ಗಣತಂತ್ರದ ಪರಿಕಲ್ಪನೆಯ ಸಮಗ್ರತೆಯನ್ನು ಅರ್ಥೈಸಿಕೊಳ್ಳುವ ಅಗತ್ಯವಿದೆ: ಸಚಿವ ಸಾ.ರಾ.ಮಹೇಶ್

Update: 2019-01-26 11:44 GMT

ಮಡಿಕೇರಿ ಜ.26 : ಕಳೆದ ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಅತಿವೃಷ್ಟಿ ಅನಾಹುತದಿಂದ ಸಂತ್ರಸ್ತರಾಗಿರುವ ಕೊಡಗಿನ ಜನತೆಗೆ ಹೊಸ ಬದುಕನ್ನು ಕಟ್ಟಿಕೊಡುವ ಕಾರ್ಯ ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕಟಿ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಭರವಸೆ ನೀಡಿದ್ದಾರೆ.

ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ 70ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಹಾಗೂ ಗಣತಂತ್ರದ ಪರಿಕಲ್ಪನೆಯ ಸಮಗ್ರತೆಯನ್ನು ಅರ್ಥೈಸಿಕೊಂಡು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ನೀತಿಯೊಂದಿಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಯಾವುದೇ ಭೇದ ಭಾವವಿಲ್ಲದೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಅತಿಯಾದ ಮಳೆಯಿಂದ ಇಡೀ ಕೊಡಗು ಜಿಲ್ಲೆ ತತ್ತರಿಸಿ ಹೋಯಿತು. ನಾಗರಿಕರು ನಿಜವಾದ ಅರ್ಥದಲ್ಲಿ ಮನೆ ಮಾರುಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ರಾಜ್ಯ ಸರಕಾರ ಈ ನಿರಾಶ್ರಿತರಿಗೆ ಪುನರ್ ಬದುಕನ್ನು ಕಟ್ಟಿಕೊಡಲು ಅಪಾರವಾಗಿ ಶ್ರಮಿಸುತ್ತಿದ್ದು, ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಹಾನಿಗೀಡಾಗಿರುವ ಮೂಲಭೂತ ಸೌಕರ್ಯಗಳಾದ ರಸ್ತೆ, ಸೇತುವೆಗಳು, ಶಾಲಾ ಕಾಲೇಜು, ಅಂಗನವಾಡಿ ಕಟ್ಟಡಗಳನ್ನು  ಪುನರ್ ನಿರ್ಮಿಸಲು ಸರಕಾರ ಎಲ್ಲಾ ತುರ್ತು ನೆರವುಗಳನ್ನು ನೀಡಿದೆ.  ಜಿಲ್ಲೆಯ ಮುಖ್ಯ ರಸ್ತೆಗಳ ದುರಸ್ತಿಗಾಗಿ ಲೋಕೋಪಯೋಗಿ ಇಲಾಖೆಗೆ 99.22 ಕೋಟಿ ಅನುದಾನ ನೀಡಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ. ಹಾಗೂ ಜಿಲ್ಲಾ ರಸ್ತೆಗಳು ಹಾಗೂ ಗ್ರಾಮೀಣ ರಸ್ತೆಗಳು, ಅಂಗನವಾಡಿ, ಶಾಲಾ ಕಾಲೇಜು ಕಟ್ಟಡಗಳ ದುರಸ್ತಿಗಾಗಿ ಸಾಕಷ್ಟು ಅನುದಾನವನ್ನು ನೀಡಲಾಗಿದೆ ಎಂದು ಹೇಳಿದರು.

ಪ್ರಕೃತಿ ವಿಕೋಪದಿಂದ ಜೀವ ಹಾನಿ ಸಂಭವಿಸಿದ 19 ಪ್ರಕರಣಗಳಿಗೆ ರೂ.95.00 ಲಕ್ಷ ಅನುಕಂಪ ಭತ್ಯೆ ಮತ್ತು 268 ಜಾನುವಾರು ಹಾನಿ ಬಾಬ್ತು ರೂ.31.00 ಲಕ್ಷ ಪರಿಹಾರ ಪಾವತಿಸಲಾಗಿದೆ.  ಅಲ್ಲದೆ ಮನೆ ಹಾನಿ ಬಾಬ್ತು 3916 ಪ್ರಕರಣಗಳಿಗೆ ರೂ.10.61 ಕೋಟಿ ರೂ. ಪರಿಹಾರ ಪಾವತಿಸಲಾಗಿದೆ.  ಬೆಳೆ ಹಾನಿ ಬಾಬ್ತು ಈಗಾಗಲೇ ಪರಿಹಾರ ತಂತ್ರಾಂಶದಲ್ಲಿ ವಿವರಗಳನ್ನು ನಮೂದಿಸಲಾಗಿದ್ದು, ನೇರವಾಗಿ ಸಂತ್ರಸ್ತರ ಖಾತೆಗೆ ಪರಿಹಾರದ ಹಣವನ್ನು ಪಾವತಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಸಚಿವರು ನುಡಿದರು.

ಮನೆ ಕಳೆದುಕೊಂಡ ನಿರಾಶ್ರಿತರಿಗೆ ತುರ್ತು ಅಗತ್ಯ ದಿನೋಪಯೋಗಿ ವಸ್ತುಗಳನ್ನು ಕೊಳ್ಳಲು 5720 ಕುಟುಂಬಗಳಿಗೆ ರೂ.217.35 ಲಕ್ಷ ಪರಿಹಾರ   ಹಾಗೂ   ಮುಖ್ಯಮಂತ್ರಿಗಳ ಪರಿಹಾರವಾಗಿ ತಲಾ ರೂ.50ಸಾವಿರದಂತೆ 1021 ಕುಟುಂಬಗಳಿಗೆ ರೂ.510.50 ಲಕ್ಷ ಎಕ್ಸ್‍ಗ್ರೇಷಿಯ ಮೊತ್ತವನ್ನು ಪಾವತಿಸಲಾಗಿದೆ.  ಪ್ರಕೃತಿ ವಿಕೋಪದಿಂದ ಮನೆಗಳನ್ನು ಕಳೆದುಕೊಂಡ ಜನರ ಬದುಕನ್ನು ಹಸನು ಮಾಡಲು ಜಿಲ್ಲೆಯ ವಿವಿಧ  ಪ್ರದೇಶಗಳಲ್ಲಿ ಜಮೀನು ಗುರುತಿಸಿ, ತಲಾ 9.85 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಬಡಾವಣೆಯೊಂದಿಗೆ ಮನೆ ನಿರ್ಮಾಣ ಮಾಡಲಾಗುತ್ತಿದೆ.  ಅಲ್ಲದೆ ಈ ಮನೆಗಳು ನಿರ್ಮಾಣವಾಗುವವರೆಗೆ ಅಥವಾ 10 ತಿಂಗಳವರೆಗೆ  ಪ್ರತೀ ಕುಟುಂಬಕ್ಕೆ ಮಾಸಿಕ 10 ಸಾವಿರ ಬಾಡಿಗೆ ಭತ್ಯೆ ಪಾವತಿಸಲಾಗುತ್ತಿದೆ.  ಬಾಡಿಗೆ ಭತ್ಯೆ   ಮತ್ತು  9.85 ಲಕ್ಷ ರೂ. ಮೊತ್ತದಲ್ಲಿ ಮನೆ ನಿರ್ಮಾಣ ಮಾಡುತ್ತಿರುವುದು ದೇಶದಲ್ಲಿಯೇ ಮೊದಲ ಪ್ರಯತ್ನವಾಗಿದ್ದು, ಇದು ರಾಜ್ಯ ಸರಕಾರದ ಹೆಗ್ಗಳಿಕೆಯಾಗಿದೆ ಎಂದು ಹೇಳಿದರು.

ಸಾಲ ಮನ್ನಾ: ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರಕಾರ ರೈತರಲ್ಲಿ ಆತ್ಮವಿಶ್ವಾಸ ತುಂಬಲು  ‘ರೈತ ಬಂಧು’ ಬೆಳೆ ಸಾಲಮನ್ನಾ ಯೋಜನೆಯನ್ನು ಜಾರಿಗೆ ತಂದಿದ್ದು,  ಜಿಲ್ಲೆಯ ಒಟ್ಟು 47,346 ರೈತರು ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕ್‍ಗಳಲ್ಲಿ ಮಾಡಿದ್ದ ಬೆಳೆ ಸಾಲ ಮನ್ನಾ ಮಾಡಲು ರೈತರಿಂದ ನೋಂದಣಿಗಾಗಿ ಅರ್ಜಿ ಸ್ವೀಕರಿಸಲು ತಂತ್ರಾಂಶ ರೂಪಿಸಿ ಅರ್ಜಿಗಳನ್ನು ಸ್ವೀಕರಿಸುತ್ತಿದ್ದು, ಶೇ.90 ರಷ್ಟು ರೈತರ ನೋಂದಣಿ ಕಾರ್ಯ ಪೂರ್ಣಗೊಂಡಿದೆ. ಸಾಲ ಮನ್ನಾ ಬಗ್ಗೆ ಪರಿಶೀಲನೆ ಪ್ರಗತಿಯಲಿದ್ದು,  ರೈತರು ಸಾಲದಿಂದ ಮುಕ್ತರಾಗಿ ಹೊಸ ಬದುಕು ಆರಂಭಿಸಲು ಈ ಯೋಜನೆ ಸಹಕಾರಿಯಾಗಿದೆ ಎಂದು ವಿಶ್ಲೇಷಿಸಿದರು.

ಅಕ್ರಮ-ಸಕ್ರಮದಡಿ ಅರ್ಜಿ ಸಲ್ಲಿಸಲು ಅವಕಾಶ: ಜಿಲ್ಲೆಯಲ್ಲಿ ಸ್ಮಶಾನ, ಕಸ ವಿಲೇವಾರಿ ಘಟಕ ಸ್ಥಾಪನೆ ಇತ್ಯಾದಿ ಸಾರ್ವಜನಿಕ ಉದ್ದೇಶಗಳಿಗೆ ಒಟ್ಟು 149.18 ಎಕರೆ ಜಮೀನನ್ನು ಕಾಯ್ದಿರಿಸಲಾಗಿದ್ದು,  ಅಕ್ರಮ ಸಕ್ರಮ ಯೋಜನೆಯಡಿ ಈ ಹಿಂದೆ ಅರ್ಜಿಸಲು ಸಾಧ್ಯವಾಗದಿದ್ದ ಪ್ರಕರಣಗಳಲ್ಲಿ ಪ್ರಸ್ತುತ ಅರ್ಜಿ ಸಲ್ಲಿಸಿ ಸಕ್ರಮ ಮಾಡಿಸಿಕೊಳ್ಳಲು ಅನುವಾಗುವಾಗುವಂತೆ ನಮೂನೆ-57 ನ್ನು ಜಾರಿಗೊಳಿಸಲಾಗಿದ್ದು ಅರ್ಹ ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸಲಾಗುತ್ತಿದೆ ಎಂದು ಹೇಳಿದರು.

ಪ್ರಕೃತಿ ವಿಕೋಪದಿಂದ ಆದ ಬೆಳೆ ನಷ್ಟ ಪರಿಹಾರ ಕೋರಿ ಜಿಲ್ಲೆಯಲ್ಲಿ 63,514 ಅರ್ಜಿಗಳು ಸ್ವೀಕೃತವಾಗಿದ್ದು, ಈ ಪೈಕಿ 1,277 ಪ್ರಕರಣಗಳಲ್ಲಿ ಒಟ್ಟು 74.00 ಲಕ್ಷ ಪರಿಹಾರ ಮೊತ್ತವನ್ನು ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಸಚಿವರು ಇದೇ ಸಂದರ್ಭ ತಿಳಿಸಿದರು.

 ಒಟ್ಟಿನಲ್ಲಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಸರಕಾರ ಕಟಿ ಬದ್ಧವಾಗಿದೆ. ಸ್ವಾತಂತ್ರ್ಯ ಹಾಗೂ ಗಣತಂತ್ರದ ಪರಿಕಲ್ಪನೆಯ ಸಮಗ್ರತೆಯನ್ನು ಅರ್ಥೈಸಿಕೊಂಡು ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ನೀತಿಯೊಂದಿಗೆ ಯಾವುದೇ ಭೇದ ಭಾವವಿಲ್ಲದೆ   ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ನಾವೆಲ್ಲರೂ ಒಟ್ಟಾಗಿ ಕೈ ಜೋಡಿಸೋಣ ಎಂದು ಕರೆ ನೀಡಿದರು.

ಇದಕ್ಕೂ ಮೊದಲು ಧ್ವಜಾರೋಹಣ ನೆರವೇರಿಸಿದ ಸಚಿವ ಸಾ.ರಾ.ಮಹೇಶ್, ಪಥಸಂಚಲನ ತಂಡಗಳ ಪರಿವೀಕ್ಷಣೆ ನಡೆಸಿದರಲ್ಲದೆ, ಗೌರವ ವಂದನೆ ಸ್ವೀಕರಿಸಿದರು.

ಸಾಂಸ್ಕ್ರತಿಕ ಕಾರ್ಯಕ್ರಮದ ಆಕರ್ಷಣೆ

 ಕಾರ್ಯಕ್ರಮದಲ್ಲಿ ನಗರದ ಮೈಕೆಲರ ಆಂಗ್ಲ ಮಾಧ್ಯಮ ಶಾಲೆ, ಲಿಟ್ಲ್ ಫ್ಲವರ್ ಶಾಲೆ, ಕೊಡಗು ವಿದ್ಯಾಲಯ, ಜನರಲ್ ತಿಮ್ಮಯ್ಯ ಶಾಲೆ, ನಗರದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಸಂತ ಜೋಸೆಫರ ಶಾಲೆ ಸೇರಿದಂತೆ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.    

ಈ ಬಾರಿಯ ಗಣರಾಜ್ಯೋತ್ಸವದಲ್ಲಿ ವೀರಾಜಪೇಟೆ ತಾಲೂಕಿನ ಗಿರಿಜನ ಆಶ್ರಮ ಶಾಲೆಯ ವಿದ್ಯಾರ್ಥಿಗಳು ‘ಬುಡಕಟ್ಟು ಸಾಂಸ್ಕøತಿಕ ನೃತ್ಯ’ ಪ್ರದರ್ಶನ ವಿಶೇಷವಾಗಿತ್ತು. ಜೊತೆಗೆ ‘ಮತದಾನದ ಮಹತ್ವ’ ಕುರಿತ ಸಂದೇಶ ಒಳಗೊಂಡ ಸ್ತಬ್ಧಚಿತ್ರ ಗಮನ ಸೆಳೆಯಿತು.

ಸಾಧಕರಿಗೆ ಸನ್ಮಾನ

ಪ್ರಸಕ್ತ ಸಾಲಿನಲ್ಲಿ ಅಸಾಧಾರಣ ಸಾಧನೆ ಮಾಡಿದ ಸುಮಾರು 14 ಮಂದಿ ವಿದ್ಯಾರ್ಥಿಗಳನ್ನು ತಲಾ 10 ಸಾವಿರ ರೂ.ಗಳ ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತಲ್ಲದೆ, ಜಿಲ್ಲೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

 ಮಡಿಕೇರಿ ಶಾಸಕ  ಎಂ.ಪಿ.ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿ.ಪಂ.ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ನಗರಸಭೆ ಅಧಕ್ಷೆ ಕಾವೇರಮ್ಮ ಸೋಮಣ್ಣ, ಮಾಜಿ ಸಚಿವ ಎಂ.ಸಿ.ನಾಣಯ್ಯ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ  ಲೋಕೇಶ್ ಸಾಗರ್,  ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ, ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀನಿವಾಸ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News