ಕಾಂಗ್ರೆಸ್ ಹಗರಣಗಳ ಪಕ್ಷ, ಜೆಡಿಎಸ್ ಅಪ್ಪ ಮಕ್ಕಳ ಪಕ್ಷ: ಸಿ.ಟಿ.ರವಿ

Update: 2019-01-27 15:30 GMT

ಚಿಕ್ಕಮಗಳೂರು, ಜ.27: ಸ್ವಾರ್ಥಿಗಳು, ಭ್ರಷ್ಟಾಚಾರ ಮಾಡುವವರು, ಜಾತಿಯ ವಿಷ ಬೀಜ ಬಿತ್ತಿ ಕುಟುಂಬ ರಾಜಕಾರಣ ಮಾಡುವವರನ್ನು ದೂರವಿಟ್ಟು ದೇಶಕ್ಕಾಗಿ ಕೆಲಸ ಮಾಡಿ ದೇಶದ ರಕ್ಷಣೆ ಮಾಡುವ ಮೋದಿ ಸರಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಶಕ್ತಿ ಮೀರಿ ಮಹಿಳೆಯರು ಕೆಲಸ ಮಾಡಬೇಕೆಂದು ಶಾಸಕ ಸಿ.ಟಿ.ರವಿ ತಿಳಿಸಿದರು.

ಶನಿವಾರ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಹಲವು ಹಗರಣ ಮತ್ತು ಭ್ರಷ್ಟಾಚಾರದೊಂದಿಗೆ ಕುಟುಂಬ ರಾಜಕಾರಣ ಮಾಡುತ್ತಿದೆ. ಜೆಡಿಎಸ್ ಪಕ್ಷ ಅಪ್ಪ, ಮಗ, ಮೊಮ್ಮಕ್ಕಳ ಪಕ್ಷವಾಗಿ ಕುಟುಂಬ ರಾಜಕಾರಣ ಮಾಡುತ್ತಿದೆ. ಇವರ ಜೊತೆಗೆ ರಾಷ್ಟ್ರದ ವಿವಿಧ ರಾಜ್ಯದ ಪಕ್ಷಗಳು ಸಹ ಒಂದಾಗಿ ಮೋದಿಯವರ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಇವರಿಗೆ ಮುಂಬರುವ ಚುನಾವಣೆಯಲ್ಲಿ ಜನರೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಮೇರೆ ಪರಿವಾರ್ ಬಿಜೆಪಿ ಪರಿವಾರ್ ಎಂಬತ್ತೆ ಕಮಲದ ದೀಪ ಹಚ್ಚುವ ಕೆಲಸವನ್ನು ಮಾಡುವುದರ ಜೋತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನಪ್ರಿಯ ಯೋಜನೆಗಳನ್ನು ಜನರ ಮನೆ ಬಾಗಿಲುಗಳಿಗೆ ತಲುಪಿಸುವ ಕೆಲಸವನ್ನು ಮಹಿಳೆಯರು ಶಕ್ತಿ ಕೇಂದ್ರ ಮತ್ತು ಬೂತ್ ಮಟ್ಟದಲ್ಲಿ ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡುವಂತೆ ತಿಳಿಸಿದರು.

ಮೂರು ಬಾರಿ ನರೇಂದ್ರ ಮೋದಿಯವರು ಗುಜರಾತಿನ ಮುಖ್ಯ ಮಂತ್ರಿಯಾಗಿ ನಾಲ್ಕೂವರೆ ವರ್ಷ ಪ್ರಧಾನ ಮಂತ್ರಿಯಾಗಿದ್ದರು ಸಹ ಅವರ ತಾಯಿ ಇಂದಿಗೂ ಆಟೊದಲ್ಲಿ ಓಡಾಡುತ್ತಾರೆ. ಅವರ ಅಣ್ಣ ತಮ್ಮಂದಿರು ರೈಲ್ವೆ ಇಲಾಖೆ ಪೋಸ್ಟ್ ಆಫಿಸ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ಎಂದಿಗೂ ಕುಟುಂಬ ರಾಜಕಾರಣ ಮಾಡದೆ ದೇಶದ ರಕ್ಷಣೆ ಮಾಡುವ ರಾಜಕಾರಣ ಮಾಡುತ್ತಿದ್ದಾರೆ. ಮೋದಿಯನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡಿದ್ದಲ್ಲಿ ದೇಶ ಮತ್ತಷ್ಟು ಅಭಿವೃದ್ಧಿಯಾಗುತ್ತದೆ ಎಂದರು.

ರಾಜ್ಯ ಮಹಿಳಾ ಮೋರ್ಚಾ ಖಜಾಂಚಿ ಸುಶೀಲಾ ಅಣ್ಣಪ್ಪ, ಮಹಿಳಾ ಮೋರ್ಚಾ ಅಧ್ಯಕ್ಷೆ ಸರೋಜಾ ಸುರೇಂದ್ರ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ನಗರಸಭೆ ಅಧ್ಯಕ್ಷೆ ಶಿಲ್ಪಾ ರಾಜಶೇಖರ್, ರಾಜ್ಯ ಮಹಿಳಾ ಮೋರ್ಚಾ ಸದಸ್ಯರಾದ ಕವಿತಾಶೇಖರ್, ಜಿಲ್ಲಾ ಉಪಾಧ್ಯಕ್ಷೆ ವೀಣಾ ರತ್ನಾಕರ್‍ಶೆಟ್ಟಿ, ಮಹಿಳಾ ಮುಖಂಡರುಗಳಾದ ಪಾರ್ವತಮ್ಮ, ಶೋಭಾ, ಸುನೀತಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News