ಬೀರೂರು: ಅಮೃತ್‌ ಮಹಲ್ ಹೋರಿಗಳ ಹರಾಜಿನಲ್ಲಿ 190 ರಾಸುಗಳ ಪ್ರದರ್ಶನ

Update: 2019-01-23 17:52 GMT

ಬೀರೂರು, ಜ.23: ಅಜ್ಜಂಪುರ ತಳಿ ಸಂವರ್ಧನಾ ಕೇಂದ್ರ ಮತ್ತು ಪಶುಪಾಲನಾ ಇಲಾಖೆಯ ಸಹಯೋಗದೊಂದಿಗೆ ಸಮೀಪದ ಜಾನುವಾರು ಸಂವರ್ಧನಾ ಕ್ಷೇತ್ರದ ಆವರಣದಲ್ಲಿ, ಅಮೃತ್‌ಮಹಲ್ ಗಂಡು ಕರುಗಳ ಭಾರೀ ಬಹಿರಂಗ ಹರಾಜು ಬುಧವಾರ ನಡೆಯಿತು. 

ಮೈಸೂರು ಮಹಾರಾಜರ ಕಾಲದಿಂದಲೂ ಪ್ರಚಲಿತದಲ್ಲಿರುವ ಅಮೃತ್‌ಮಹಲ್ ಆಕರ್ಷಕ ಮೈಕಟ್ಟನ್ನು ಹೊಂದಿ ಕೃಷಿ ಚಟುವಟಿಕೆಗಳಿಗೆ ಹೇಳಿಮಾಡಿಸಿರುವಂತಹ ಹೋರಿಕರುಗಳಿಗೆ ಭಾರೀ ಬೇಡಿಕೆಯಿದ್ದು ಹರಾಜು ಪ್ರಕ್ರಿಯೆಯು ಅಂದಿನಿಂದಲೂ ಚಾಲನೆಯಲ್ಲಿದೆ. ನಂತರದ ದಿನಗಳಲ್ಲಿ ಸರಕಾರದ ಅಧೀನದಲ್ಲಿರುವ ರಾಜ್ಯದ ವಿವಿದೆಡೆಯಲ್ಲಿ ತಳಿಸಂವರ್ಧನಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು ಇಲ್ಲಿ ಬೆಳೆದಂತಹ ಹೋರಿಕರುಗಳಿಗೆ ಭಾರಿ ಬೇಡಿಕೆಯಿದೆ.

ಜಿಲ್ಲೆಯ ಬಾಸೂರು, ಲಿಂಗದಹಳ್ಳಿ, ಅಜ್ಜಂಪುರ ಹಾಗು ನೆರೆಯ ಜಿಲ್ಲೆಯ ರಾಮಗಿರಿ, ಹಬ್ಬನಗದ್ದೆ, ಚಿಕ್ಕಎಮ್ಮಿಗನೂರು ಮತ್ತು ರಾಯಚಂದ್ರ ಅಮೃತ್‌ಮಹಲ್ ಕಾವಲುಗಳಲ್ಲಿ ವೈಶಿಷ್ಟ ಪೂರ್ಣವಾಗಿ ಬೆಳೆಸಲಾಗುತ್ತದೆ. ಕಳೆದ ಬಾರಿಗಿಂತಲೂ ತುಸು ಹೆಚ್ಚಾಗಿರುವ ರಾಸುಗಳಲ್ಲಿ ಪಾತ್ರೆ, ನಾರಾಯಣಿ, ಕಾವೇರಿ, ಕರಿಯಕ್ಕ, ಮದಕರಿ, ಸಣ್ಣಿ, ಗಂಗೆ, ಕೆಂಪಲಕ್ಕಿ, ಮಾರಿ, ಕಡೇಗಣ್ಣಿ ಮೆಣಸಿ, ಭದ್ರಿ, ಚನ್ನಕ್ಕ, ಗಂಗೆ, ಕಾಳಿಂಗರಾಯ, ದೇವಗಿರಿ, ಮಲಾರ, ಚನ್ನಬಸವಿ, ರಾಯತದೇವಿ, ಮುತ್ತೈದೆ, ಬೆಳದಿಂಗಳು, ಗಾಳಿಕೆರೆ, ಸನ್ಯಾಸಿ, ಕೆಂದಾವರೆ ಯಂತಹ ನೂರಾರು ಹೆಸರುಗಳ ತಳಿಗಳಿಂದ ಗುರುತಿಸಲ್ಪಡುವ ಮಾರಾಟಕ್ಕಿದ್ದ ಹೋರಿಕರುಗಳು, ಕೇವಲ ಒಂದುವರೆ ವರ್ಷದಿಂದ ಎರಡು ವರ್ಷದ ಒಳಗಿನದ್ದಾಗಿವೆ.

ಹರಾಜಿನಲ್ಲಿ 180 ಅಮೃತ್‌ ಮಹಲ್ ಕ್ಷೇತ್ರದ ಹೋರಿಕರುಗಳು, 7 ಬೀಜದ ಹೋರಿಗಳು ಮತ್ತು 3 ಎತ್ತುಗಳನ್ನು ಇಡಲಾಗಿತ್ತು. ಹಾಲುಮಜ್ಜನಿ ಮತ್ತು ಓಬಳಾದೇವಿ ತಳಿಯ ಜೋಡಿ ರಾಸು ಚಳ್ಳಕೆರೆಯ ನಂದಿವಾಳದ ಓಬಯ್ಯ ಇಂದಿನ ಗರಿಷ್ಠಬೆಲೆ 1.80 ಲಕ್ಷಕ್ಕೆ ಹರಾಜು ಕೂಗಿ ತಮ್ಮದಾಗಿಸಿಕೊಂಡರು. ರಾಮಗಿರಿಯ ಮೆಣಸಿ ಮತ್ತು ಕರಿಯಕ್ಕ ಜೋಡಿಯನ್ನು ಶಿಕಾರಿಪುರದ ಮಳವಳ್ಳಿ ಪರಮೇಶ್ವರ 1.55 ಲಕ್ಷಕ್ಕೆ ಪಡೆದುಕೊಂಡರು. ಸೊರಬ ತಾಲೂಕಿನ ಇಂಡುವಳ್ಳಿಯ ಪರಶುರಾಮ್ 1.40 ಲಕ್ಷಕ್ಕೆ ನಾಮಧಾರಿ ಮತ್ತು ಓಬಳಾದೇವಿಯನ್ನು ಪಡೆದುಕೊಂಡರು.

ಹರಾಜು ಪ್ರಕ್ರಿಯೆಯಲ್ಲಿ 300 ಜನ ಬಿಡ್ಡುದಾರರು ಪಾಲ್ಗೊಂಡಿದ್ದು ಹಾಸನ, ಮೈಸೂರು, ಅರಸೀಕೆರೆ ರಾಣಿಬೆನ್ನೂರು, ಹಾವೇರಿ, ಶಿಕಾರಿಪುರ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ಚಳ್ಳಕೆರೆ ಸೇರಿದಂತೆ ರಾಜ್ಯದ ನಾನಾ ಬಾಗದ ರೈತರು, ಗೋಶಾಲೆ ಮತ್ತು ಮಠದಿಂದಲೂ ಸಾವಿರಾರು ಜನ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಹರಾಜು ಪ್ರಕ್ರಿಯೆಯಲ್ಲಿ ಗೊಂದಲ ಚಟುವಟಿಕೆಗಳಿಗೆ ಆಸ್ಪದ ನೀಡದಂತೆ ಬೀರೂರು ಪೋಲಿಸ್ ಉಪನಿರೀಕ್ಷಕ ರಾಜಶೇಖರ್ ತಮ್ಮ ಸಿಬ್ಬಂದಿಯೊಂದಿಗೆ ಸೂಕ್ತ ಭದ್ರತೆಯನ್ನು ಕಲ್ಪಿಸಿದ್ದರು. ಜಂಟಿ ನಿರ್ದೇಶಕ ಡಾ.ಜಯಣ್ಣ ಅಮೃತ್‌ಮಹಲ್ ತಳಿಸಂವರ್ಧನಾ ಕೇಂದ್ರದ ಉಪನಿರ್ದೇಶಕ ಡಾ.ಎಸ್.ಎಲ್.ರಾಜಶೇಖರಯ್ಯ, ಡಾ.ಉಮೇಶ್, ಡಾ,ಮಧುಸೂದನ್, ಡಾ.ಬಸವರಾಜ್, ಡಾ.ಬಾನುಪ್ರಕಾಶ್, ಡಾ.ಅರ್ಪಿತಾ, ಡಾ.ನವೀನ್, ಡಾ.ಮಂಜುನಾಥ್ ಮತ್ತಿತರರು ಹಾಜರಿದ್ದರು.

ಅಮೃತ್‌ಮಹಲ್ ತಳಿಯ ಹೋರಿಗಳು ಉತ್ತಮ ದೇಶಿಯ ತಳಿಗಾಳಿಗಿದ್ದು, ಇವುಗಳಿಗೆ ಬಹು ಬೇಡಿಕೆಯಿದೆ. ಕೃಷಿ ಚಟುವಟಿಕೆಗಳಿಗೂ ಹೇಳಿಮಾಡಿಸಿರುವಂತಹ ಈ ಹೋರಿಗಳನ್ನು ರೈತರು ಕೊಂಡೊಯ್ದು ಒಂದೆರೆಡು ವರ್ಷಗಳ ಕಾಲ ಬೇಸಾಯದಂತಹ ಕಾರ್ಯಗಳಿಗೆ ಬಳಸಿಕೊಂಡು, ನಂತರ ಲಾಭದಾಯಕ ಬೆಲೆಗೆ ಮಾರಾಟ ಮಾಡುತ್ತಾರೆ.

-ಪರಶುರಾಮಪ್ಪ, ರೈತ,ಶಿಕಾರಿಪುರ.
 
512 ವರ್ಷಗಳ ಇತಿಹಾಸ ಇರುವ ಅಮೃತ್‌ಮಹಲ್ ಉತ್ತಮ ತಳಿಯ ಹೋರಿಗಳಾಗಿದ್ದು, ಮಹಾರಾಜರ ಕಾಲದಿಂದಲೂ ಈ ತಳಿಯನ್ನು ಸಂರಕ್ಷಿಸಿಕೊಂಡು ಬರಲಾಗುತ್ತಿದೆ. ಕಳೆದ ವರ್ಷ 140 ಹೋರಿಕರುಗಳನ್ನು ಬಿಕರಿ ಮಾಡಲಾಗಿದ್ದು, ಈ ವರ್ಷ ಅವುಗಳ ಸಂಖ್ಯೆ 190 ಕ್ಕೆ ಏರಿರುವುದು ಸಂತಸದ ವಿಷಯ.

-ಡಾ.ಶ್ರೀನಿವಾಸ್, ಪಶುಪಾಲನಾ ಇಲಾಖೆ ಜಂಟಿ ನಿರ್ದೇಶಕರು, ಬೆಂಗಳೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News