ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ: ಎಚ್.ಡಿ.ಕುಮಾರಸ್ವಾಮಿ

Update: 2019-01-28 14:15 GMT

ಬೆಂಗಳೂರು, ಜ.28: ಕಾಂಗ್ರೆಸ್‌ನ ಶಾಸಕರು ತಮ್ಮ ವರ್ತನೆಗಳನ್ನು ತಿದ್ಧಿಕೊಳ್ಳಬೇಕು. ಅದು ಮಿತಿಮೀರಿದರೆ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಗುಡುಗಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪಕ್ಷಪಾತ ಧೋರಣೆ ತೋರುತ್ತಿದ್ದು, ಅಭಿವೃದ್ಧಿ ಆಗಿಲ್ಲ ಎಂದು ಪದೇಪದೇ ಕಾಂಗ್ರೆಸ್‌ನ ಕೆಲ ಸಚಿವರು ಹಾಗೂ ಶಾಸಕರು ಬಹಿರಂಗ ಹೇಳಿಕೆ ನೀಡುತ್ತಿರುವುದರಿಂದ ಅಸಮಾಧಾನಗೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಸೋಮವಾರ ನಗರದ ಮಲ್ಲೇಶ್ವರದ ಮಂತ್ರಿ ಸ್ಕ್ವೇರ್ ಮೆಟ್ರೋ ನಿಲ್ದಾಣದ ಬಳಿ ಹಸಿರು ಮಾರ್ಗದ ಆರು ಬೋಗಿಗಳ ಮೆಟ್ರೋ ರೈಲಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿ ಕುರ್ಚಿಗೆ ಅಂಟಿಕೊಂಡು ಕೂರುವ ಜಾಯಮಾನದವನಲ್ಲ. ಶಾಸಕರಿಗೆ ನನ್ನ ಕಾರ್ಯವೈಖರಿ ಇಷ್ಟವಿಲ್ಲದಿದ್ದರೆ ಸಿಎಂ ಸ್ಥಾನ ಬಿಡಲು ಸಿದ್ಧನಿದ್ದೇನೆ ಎನ್ನುವ ಮೂಲಕ ಸಮ್ಮಿಶ್ರ ಸರಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸಂಗತಿಯನ್ನು ಹೊರ ಹಾಕಿದ್ದಾರೆ.

ರಾಜ್ಯದಲ್ಲಿ ಉತ್ತಮ ಆಡಳಿತ ನೀಡಲು ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರಕಾರ ಬದ್ಧವಾಗಿದೆ. ಅಧಿಕಾರಕ್ಕೆ ಬಂದ ಕಳೆದ 7 ತಿಂಗಳಲ್ಲಿ ಹೊರವರ್ತುಲ ರಸ್ತೆ ನಿರ್ಮಾಣಕ್ಕೆ ಚಾಲನೆ, ಉಪನಗರ ರೈಲು ಸಂಚಾರಕ್ಕೆ ಒಪ್ಪಿಗೆ ಸೇರಿದಂತೆ ಬೆಂಗಳೂರು ಅಭಿವೃದ್ಧಿಗೆ 1 ಲಕ್ಷ ಕೋಟಿ ರೂ.ಗೆ ಹೆಚ್ಚಿನ ಬಂಡವಾಳ ಹೂಡಿಕೆ ಮಾಡಲಾಗಿದೆ. ಆದರೂ, ಸಮ್ಮಿಶ್ರ ಸರಕಾರದ ವಿರುದ್ಧವಾಗಿ ಶಾಸಕರು ನೀಡುತ್ತಿರುವ ಹೇಳಿಕೆಗಳು ಪ್ರಶ್ನಾತೀತವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ತಮ್ಮ ಶಾಸಕರನ್ನು ನಿಯಂತ್ರಣದಲ್ಲಿಡಬೇಕು. ನಮ್ಮದು ಮೈತ್ರಿ ಸರಕಾರವಾಗಿದ್ದು, ಮೈತ್ರಿ ಧರ್ಮ ಪಾಲಿಸುವ ಕಡೆಗೆ ನಾಯಕರು ಗಮನ ಹರಿಸಬೇಕು. ತಮ್ಮ ಶಾಸಕರು ನೀಡುವ ಹೇಳಿಕೆಗಳಿಂದ ನನಗೇನು ಸಮಸ್ಯೆಯಾಗುವುದಿಲ್ಲ. ಇದನ್ನು ಕಾಂಗ್ರೆಸ್‌ನ ನಾಯಕರು ತಿಳಿಯಬೇಕು. ಇವರ ಹೇಳಿಕೆಗಳು ಸರಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದ್ದು, ಅದನ್ನು ನಾನು ಸಹಿಸುವುದಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ಶಾಸಕರ ವರ್ತನೆ ಸಹಿಸಲು ಸಾಧ್ಯವಾಗುತ್ತಿಲ್ಲ. ನನಗೂ ಒಂದಷ್ಟು ಇತಿಮಿತಿಯಿದೆ. ಇದೇ ರೀತಿ ಮುಂದುವರಿದರೆ ನಾನೂ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವೆ. ಕಾಂಗ್ರೆಸ್ ನಾಯಕರು ತಮ್ಮ ತಪ್ಪುಗಳನ್ನು ಅರ್ಥೈಸಿಕೊಂಡು ಸರಿಯಾದ ದಾರಿಯಲ್ಲಿ ಮುನ್ನಡೆಯಬೇಕು. ಸರಕಾರಕ್ಕೆ ಮುಜುಗರ ತರುವಂತಹ ಹೇಳಿಕೆಗಳನ್ನು ಪದೇ ಪದೇ ನೀಡಿದರೆ ಸಹಿಸಲ್ಲ ಎಂದು ಕಾಂಗ್ರೆಸ್‌ನ ನಾಯಕರಿಗೆ ಸಿಎಂ ಎಚ್ಚರಿಕೆ ನೀಡಿದರು. ಸಮ್ಮಿಶ್ರ ಸರಕಾರದಲ್ಲಿ ನಾನು, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹಾಗೂ ಸಚಿವರ ತಂಡ ಉತ್ತಮವಾಗಿ ಕೆಲಸ ಮಾಡುತ್ತಿದ್ದೇವೆ. ಅಧಿಕಾರಕ್ಕೆ ಬಂದಾಗಿನಿಂದಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಆದರೂ, ಯಾಕೆ ಈ ರೀತಿ ಮಾತನಾಡುತ್ತಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ. ಇದನ್ನು ಇಲ್ಲಿಗೆ ನಿಲ್ಲಿಸಬೇಕು. ಇಲ್ಲದಿದ್ದರೆ ಏನು ಮಾಡಬೇಕು ಎಂದು ನನಗೆ ಗೊತ್ತು ಎಂದು ಕುಮಾರಸ್ವಾಮಿ ಹೇಳಿದರು. ಕಾಂಗ್ರೆಸ್ ಶಾಸಕರ ವರ್ತನೆಗಳ ಬಗ್ಗೆ ನಮ್ಮ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ ಒಂದು ತೀರ್ಮಾನಕ್ಕೆ ಬರುತ್ತೇವೆ ಎಂದು ಕಾಂಗ್ರೆಸ್ ನಾಯಕರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

ರವಿವಾರ ನಡೆದ ಕನಕಭವನ ಉದ್ಘಾಟನಾ ಸಮಾರಂಭದಲ್ಲಿ ಸೋಮಶೇಖರ್ ಸಿದ್ದರಾಮಯ್ಯನೇ ನಮ್ಮ ಮುಖ್ಯಮಂತ್ರಿ. ಸಮ್ಮಿಶ್ರ ಸರಕಾರದಲ್ಲಿ ಏನೂ ಅಭಿವೃದ್ಧಿ ಆಗುತ್ತಿಲ್ಲ ಎಂದು ಆರೋಪಿಸಿದ್ದರು. ಅಲ್ಲದೆ, ಸಿದ್ದರಾಮಯ್ಯರನ್ನು ಹೊಗಳಿ, ಕುಮಾರಸ್ವಾಮಿಯ ಕಾರ್ಯವೈಖರಿ ಬಗ್ಗೆ ಟೀಕೆ ಮಾಡಿದ್ದರು. ಸೋಮಶೇಖರ್‌ರ ವರ್ತನೆ ಮುಖ್ಯಮಂತ್ರಿಯ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ, ಕುಮಾರಸ್ವಾಮಿ ಕಾಂಗ್ರೆಸ್ ಶಾಸಕರ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಅಧಿಕಾರ ಬಿಟ್ಟುಕೊಡಲು ಸಿದ್ಧ ಎಂದು ಗುಡುಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News