ಹುಬ್ಬಳ್ಳಿಯಲ್ಲಿಂದು ಭಾರತೀಯ ಮಾನಕ ಬ್ಯೂರೋ ಕಛೇರಿ ಉದ್ಘಾಟನೆ: ಸಂಸದ ಪ್ರಲ್ಹಾದ ಜೋಶಿ

Update: 2019-01-27 14:40 GMT

ಹುಬ್ಬಳ್ಳಿ, ಜ.27: ಇಂದು ದಿ. 28 ರಂದು ಹುಬ್ಬಳ್ಳಿಯ ರಾಯಾಪುರದ ಕೆಎಸ್‍ಎಫ್‍ಸಿ ಕಟ್ಟಡ ಮೇಲ್ ಮಹಡಿಯಲ್ಲಿ ಭಾರತೀಯ ಮಾನಕ ಬ್ಯೂರೋ (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ) ಶಾಖಾ ಕಛೇರಿಯನ್ನು ಕೇಂದ್ರ ಗ್ರಾಹಕ ವ್ಯವಹಾರಗಳು ಹಾಗೂ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಸಚಿವ ರಾಮವಿಲಾಸ್ ಪಾಸ್ವಾನ್ ಅವರು ಉದ್ಘಾಟಿಸಲಿದ್ದಾರೆಂದು ಸಂಸದ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಮಧ್ಯಾಹ್ನ 3 ಘಂಟೆಗೆ ರಾಯಾಪುರದ ಕೆಎಸ್‍ಎಫ್‍ಸಿ ಕಛೇರಿ ಪಕ್ಕದಲ್ಲಿಯರುವ ಜಾಗದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು ಬಹುದಿನಗಳ ಬೇಡಿಕೆ ಈಡೇರಲಿದೆ.  ಸಧ್ಯ ಈ ಕಛೇರಿ ಬೆಂಗಳೂರಿನಲ್ಲಿ ಮಾತ್ರ ಇತ್ತು. ಸಮಸ್ತ ಉತ್ತರ ಕರ್ನಾಟಕದ ಉದ್ದಿಮೆದಾರರು ಹಾಗೂ ವಾಣಿಜ್ಯ ವಹಿವಾಟುದಾರರು ಐಎಸ್‍ಐ ಪರವಾನಿಗೆಗಾಗಿ ದೂರದ ಬೀದರನಿಂದ ಬೆಂಗಳೂರಿನವರೆಗೂ ಪ್ರಯಾಣ ಮಾಡಿ ಸಮಯ ಹಾಗೂ ಹೆಚ್ಚಿನ ಹಣ ವೆಚ್ಚ ಮಾಡಬೇಕಿತ್ತು. ಈ ಕಾರಣದಿಂದ ಕಳೆದ 15 ವರ್ಷಗಳಿಂದ ಹುಬ್ಬಳ್ಳಿಯಲ್ಲಿ ಬಿಐಎಸ್ ಶಾಖಾ ಕಛೇರಿ ಸ್ಥಾಪನೆಗಾಗಿ ನಿರಂತ ಬೇಡಿಕೆ ಇತ್ತು.  ನಾನೂ ಕೂಡಾ ಯುಪಿಎ ಸರಕಾರದ ಅವಧಿಯಿಂದಲೂ ಬಿಐಎಸ್ ಶಾಖಾ ಕಛೇರಿಯನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಲು ಒತ್ತಾಯಿಸುತ್ತಲೇ ಬಂದಿದ್ದೆ. ಆದರೆ 2014 ರಲ್ಲಿ  ಮೋದಿ ಸರಕಾರದಲ್ಲಿ ಇದಕ್ಕೆ ಹೆಚ್ಚಿನ ಚಾಲನೆ ದೊರೆತು ಸಂಬಂಧಿತ ಕೇಂದ್ರ ಸಚಿವ  ರಾಮವಿಲಾಸ್ ಪಾಸ್ವಾನ್ ಅವರ ವಿಶೇಷ ಸಹಾಯ ಸಹಕಾರದಿಂದ ಇದು ಸಾಧ್ಯವಾಗಿದ್ದು ಅವರೇ ಸ್ವತಃ ಇದರ ಉದ್ಘಾಟನೆಗೆ ಬರುತ್ತಿರುವುದು ವಿಶೇಷ ಸಂತೋಷ ತಂದಿದೆಯೆಂದು ಸಂಸದ ಜೋಶಿ ತಿಳಿಸಿದ್ದಾರೆ.

2017 ರಿಂದ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಮಂಡಳಿ ಹಾಗೂ ಎನ್‍ಕೆ ಎಎಸ್‍ಐ ಸಂಸ್ಥೆಗಳೂ ಕೂಡಾ ಈ ಸಂಬಂಧಿ ವಿಶೇಷ ಒತ್ತಾಸೆ ತಂದಿದ್ದರು. ಅದೇ ರೀತಿ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕೈಗಾರಿಕೆ ಪ್ರಕೋಷ್ಠದವರೂ ಕೂಡಾ ನಿಯೋಗದಲ್ಲಿ ನವದೆಹಲಿಗೆ ಬಂದು ನನ್ನ ಸಮಕ್ಷಮ ಪಾಸ್ವಾನ್ ಅವರಿಗೆ ಮನವಿ ಸಲ್ಲಿಸಿದ್ದರು. ಈಗ ಒಟ್ಟಾರೆ ನನ್ನ ನಿರಂತರ ಸಚಿವರೊಂದಿಗಿನ ಸಂಪರ್ಕ ಹಾಗೂ ಜಗದೀಶ ಶೇಟ್ಟರ ಹಾಗೂ ಅರವಿಂದ ಬೆಲ್ಲದ ಅವರ ಸೂಕ್ತ ಬೆಂಬಲ ಹಾಗೂ ಪ್ರಯತ್ನಗಳಿಂದ ಇಂತಹ ಒಂದು ಪ್ರತಿಷ್ಠಿತ ಕಛೇರಿ ಹುಬ್ಬಳ್ಳಿಯಲ್ಲಿ ಸ್ಥಾಪಿತವಾಗುತ್ತಿದ್ದು ಇದು ಸಮಸ್ತ ಉತ್ತರ ಕರ್ನಾಟಕ ವಾಣಿಜ್ಯೋದ್ಯಮ ಬೆಳವಣಿಗೆಗೆ ಸಹಕಾರಿಯಾಗಲಿದೆಯೆಂದು ಸಂಸದ ಜೋಶಿ ತಿಳಿಸುತ್ತಾ ಇಂದಿನ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News