ಸಿದ್ದಾಪುರ: ಶಂಕಿತ ಮಂಗನಕಾಯಿಲೆಗೆ ಇಬ್ಬರು ಬಲಿ

Update: 2019-01-27 14:49 GMT

ಸಿದ್ದಾಪುರ (ಉ.ಕ), ಜ.27: ಶಿವಮೊಗ್ಗ ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದ ಮಂಗನ ಕಾಯಿಲೆ ಸದಯ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರಕ್ಕೆ ವ್ಯಾಪಿಸಿದ್ದು, ಶನಿವಾರ ಇಬ್ಬರು ಶಂಕಿತ ಮಂಗನಕಾಯಿಲೆಯಿಂದ ಮೃತಪಟ್ಟಿದ್ದಾರೆ.

ತಾಲೂಕಿನಲ್ಲಿ ಪತ್ತೆಯಾಗಿದ್ದ ಸತ್ತ ಮಮಗಗಳ ಪೈಕಿ ಮೂರು ಮಂಗಗಳಿಲ್ಲಿ ಕೆಎಫ್‌ಡಿ ವೈರಸ್ ಪತ್ತೆಯಾಗಿತ್ತು. ಅಲ್ಲದೆ, ಜೊತೆಗೆ ತಾಲೂಕಿನಲ್ಲಿ ಮೂರು ಮಂದಿಗೆ ಇಲಿ ಜ್ವರ ಇರುವುದು ಪತ್ತೆಯಾಗಿದೆ.

ತಾಲೂಕಿನ ವಂದಾನೆ ಸಮೀಪದ ಬಾಳಗೋಡು ಗ್ರಾಮದ ಸೂರ್ಯಕಾಂತ ಗಣಪತಿ ಹೆಗಡೆ ಹಾಗೂ ಸಾವಿತ್ರಿ ಹಸ್ಲರ್ ಶಂಕಿತ ಮಂಗನಕಾಯಿಲೆಯಿಂದ ಮೃತಪಟ್ಟವರು.

ಸೂರ್ಯಕಾಂತ ಗಣಪತಿ ಹೆಗಡೆಯವರಿಗೆ ಕೆಲವು ದಿನಗಳಿಂದ ಜ್ವರ ಮೈಕೈನೋವು ಕಾಣಿಸಿಕೊಂಡಿತ್ತು ಬಳಿಕ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ, ಚಿಕಿತ್ಸೆಗೆ ಸ್ದಿಸದೆ ಮರತಪಟ್ಟರು. ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಸಾವಿತ್ರಿ ಹಸ್ಲರ್ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ ಅವರು ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು ಮಂಗನ ಕಾಯಿಲೆಯಿಂದ ಸತ್ತಿರುವುದು ಧೃಡಪಟ್ಟಿಲ್ಲವಾದರೂ ಶಂಕಿತ ಮಂಗನ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಲಕ್ಷ್ಮೀಕಾಂತ ನಾಯ್ಕ ಮಾಹಿತಿ ನೀಡಿದ್ದಾರೆ.

ತಾಲೂಕಿನ ಗುಡ್ಡೇಕಣ, ಬಾಳಗೋಡು, ಜೋಗಿನಮಠಗಳ ಮೂರು ಕಡೆಗಳಲ್ಲಿ ಸತ್ತ ಮಂಗಗಳಲ್ಲಿ ಕೆಎಫ್‌ಡಿ ವೈರಸ್ ಇರುವುದು ಧೃಡಪಟ್ಟಿದೆ. ಮಂಗ ಸತ್ತು ಬಿದ್ದ ಐದು ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಚುಚ್ಚುಮದ್ದು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಈಗಾಗಲೇ ತಾಲೂಕಿನ ಬಹುತೇಕ ಶಾಲೆಗಳಿಗೆ ಭೇಟಿ ನೀಡಿ ಮಂಗನ ಕಾಯಿಲೆಯ ಬಗ್ಗೆ ವಿದಾರ್ಥಿಗಳಿಗೆ ಮಾಹಿತಿ ನೀಡಲಾಗಿದೆ. ಆಸ್ಪತ್ರೆ ಹಾಗೂ ಗ್ರಾಮ ಪಂಚಾಯಯತ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಕಾಯಿಲೆಯ ಹಿನ್ನೆಲೆಯಲ್ಲಿ ಜನರಲ್ಲಿ ಅತಿಯಾದ ಭಯ ಆತಂಕ ವ್ಯಕ್ತವಾಗುತ್ತಿದ್ದು, ಜನರು ಮುನ್ನಚ್ಚರಿಕೆ ಕ್ರಮ ಕೈಗೊಂಡರೆ ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯಾಧಿಕಾರಿ ಲಕ್ಷ್ಮೀಕಾಂತ ನಾಯ್ಕ ತಿಳಿಸಿದ್ದಾರೆ. ಕೋಟ್

ಮಂಗನ ಕಾಯಿಲೆಯು ಮಂಗನಿಂದ ಅಥವಾ ಮಂಗನ ಕಾಯಿಲೆ ಬಂದ ವ್ಯಕ್ತಿಯಿಂದ ನೇರವಾಗಿ ಇನ್ನೊಬ್ಬರಿಗೆ ಹರಡುವುದಿಲ್ಲ. ಕೇವಲ ಒಣಗುಗಳ ಮೂಲಕ ಹರಡುವುದರಿಂದ ಒಣಗುಗಳ ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಲಕ್ಷ್ಮೀಕಾಂತ ನಾಯ್ಕ, ತಾಲೂಕು ವೈದ್ಯಾಧಿಕಾರಿ

ಇಲಿಜ್ವರ ಪತ್ತೆ

ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಗಳ ರಕ್ತಪರೀಕ್ಷೆ ಮಾಡಿದಾಗ ಮೂವರಿಗೆ ಇಲಿಜ್ವರ ಇರುವುದು ಪತ್ತೆಯಾಗಿದೆ. ಇವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಗನ ಕಾಯಿಲೆ ಒಣಗಿನಿಂದ ಬಂದರೆ, ಇಲಿಜ್ವರ ನೀರಿನಿಂದ ಬರುತ್ತದೆ. ಆದ್ದರಿಂದ ನೀರನ್ನು ಕುದಿಸಿ ಆರಿಸಿ ಕುಡಿಯಬೇಕು. ಈ ಬಗ್ಗೆಯೂ ತಲೂಕಿನಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ ಎಂದು ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News