ವಿಜಯಪುರ ಗೋಳಗುಮ್ಮಟ ಬಳಿ ಕಟ್ಟಡ ನಿರ್ಮಾಣ: ಪುರಾತತ್ವ ಇಲಾಖೆಯಿಂದಲೇ ಕಾಯ್ದೆ ಉಲ್ಲಂಘನೆ?

Update: 2019-01-23 07:43 GMT

ವಿಜಯಪುರ, ಜ.23: ವಿಜಯಪುರ ನಗರ ವ್ಯಾಪ್ತಿಯಲ್ಲಿ ಐತಿಹಾಸಿಕ ಸ್ಮಾರಕಗಳ ಬಳಿ ಯಾರಾದರೂ ಮನೆ, ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಅಣಿಯಾದರೆ ತಕ್ಷಣವೇ ನೋಟಿಸ್ ನೀಡಿ, ಎಫ್‍ಐಆರ್ ದಾಖಲಿಸುವ ಪುರಾತತ್ವ ಇಲಾಖೆ ಈಗ ತಾನೇ ಗೋಳಗುಮ್ಮಟ ಹಾಗೂ ಇಬ್ರಾಹಿಂ ರೋಝಾದ ಆವರಣದಲ್ಲಿಯೇ ಹೊಸ ಕಟ್ಟಡ ನಿರ್ಮಾಣಕ್ಕೆ ಕೈ ಹಾಕಿದೆ.

ಗೋಳಗುಮ್ಮಟ, ಇಬ್ರಾಹಿಂ ರೋಝಾದಲ್ಲಿ ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸಲು ಈ ನೂತನ ಕಟ್ಟಡ ನಿರ್ಮಾಣವಾಗುತ್ತಿದ್ದು, ಪುರಾತತ್ವ ಇಲಾಖೆಯ ಮಹಾ ನಿರ್ದೇಶಕರಿಂದ ಇದಕ್ಕೆ ಅನುಮತಿ ದೊರಕಿದೆ. ಆದರೆ ಈ ಕಾಯ್ದೆಯಿಂದ ನಮಗೇಕೆ ವಿನಾಯ್ತಿ ನೀಡುತ್ತಿಲ್ಲ ಎಂಬುದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಐತಿಹಾಸಿಕ ಸ್ಮಾರಕಗಳ ರಕ್ಷಣೆ ಹಾಗೂ ಸೌಂದರ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ 1958ರಲ್ಲಿ ಜಾರಿಗೆ ಬಂದ ಪುರಾತನ ಸ್ಮಾರಕಗಳ ಹಾಗೂ ಪುರಾತತ್ವ ಕ್ಷೇತ್ರಗಳ ಕಾಯ್ದೆ-1958ಕ್ಕೆ ಕೆಲವು ತಿದ್ದುಪಡಿಗಳನ್ನು ತಂದು 2010ರಲ್ಲಿ ನೂತನ ಕಾಯ್ದೆ ಜಾರಿಗೆ ಬಂದಿದೆ. ಈ ಕಾಯ್ದೆಯ ಅನ್ವಯ ಐತಿಹಾಸಿಕ ಸ್ಮಾರಕಗಳ 100 ಮೀಟರ್ ದೂರದಲ್ಲಿ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ. ಈ ಕಾಯ್ದೆಯನ್ನು ಉಲ್ಲಂಘಿಸುವವರಿಗೆ ನೋಟಿಸ್ ನೀಡುವ ಹೊಣೆಗಾರಿಕೆಯುಳ್ಳ ಇಲಾಖೆಯೇ ಈಗ ಕಾಯ್ದೆಯನ್ನು ಉಲ್ಲಂಘಸಿದೆ ಎಂಬುದು ಸಾರ್ವಜನಿಕರ ವಾದ. ಗೋಳಗುಮ್ಮಟ ಆವರಣದಲ್ಲಿ ಕ್ಲಾಕ್ ರೂಂ, ಟಿಕೇಟ್ ಕೌಂಟರ್ ಸೇರಿದಂತೆ ವಿವಿಧ ಕಟ್ಟಡಗಳ ಕಾಮಗಾರಿ ಭರದಿಂದ ಸಾಗಿದೆ. ಕಟ್ಟಡದ ಕಾಮಗಾರಿ ಈಗಾಗಲೇ ಒಂದು ಹಂತಕ್ಕೂ ತಲುಪಿದೆ. 

ಲೀಗಲ್ ನೋಟಿಸ್

ಪುರಾತತ್ವ ಇಲಾಖೆಯ ಈ ತಾರತಮ್ಯ ಧೋರಣೆ ಕ್ರಮವನ್ನು ಪ್ರಶ್ನಿಸಿ ವಿಜಯಪುರದ ನವಾಝ್ ರಿಯಾಝ್ ಅಹ್ಮದ್ ಇನಾಮ್ದಾರ ಹಾಗೂ ನ್ಯಾಯವಾದಿ ಎಂ.ಎಚ್.ರೋಜೆವಾಲೆ ಕಾನೂನಾತ್ಮಕ ಹೋರಾಟಕ್ಕೆ ಅಣಿಯಾಗಿದ್ದು, ಈಗಾಗಲೇ ರೋಜೆವಾಲೆ ಇಲಾಖೆಗೆ ಲೀಗಲ್ ನೊಟೀಸ್ ಸಹ ಸಲ್ಲಿಸಿದ್ದಾರೆ. ಇಲಾಖೆಗೆ ವಿನಾಯಿತಿ ದೊರಕಿದರೆ ಸಾರ್ವಜನಿಕರಿಗೂ ಈ ವಿನಾಯಿತಿ ದೊರಕಲಿ ಎಂಬುದು ಸಾರ್ವಜನಿಕರ ಹಕ್ಕೊತ್ತಾಯ.

ಐತಿಹಾಸಿಕ ಗೋಳಗುಮ್ಮಟ ಹಾಗೂ ಇಬ್ರಾಹಿಂ ರೋಝಾದಲ್ಲಿ ಯಾವುದಾದರೂ ಸಾಂಸ್ಕೃತಿಕ ಕಾರ್ಯಕ್ರಮ ಅಷ್ಟೇ ಏಕೆ ನವರಸಪುರ ಉತ್ಸವ ಆಯೋಜನೆಗೂ ಕಾಯ್ದೆಯ ನೆಪವೊಡ್ಡಿ ನೂರೆಂಟು ನಿಬಂಧನೆ ವಿಧಿಸುವ ಪುರಾತತ್ವ ಇಲಾಖೆ ಈಗ ತಾನು ನಿರ್ಮಿಸುತ್ತಿರುವ ಕಟ್ಟಡದಿಂದ ಈ ಅಪರೂಪದ ಐತಿಹಾಸಿಕ ಸ್ಮಾರಕಗಳ ಸೌಂದರ್ಯಕ್ಕೆ ಕುಂದು ಬರುತ್ತದೆ ಎಂಬ ಪರಿಜ್ಞಾನವನ್ನೂ ಹೊಂದಿಲ್ಲವೇ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕಟ್ಟಡಕ್ಕೆ ಎಎಸ್ಐ ಮಹಾನಿರ್ದೇಶಕರಿಂದ ಅನುಮತಿ

ಗೋಳಗುಮ್ಮಟ ಆವರಣದಲ್ಲಿ ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಕಟ್ಟಡ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸಾರ್ವಜನಿಕರು ಈ ಬಗ್ಗೆ ಗೊಂದಲ ಮೂಡಿಸಿಕೊಳ್ಳುವುದು ಬೇಡ. ಪ್ರವಾಸಿಗರ ಹಿತರಕ್ಷಣೆಗಾಗಿ ಹಾಗೂ ಅವರಿಗೆ ಸೌಕರ್ಯ ಕಲ್ಪಿಸುವ ದೃಷ್ಟಿಯಿಂದ ಈ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ದೇಶದ 24ಕ್ಕೂ ಹೆಚ್ಚು ಐತಿಹಾಸಿಕ ಸ್ಮಾರಕಗಳನ್ನು ಡೆವಲಪ್ ಮೆಂಟ್ ಮೋನೋಮೆಂಟ್ ಅಡಿಯಲ್ಲಿ ಪ್ರವಾಸಿಗರಿಗೆ ಸೌಕರ್ಯ ನೀಡುವ ಕಾರ್ಯ ಕೈಗೊಳ್ಳಲಾಗುತ್ತಿದೆ, ಅದರಲ್ಲಿ ಗೋಳಗುಮ್ಮಟ, ಇಬ್ರಾಹಿಂ ರೋಝ ಸಹ ಒಂದು. ಈಗಾಗಲೇ ಕಾಮಗಾರಿಗೆ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮಹಾನಿರ್ದೇಶಕರಿಂದ ಅನುಮತಿಯೂ ದೊರಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News