ಬಿಜೆಪಿಯವರಿಗೆ 'ಆಪರೇಷನ್ ಕಮಲ' ರಕ್ತಗತವಾಗಿ ಬಂದಿದೆ: ಸಚಿವ ಕೃಷ್ಣ ಭೈರೇಗೌಡ

Update: 2019-01-23 18:35 GMT

ಮೈಸೂರು,ಜ.23: ಬಿಜೆಪಿಯವರಿಗೆ ಆಪರೇಷನ್ ಕಮಲ ರಕ್ತಗತವಾಗಿ ಬಂದಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಭೈರೇಗೌಡ ವ್ಯಂಗ್ಯವಾಡಿದರು.

ನಗರದ ಜಿ.ಪಂ ಸಭಾಂಗಣದಲ್ಲಿ ಬುಧವಾರ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣ ಅಧಿಕಾರಿಗಳ ಪ್ರಗತಿ ಪರೀಶೀಲನಾ ಸಭೆ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ಅವರ ಪ್ರಯತ್ನ ಎಂದಿಗೂ ಈಡೇರುವುದಿಲ್ಲ. 2008 ರಿಂದಲೂ ಆಪರೇಷನ್ ಕಮಲ ನಡೆಯುತ್ತಿದೆ. ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಟೀಕಿಸಿದರು.

ಕರ್ನಾಟದಲ್ಲಿ ಮಾತ್ರವಲ್ಲದೇ ಗೋವಾ ಸೇರಿದಂತೆ ಇತರೆ ರಾಜ್ಯಗಳಲ್ಲೂ ಈ ಪ್ರಯತ್ನ ನಡೆಯತ್ತಿದೆ. ವಾಮಮಾರ್ಗದಲ್ಲಿ ಸರ್ಕಾರ ರಚಿಸುವುದು ಬಿಜೆಪಿಯವರ ಕೆಲಸ. ನಾವು ಬಿಜೆಪಿಯವರ ಎಲ್ಲಾ ಪ್ರಯತ್ನವನ್ನು ಎದುರಿಸುತ್ತೇವೆ ಎಂದು ಹೇಳಿದರು.

ಆನಂದ್ ಸಿಂಗ್ ಪ್ರಕರಣ ನೋವುಂಟಾಗಿದೆ: ಶಾಸಕ ಆನಂದ್ ಸಿಂಗ್ ಮೇಲೆ ನಡೆದ ಹಲ್ಲೆಯಿಂದ ಎಲ್ಲರಿಗೂ ನೋವುಂಟಾಗಿದೆ. ಇದು ಪಕ್ಷಕ್ಕೂ ಸಹ ಮುಜುಗರ ತಂದಿದೆ ಎಂದು ಕೃಷ್ಣ ಭೈರೇಗೌಡ ಹೇಳಿದರು.

ಪ್ರಕರಣಕ್ಕೆ ಸಂಬಂಧಿಸದಂತೆ ತನಿಖೆ ನಡೆಸಿ ವರದಿ ನೀಡಲು ಉಪಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಶಾಸಕ ಕಂಪ್ಲಿ ಗಣೇಶ್ ಅವರನ್ನು ರಿಸ್ಕ್ ತೆಗೆದುಕೊಂಡು ಅಮಾನತು ಮಾಡಿದ್ದೇವೆ. ಇಂತಹ ಘಟನೆಗಳು ಮುಂದೆ ನಡೆಯಬಾರದು ಎಂದು ಹೇಳಿದರು.

ಈ ಘಟನೆ ಕುರಿತು ಎಲ್ಲಾ ಮುಕಂಡರು ಕೂತು ಚರ್ಚೆ ಮಾಡುತ್ತೇವೆ. ಪಕ್ಷದಿಂದಲೂ ತನಿಖೆ ಮಾಡುತ್ತೇವೆ. ಇನ್ನೊಂದೆಡೆ ಪೊಲೀಸರಿಗೆ ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗಿದೆ. ಇನ್ನು ಮುಂದೆ ಈ ರೀತಿ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕಾಗಿದೆ. ಇದು ಅವರ ವೈಯಕ್ತಿಕ ವಿಚಾರ. ಪಕ್ಷದ ತನಿಖೆಯ ನಂತರವೇ ಸ್ಪಷ್ಟ ಮಾಹಿತಿ ದೊರೆಯಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News