ಮುಝಪ್ಫರ್‌ನಗರ್ ಗಲಭೆ: 18 ಪ್ರಕರಣ ಹಿಂದೆ ತೆಗೆಯಲು ಉ.ಪ್ರ. ಸರಕಾರ ನಿರ್ಧಾರ

Update: 2019-01-27 15:42 GMT

ಮುಝಪ್ಫರ್‌ನಗರ್, ಜ. 27: ಮುಝಪ್ಫರ್‌ನಗರ್ ಗಲಭೆಗೆ ಸಂಬಂಧಿಸಿದ 18 ಪ್ರಕರಣಗಳನ್ನು ಹಿಂದೆ ತೆಗೆಯಲು ಉತ್ತರಪ್ರದೇಶ ಸರಕಾರ ನಿರ್ಧರಿಸಿದೆ. ಉತ್ತರಪ್ರದೇಶ ಸರಕಾರದ ಕಾನೂನಿಗಿರುವ ವಿಶೇಷ ಕಾರ್ಯದರ್ಶಿ ಜೆ.ಜೆ. ಸಿಂಗ್, 18 ಪ್ರಕರಣಗಳನ್ನು ಹಿಂದೆ ತೆಗೆಯುವಂತೆ ಮುಝಪ್ಫರ್‌ನಗರ್ ಜಿಲ್ಲಾ ದಂಡಾಧಿಕಾರಿ ರಾಜೀವ್ ಶರ್ಮಾ ಅವರಿಗೆ ನಿರ್ದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸರಕಾರದ ನಿರ್ದೇಶದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪ್ರಕರಣಗಳನ್ನು ಹಿಂದೆ ತೆಗೆಯಲು ಅನುಮತಿಗಾಗಿ ನ್ಯಾಯಾಲಯವನ್ನು ಸಂಪರ್ಕಿಸಲು ಸಿದ್ಧತೆ ಆರಂಭಿಸಿದೆ. 2013ರಲ್ಲಿ ನಡೆದ ಮುಝಪ್ಫರ್ ‌ನಗರ್ ಗಲಭೆಗೆ ಸಂಬಂಧಿಸಿ 125 ಪ್ರಕರಣಗಳ ವಿವರವನ್ನು ಕೋರಿದ ಬಳಿಕ ರಾಜ್ಯ ಸರಕಾರ ಈ ನಿರ್ದೇಶನ ನೀಡಿದೆ. ನ್ಯಾಯಾಲಯದಲ್ಲಿ ಬಾಕಿ ಇರುವ 125 ಪ್ರಕರಣಗಳನ್ನು ಹಿಂದೆ ತೆಗೆಯಲು ಇರುವ ಸಾಧ್ಯತೆ ಪುನರ್ ಪರಿಶೀಲಿಸಲು ರಾಜ್ಯ ಸರಕಾರ ವಿವರ ಕೋರಿತ್ತು ಎಂದು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಅಮಿತ್ ಕುಮಾರ್ ಹೇಳಿದ್ದಾರೆ.

125 ಪ್ರಕರಣಗಳಲ್ಲಿ ಸಂಸದ ಸಂಜೀವ್ ಬಲ್ಯಾನ್, ಭರತೇಂದ್ರ ಸಿಂಗ್, ಶಾಸಕ ಸಂಗೀತ್ ಸೋಮ್ ಹಾಗೂ ಉಮೇಶ್ ಮಲ್ಲಿಕ್ ಸಹಿತ ಆಡಳಿತಾರೂಢ ಬಿಜೆಪಿಯ ಹಲವು ನಾಯಕರ ಹೆಸರಿದೆ. ಮುಝಪ್ಫರ್‌ನಗರ್ ಗಲಭೆಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಕೇಂದ್ರದ ಸಹಾಯಕ ಸಚಿವ ಸುರೇಶ್ ರಾಣಾ ಹಾಗೂ ಸಂಘಪರಿವಾರದ ನಾಯಕಿ ಸಾಧ್ವಿ ಪ್ರಾಚಿ ಅವರ ಹೆಸರು ಕೂಡ ಇದೆ. ಆದಾಗ್ಯೂ, ಹಿಂದೆ ತೆಗೆಯಲು ನಿರ್ದೇಶಿಸಲಾದ ಪ್ರಕರಣಗಳಲ್ಲಿ ಬಿಜೆಪಿಯ ಈ ನಾಯಕರ ಹೆಸರಿಲ್ಲ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News