದ್ದ ಮತ್ತೊಬ್ಬ ರೈತ ಪ್ರಾಣಾಪಾಯದಿಂದ ಪಾರಾಗಿದ್ದು, ಘಟನೆಯನ್ನು ಆತ ರೈತನ ಮನೆಯವರಿಗೆ ತಿಳಿಸಿದ್ದಾನೆಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಬುಧವಾರ ಬೆಳಗ್ಗೆ ಚಿಕ್ಕಮಗಳೂರು ಗ್ರಾಮಾಂತರ ಠಾಣಾಧಿಕಾರಿ ಸಲೀಂ ಅಬ್ಬಾಸ್ ಹಾಗೂ ಅರಣ್ಯ ಇಲಾಖೆ ಆರ್‍ಎಫ್‍ಒ ಶಿಲ್ಪಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ರೈತನ ಮೃತ ದೇಹವನ್ನು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರಿಖ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಚಿಕ್ಕಮಗಳೂರು ತಹಶೀಲ್ದಾರ್ ಭೇಟಿ ನೀಡಿದ ಕುಟುಂಬಸ್ಥರಿಂದ ಮಾಹಿತಿ ಪಡೆದರು.

ನಿರಂತರ ಕಾಡಾನೆ ದಾಳಿ: ಶಿರವಾಸೆ ಸಮೀಪದ ಅರವಿಂದ ನಗರ ಕಾಮೇನಹಳ್ಳಿ ಮೀಸಲ ಅರಣ್ಯಕ್ಕೆ ಹೊಂದಿಕೊಂಡಿದ್ದು, ಇಲ್ಲಿನ ಕಾಡಿನಿಂದ ಕಾಡಾನೆಗಳು ನಿರಂತರವಾಗಿ ಹೊಲಗದ್ದೆಗಳಿಗೆ ದಾಳಿ ಮಾಡುತ್ತಿವೆ. ಇದರಿಂದಾಗಿ ಬೆಳೆದ ಬೆಳೆಗಳು ರೈತರ ಕೈಗೆ ಸಿಗುತ್ತಿಲ್ಲ. ಬೆಳೆಗಳು ಕಾಡು ಪ್ರಾಣಿಗಳ ಪಾಲಾಗುತ್ತಿವೆ. ರಾತ್ರಿ ವೇಳೆ ಹೊಲಗಳತ್ತ ಹೋಗಲು ಸಾಧ್ಯವಾಗುತ್ತಿಲ್ಲ. ಈ ಹಿಂದೆಯೂ ಕಾಡಾನೆಗಳ ದಾಳಿಗೆ ರೈತರು ಬಲಿಯಾಗಿದ್ದಾರೆ. ಕಾಮೇನಹಳ್ಳಿ ಅರಣ್ಯದಲ್ಲಿರುವ ಕಾಡಾನೆಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕು. ಮೃತ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಸ್ಥಳಕ್ಕೆ ಭೇಟಿ ನೀಡಿದ್ದ ಅರಣ್ಯಾಧಿಕಾರಿ ಶಿಲ್ಪಾ ಅವರನ್ನು ಇಂದಿರಾ ನಗರದ ನಿವಾಸಿಗಳು ಒತ್ತಾಯಿಸಿದರೆಂದು ತಿಳಿದು ಬಂದಿದೆ.

ಶುಂಠಿ ಬೆಳೆ ರಕ್ಷಣೆಗೆ ತೆರಳಿದ್ದ ವೇಳೆ ಕಾಮೇನಹಳ್ಳಿ ಮೀಸಲು ಅರಣ್ಯದಿಂದ ಬಂದ ಕಾಡಾನೆ ದಾಳಿಯಿಂದಾಗಿ ರೈತ ಕುಮಾರನಾಯ್ಕ್ ಮೃತಪಟ್ಟಿರುವುದು ದೃಢಪಟ್ಟಿದೆ. ಘಟನೆ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಲಾಗಿದೆ. ರೈತನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಹಾಗೂ ಐದು ವರ್ಷಗಳವರೆಗೆ ಮಾಶಾಸನ ನೀಡುವ ಸಂಬಂಧ ಅಗತ್ಯ ಕ್ರಮಕೈಗೊಳ್ಳಲಾಗುವುದು. ಕಾಡಾನೆಗಳನ್ನು ಬೇರೆಡೆ ಸ್ಥಳಾಂತರ ಮಾಡಲು ಸರಕಾರದ ಆದೇಶ ಬೇಕು.
- ಶಿಲ್ಪಾ, ಆರ್‍ಎಫ್‍ಒ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News