ಸಾಧನೆ ಕೇಳಿದ್ದಕ್ಕೆ ಪತ್ನಿ ವಿಷಯ ಎಳೆದು ತಂದ ಅನಂತ್ ಹೆಗಡೆ

Update: 2019-01-28 07:59 GMT

ಬೆಂಗಳೂರು, ಜ.28: “ಆಗ್ರಾದ ತಾಜಮಹಲ್ ಅನ್ನು ಮುಸ್ಲಿಂ ಅರಸ ಕಟ್ಟಿದ್ದಲ್ಲ ಅದು ಶಿವ ದೇವಾಲಯವಾಗಿತ್ತು, ಹಿಂದು ಯುವತಿಯರನ್ನು ಮುಟ್ಟುವ ಕೈಗಳಿರಬಾರದು'' ಎಂಬಿತ್ಯಾದಿ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿವಾದ ಸೃಷ್ಟಿಸಿದ್ದರು. ಕೇಂದ್ರ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿ ``ಅನಂತ್ ಕುಮಾರ್ ಅವರು ಸಚಿವರಾಗಿ, ಸಂಸದರಾಗಿ ಮಾಡಿದ ಸಾಧನೆಗಳೇನು ? ಇಂತಹ ಜನರು ಸಂಸದರಾಗಿ ಆಯ್ಕೆಯಾಗಿರುವುದು ಖಂಡನೀಯ'' ಎಂದಿದ್ದರು.

ಆದರೆ ಇದೀಗ ಗುಂಡೂರಾವ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅನಂತ್ ಕುಮಾರ್ ಹೆಗಡೆ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ. ದಿನೇಶ್ ಗುಂಡೂರಾವ್ ಟ್ವೀಟ್ ಗೆ ಪ್ರತಿಕ್ರಿಯಿಸಿದ ಅನಂತ್ ಕುಮಾರ್ ಹೆಗಡೆ, “ನಾನು ಅವರ ಪ್ರಶ್ನೆಗಳಿಗೆ ಖಂಡಿತಾ ಉತ್ತರಿಸುತ್ತೇನೆ, ಆದರೆ ಅದಕ್ಕಿಂತ ಮುಂಚೆ ಅವರು ತಮ್ಮ ಸಾಧನೆಗಳೊಂದಿಗೆ ಯಾರ ಜತೆಗಿದ್ದಾರೆಂಬುದನ್ನು ಬಹಿರಂಗ ಪಡಿಸಬಹುದೇ?, ಮುಸ್ಲಿಂ ಮಹಿಳೆಯ ಹಿಂದೆ ಓಡಿದ ವ್ಯಕ್ತಿಯೆಂಬುದಷ್ಟೇ ನನಗೆ ಅವರ ಬಗ್ಗೆ ಗೊತ್ತಿರುವುದು'' ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಉತ್ತರಿಸಿದ ದಿನೇಶ್ ಗುಂಡೂರಾವ್, “ವೈಯಕ್ತಿಕ ವಿಚಾರಗಳನ್ನು ಎಳೆದು ತರುವಷ್ಟು ಕೆಳ ಮಟ್ಟಕ್ಕೆ ಅನಂತ್ ಕುಮಾರ್ ಇಳಿದಿರುವುದನ್ನು ಕಂಡು ಬೇಸರವಾಗುತ್ತಿದೆ. ಪ್ರಾಯಶಃ ಅವರಲ್ಲಿನ ಸಂಸ್ಕೃತಿಯ ಕೊರತೆ ಇದಕ್ಕೆ ಕಾರಣವಾಗಿರಬಹುದು. ಅವರು ನಮ್ಮ ಹಿಂದು ಗ್ರಂಥಗಳಿಂದ ಕಲಿತಿಲ್ಲವೆಂದು ಅನಿಸುತ್ತದೆ. ಸಮಯ ಮೀರುತ್ತಿದೆ, ಆದರೂ ಈಗಲೇ ಅವರು ಪ್ರಯತ್ನಿಸಿ ಇನ್ನಷ್ಟು ಹೆಚ್ಚು ಗೌರವಾನ್ವಿತ ವ್ಯಕ್ತಿಯಾಗಬಹುದು'' ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News