ಭಾರತದ ಗಣರಾಜ್ಯ ವ್ಯವಸ್ಥೆ ಹೀಗೇಕಾಯಿತು?

Update: 2019-01-28 19:00 GMT

ಅಂದೆಲ್ಲಾ ಕಾರ್ಪೊರೇಟ್ ಕೂಟಗಳು ಹಿಂಬಾಗಿಲಿನಿಂದ ಸರಕಾರಗಳನ್ನು ನಿಯಂತ್ರಿಸುತ್ತಿದ್ದರೆ, ಇಂದು ಈ ಕೂಟಗಳು ನೇರವಾಗಿಯೇ ಸರಕಾರಗಳನ್ನು, ಪ್ರಧಾನಿಗಳನ್ನು ತಾವೇ ನೇಮಿಸುವ ಮಟ್ಟದಲ್ಲಿ, ಇಡೀ ರಾಜಕೀಯ ಪಕ್ಷಗಳನ್ನೇ ಖರೀದಿಸುವ, ಬಯಸಿದವರನ್ನು ಚುನಾಯಿಸಿಕೊಳ್ಳುವ ಮಟ್ಟದಲ್ಲಿ ತಮ್ಮ ನಿಯಂತ್ರಣದಲ್ಲಿ ಆಡಳಿತವನ್ನು ಬಿಗಿಯಾಗಿಸಿಕೊಂಡಿವೆ. ಸಂವಿಧಾನ ಹಾಗೂ ಸಂಸತ್ತುಗಳನ್ನು ಈ ಶಕ್ತಿಗಳು ಸಾರಾ ಸಗಟಾಗಿ ಬದಿಗೆ ಸರಿಸಿರುವ ಅನುಭವ ಇಂದಿನ ಜನಸಾಮಾನ್ಯರದ್ದಾಗಿದೆ.

ಮತ್ತೊಂದು ಗಣ ರಾಜ್ಯೋತ್ಸವ ಕಳೆದು ಹೋಯಿತು. ಇದು ಭಾರತದ ಎಪ್ಪತ್ತನೇ ಗಣರಾಜ್ಯೋತ್ಸವ. 1935ರಲ್ಲಿ ಬ್ರಿಟಿಷ್ ಆಡಳಿತ ಹೇರಿದ್ದ ಗವರ್ನ್ ಮೆಂಟ್ ಆಫ್ ಇಂಡಿಯಾ ಆ್ಯಕ್ಟ್ ಬದಲಿಗೆ 1950ರ ಜನವರಿ 26ರಲ್ಲಿ ಲಿಖಿತ ಸಂವಿಧಾನ ಆಡಳಿತ ಸೂತ್ರವಾಗಿ ಭಾರತದಲ್ಲಿ ಜಾರಿಗೆ ಬಂದಿತು. ಅಂದರೆ ಭಾರತ ದೇಶ ಲಿಖಿತ ಸಂವಿಧಾನವನ್ನು ಅಂಗೀಕರಿಸಿ ಒಕ್ಕೂಟ ವ್ಯವಸ್ಥೆಯ ಗಣರಾಜ್ಯವಾಗಿ ಎಪ್ಪತ್ತು ವರ್ಷಗಳು ದಾಟಿ ಹೋದವು. ಈ ಎಪ್ಪತ್ತು ವರ್ಷಗಳಲ್ಲಿ ಭಾರತ ಹಾಗೂ ಅದರ ಒಕ್ಕೂಟ ಗಣತಂತ್ರ ಹೇಗಿದೆ ಎಂದು ನಾವು ನೋಡಹೋದರೆ ಅದರ ಸತ್ಯಾಸತ್ಯತೆಗಳು ಅರ್ಥವಾಗತೊಡಗುತ್ತವೆ. ಎಪ್ಪತ್ತನೇ ಗಣರಾಜ್ಯೋತ್ಸವವನ್ನು ಸರಕಾರಿ ಅಂಗ ಸಂಸ್ಥೆಗಳು ದೇಶಾದ್ಯಂತ ಆಚರಿಸಿ ರಾಷ್ಟ್ರಪತಿ, ಪ್ರಧಾನಿಯಾದಿಯಾಗಿ, ರಾಜ್ಯಪಾಲರು, ಮುಖ್ಯಮಂತ್ರಿಗಳು ಮಂತ್ರಿಗಳವರೆಗೆ ಗೌರವ ವಂದನೆ ಸ್ವೀಕರಿಸಿ ಭಾಷಣಗಳನ್ನು ಮಾಡಿದರು. ಅವೆಲ್ಲವನ್ನೂ ಜನಸಾಮಾನ್ಯರು ಈ ಎಪ್ಪತ್ತು ವರ್ಷಗಳಿಂದಲೂ ನೋಡುತ್ತಲೇ ಬಂದಿದ್ದಾರೆ. ವಾಸ್ತವ ಏನೆಂದರೆ ಇದು ಜನಸಾಮಾನ್ಯರ ಸ್ವಯಂ ಪಾಲ್ಗೊಳ್ಳುವಿಕೆಯ ಆಚರಣೆಯಾಗಿ ಈಗಲೂ ಕೂಡ ಮಾರ್ಪಾಡಾಗದೇ ಇರುವುದು. ಯಾಕೆಂದರೆ ಬಹುಸಂಖ್ಯಾತ ಜನಸಾಮಾನ್ಯರ ಜೀವನದಲ್ಲಿ ಸಂವಿಧಾನದ ಆಶಯಗಳು ಅಂತ ಹೇಳಲ್ಪಟ್ಟ ಅಂಶಗಳು ಅನುಭವಕ್ಕೆ ಬಾರದೇ ಹೋಗಿರುವ ದುರಂತವಿದೆ ಇಲ್ಲಿ. ಅದು ಸ್ವಾತಂತ್ರ್ಯ ಇರಬಹುದು ಸಮಾನತೆ ಇರಬಹುದು, ಸಹೋದರತೆ, ಸಹಬಾಳ್ವೆ ಇರಬಹುದು, ರಾಜ್ಯಗಳ ಸ್ವಾಯತ್ತತೆಯಿರಬಹುದು, ಬಹುತ್ವವಿರಬಹುದು, ವಿವಿಧತೆಯಲ್ಲಿ ಏಕತೆ ಇರಬಹುದು ಹೀಗೆ ಪಟ್ಟಿ ಮಾಡಬಹುದು. ಸ್ವಾತಂತ್ರ್ಯದ ವಿಚಾರಕ್ಕೆ ಬಂದರೆ ಇಂದು ನಮ್ಮ ದೇಶದ ಮೇಲಿನ ಹಿಡಿತ ಬಹುರಾಷ್ಟ್ರೀಯ ಕಾರ್ಪೊರೇಟು ಕೂಟ ಹಾಗೂ ದೊಡ್ಡ ಆಸ್ತಿವಂತರ ಕೂಟಗಳ ಕೈಯಲ್ಲಿದೆ. ಅಂದು ಒಂದು ಈಸ್ಟ್ ಇಂಡಿಯಾ ಕಂಪೆನಿಯ ಜಾಗದಲ್ಲಿ ಇಂದು ಹಲವು ರಾಷ್ಟ್ರಗಳ ಜಾಗತಿಕ ಕಾರ್ಪೊರೇಟ್ ಕಂಪೆನಿಗಳಿವೆ. ಅವುಗಳು ನಮ್ಮ ದೇಶದ ಎಲ್ಲಾ ಕ್ಷೇತ್ರಗಳ ಮೇಲೂ ಹಿಡಿತ ಸಾಧಿಸಿ ತಮ್ಮ ಅಗತ್ಯಗಳಿಗೆ ತಕ್ಕಂತೆ ತೀರ್ಮಾನಗಳನ್ನು ಜನಸಾಮಾನ್ಯರ ಮೇಲೆ ಹೇರುತ್ತಾ ಬಂದಿವೆ. ನಮ್ಮ ಪ್ರತಿನಿಧಿಗಳೆಂದು ಹೇಳಿಕೊಳ್ಳುವ ಸರಕಾರಗಳು ಮತ್ತವುಗಳ ಯಂತ್ರಾಂಗಗಳು ಈ ಕೂಟಗಳ ಬಾಲಂಗೋಚಿಗಳಂತೆ ಕಾರ್ಯನಿರ್ವಹಿಸುತ್ತಿರುವುದು ಬಹುತೇಕ ಜನಸಾಮಾನ್ಯರ ಅನುಭವವಾಗಿದೆ. ಇದು ಅಂದಿನ ಪಂಚವಾರ್ಷಿಕ ಯೋಜನೆಗಳು, ಬ್ಯಾಂಕ್ ರಾಷ್ಟ್ರೀಕರಣಗಳಿಂದ ಹಿಡಿದು ಇಂದಿನ ನೋಟು ಆಮಾನ್ಯೀಕರಣ, ಬ್ಯಾಂಕ್ ಖಾಸಗೀಕರಣಗಳವರೆಗೆ ನಮಗೆ ಕಾಣಿಸುವ ವಿಚಾರ. ಅಂದಿನದನ್ನು ಒಳಹೊಕ್ಕು ನೋಡಿದಾಗ ಮಾತ್ರ ಅರ್ಥವಾಗುವಂತಿದ್ದರೆ ಇಂದಿನದು ಮೇಲ್ನೋಟದಲ್ಲೇ ಅರ್ಥವಾಗುವಂತೆ ಇದೆ. ಅಂದಿನದನ್ನು ಅರ್ಥ ಮಾಡಿಕೊಳ್ಳಬೇಕಾದರೆ ಒಂದಷ್ಟು ಅಧ್ಯಯನಗಳ ಆವಶ್ಯಕತೆಯಿದ್ದರೆ ಇಂದಿನದನ್ನು ಅರ್ಥಮಾಡಿಕೊಳ್ಳಲು ಅಷ್ಟೊಂದು ಅಧ್ಯಯನದ ಆವಶ್ಯಕತೆಯಿಲ್ಲ ಎನ್ನುವುದಷ್ಟೇ ಇರುವ ಅಲ್ಪಸ್ವಲ್ಪವ್ಯತ್ಯಾಸ. ಇದು ಇತ್ತೀಚಿನ ರಫೇಲ್, ಫಸಲ್ ಬಿಮಾ, ಬ್ಯಾಂಕ್‌ಗಳ ವಿಲೀನೀಕರಣ, ಜಿಯೋ ಮೊಬೈಲ್ ಜಾಲ ವಿಸ್ತರಿಸಲು ಬಿಎಸ್ಸೆನ್ನೆಲ್‌ನಂತಹ ಸಾರ್ವಜನಿಕ ಸಂಸ್ಥೆಗಳನ್ನು ನಾಶಗೊಳಿಸುವಂತಹ ಹಗರಣಗಳಿಂದಲೂ ಸ್ಪಷ್ಟವಾಗುವ ವಿಚಾರ.

 ಅಂದೆಲ್ಲಾ ಈ ಕೂಟಗಳು ಹಿಂಬಾಗಿಲಿನಿಂದ ಸರಕಾರಗಳನ್ನು ನಿಯಂತ್ರಿಸುತ್ತಿದ್ದರೆ, ಇಂದು ಈ ಕೂಟಗಳು ನೇರವಾಗಿಯೇ ಸರಕಾರಗಳನ್ನು, ಪ್ರಧಾನಿಗಳನ್ನು ತಾವೇ ನೇಮಿಸುವ ಮಟ್ಟದಲ್ಲಿ, ಇಡೀ ರಾಜಕೀಯ ಪಕ್ಷಗಳನ್ನೇ ಖರೀದಿಸುವ, ಬಯಸಿದವರನ್ನು ಚುನಾಯಿಸಿಕೊಳ್ಳುವ ಮಟ್ಟದಲ್ಲಿ ತಮ್ಮ ನಿಯಂತ್ರಣದಲ್ಲಿ ಆಡಳಿತವನ್ನು ಬಿಗಿಯಾಗಿಸಿಕೊಂಡಿವೆ. ಸಂವಿಧಾನ ಹಾಗೂ ಸಂಸತ್ತುಗಳನ್ನು ಈ ಶಕ್ತಿಗಳು ಸಾರಾ ಸಗಟಾಗಿ ಬದಿಗೆ ಸರಿಸಿರುವ ಅನುಭವ ಇಂದಿನ ಜನಸಾಮಾನ್ಯರದ್ದಾಗಿದೆ. ಯಾಕೆಂದರೆ ಸಂಸತ್ತಿನಲ್ಲಿ ಚರ್ಚೆ ನಡೆಸಲೂ ಕೂಡ ಅವಕಾಶ ಇಲ್ಲದಿರುವಂತಹ ಸ್ಥಿತಿ ಇರುವುದನ್ನು ಹಲವು ಸಂಸತ್ ಸದಸ್ಯರೇ ಖಾಸಗಿಯಾಗಿ ಹೇಳುತ್ತಾರೆಂದರೆ ನಮ್ಮ ಸ್ವತಂತ್ರ್ಯ ಗಣರಾಜ್ಯದ ಇಂದಿನ ಮಟ್ಟ ಏನು ಅನ್ನುವುದನ್ನು ನಾವು ಗ್ರಹಿಸಬಹುದು. ವಿಶ್ವ ವ್ಯಾಪಾರಿ ಸಂಸ್ಥೆಯ ಒಪ್ಪಂದಗಳಿಗೆ ಸಹಿ ಹಾಕುವ ವಿಚಾರ ಇರಬಹುದು, ಹತ್ತುಹಲವು ಅಂತರ್ ರಾಷ್ಟ್ರೀಯ ಒಪ್ಪಂದಗಳಿಗೆ ಸಹಿಹಾಕುವ ವಿಚಾರಗಳಿರಬಹುದು, ಆಧಾರ್ ಕಾರ್ಡಿನ ಹೇರಿಕೆ ಇರಬಹುದು ಹೀಗೆ ನಾವು ನೋಡಿದಾಗ ಇಲ್ಲಿ ಸಂವಿಧಾನಾತ್ಮಕ ಸಂಸ್ಥೆಗಳನ್ನು ಅವಗಣನೆ ಮಾಡಿರುವ ವಿಚಾರ ಮುಖಕ್ಕೆ ರಾಚುವಂತೆ ಕಾಣಿಸುತ್ತವೆ. ಇನ್ನು ಆರ್ಥಿಕ ಸಮಾನತೆಯೊಂದಿಗೆ ಜಾತಿ ಸಮಾನತೆ, ಲಿಂಗಸಮಾನತೆ ಸಾಧಿಸದೇ ಸ್ವಾತಂತ್ರ್ಯ ಎನ್ನುವುದು ಮರೀಚಿಕೆ ಮಾತ್ರವೆನ್ನುವುದನ್ನು ನಾವು ಗಮನಿಸಬೇಕು. ಇದನ್ನು ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಾ. ಅಂಬೇಡ್ಕರ್ ಸೇರಿದಂತೆ ಹಲವರು ಈಗಾಗಲೇ ಹೇಳಿದ್ದಾರೆ. ಈ ವಿಚಾರದಲ್ಲಿ ನಮ್ಮ ದೇಶ ಒಟ್ಟಾರೆ ಹೋಲಿಕೆಯಲ್ಲಿ ಈಗ ಮತ್ತಷ್ಟು ಹಿಂದಕ್ಕೆ ಹೋಗಿದೆಯೆನ್ನಬಹುದು. ಶೇ. 1ರಷ್ಟಿರುವ ಜನ ದೇಶದ ಶೇ. 70ಕ್ಕೂ ಹೆಚ್ಚು ಆಸ್ತಿಪಾಸ್ತಿಗಳ ಮೇಲೆ ಹಿಡಿತ ಸಾಧಿಸಿರುವ ಬಗ್ಗೆ ಬರುತ್ತಿರುವ ವರದಿಗಳು ಇದನ್ನು ದೃಢಪಡಿಸುತ್ತವೆ. ಕೇವಲ 9 ಕಾರ್ಪೊರೇಟುಗಳು ದೇಶದ ಶೇ.50ಕ್ಕೂ ಹೆಚ್ಚು ಸಂಪತ್ತಿನ ಮೇಲೆ ಹಿಡಿತ ಸಾಧಿಸಿವೆ ಎಂದಾಗ ಆರ್ಥಿಕ ಅಸಮಾನತೆಯ ಪರಿಸ್ಥಿತಿ ಯಾವ ಹಂತ ತಲುಪಿದೆ ಎನ್ನುವುದನ್ನು ನೋಡಬಹುದು. ದೇಶದ ಪ್ರಥಮ ಪ್ರಜೆಯೆಂದು ಹೇಳಿಕೊಳ್ಳುವ ರಾಷ್ಟ್ರಪತಿಗಳ, ದೇಶದ ಆಡಳಿತಾತ್ಮಕ ಮುಖ್ಯಸ್ಥರೆಂದು ಹೇಳಲಾಗಿರುವ ಪ್ರಧಾನಿಗಳ ಹೆಗಲ ಮೇಲೆ ಕಾರ್ಪೊರೇಟು ಮುಖ್ಯಸ್ಥರುಗಳು ತಮ್ಮ ಕೈಗಳನ್ನು ಹಾಕಿ ಬಹಿರಂಗವಾಗಿ ಸಂಭಾಷಣೆ ನಡೆಸುವ, ನಡೆದಾಡುವ ಚಿತ್ರಗಳು ಇಂದು ಸಾಮಾನ್ಯವಾಗಿ ಹೋಗಿದೆ. ಅವರ ಶರೀರ ಭಾಷೆಗಳಲ್ಲಿ ದಾರ್ಷ್ಟ್ಯಗಳು ಎದ್ದು ಕಾಣುವಂತಿರುತ್ತದೆ. ಜಾತಿ, ಕೋಮು, ಲಿಂಗ, ಪ್ರಾದೇಶಿಕ ಅಸಮಾನತೆಗಳ ಮಟ್ಟ ಒಟ್ಟು ಅನುಪಾತದ ಸಾರಂಶದಲ್ಲಿ ನೋಡಿದಾಗ ಇಂದು ಅದರ ವಿಕೃತತೆಗಳು ಹಾದಿ ಬೀದಿ ಹಳ್ಳಿ ಕೇರಿಗಳಲ್ಲಿ ಕೇಕೇ ಹಾಕಿ ಆರ್ಭಟಗೈಯುತ್ತಿರುವ ಅನುಭವವಾಗುತ್ತಿವೆ. ಆರ್ಥಿಕ ಹಾಗೂ ಸಾಮಾಜಿಕ ಬಿಕ್ಕಟ್ಟುಗಳು ತೀವ್ರ ಸ್ವರೂಪ ಪಡೆದುಕೊಂಡಿರುವ ಈ ಸಂದರ್ಭದಲ್ಲಿ ಈ ಅಸಮಾನತೆಯ ಕರಾಳತೆ ಹಾಗೂ ವಿಕೃತತೆಗಳು ವಿಜೃಂಭಿಸುವಂತೆ ನೋಡಿಕೊಂಡು ಜನಸಾಮಾನ್ಯರ ಗಮನ ಅವುಗಳ ಮೇಲೆ ಮಾತ್ರ ಕೇಂದ್ರೀಕರಣಗೊಳ್ಳುವಂತೆ ಮಾಡಲಾಗುತ್ತಿದೆ. ಇಂತಹ ಬೃಹತ್ ಷಡ್ಯಂತ್ರಗಳನ್ನು ಜಾರಿಗೊಳಿಸುತ್ತಿರುವುದನ್ನು ಅರ್ಥ ಮಾಡಿಕೊಂಡವರು ಬಹಳ ಕಡಿಮೆ ಎನ್ನಬಹುದು. ಹಾಗಾಗಿ ದೇಗುಲ ಪ್ರವೇಶ, ಮಂದಿರ ನಿರ್ಮಾಣ, ಗೋಮಾಂಸ, ಗೋ ಮೂತ್ರ, ಗಂಗಾ ನದಿ, ಕುಂಭ ಮೇಳ ಇತ್ಯಾದಿಗಳ ಸುತ್ತ ಪರವಿರೋಧಗಳ ಚರ್ಚೆ ಪ್ರತಿಭಟನೆಗಳಲ್ಲಿ ಜನಸಾಮಾನ್ಯರನ್ನು ಮುಳುಗಿಸಿಡುವ ಕಾರ್ಯ ನಡೆಯುತ್ತಿದೆ. ಹಾಗೆ ಮಾಡುವ ಮೂಲಕ ಜನಸಾಮಾನ್ಯರ ಸಾವು ಬದುಕಿನ ನೂರೆಂಟು ರಾಜಕೀಯಾರ್ಥಿಕ ಹಾಗೂ ಸಾಮಾಜಿಕ ಪ್ರಶ್ನೆಗಳ ಸುತ್ತಾ ಜನಹೋರಾಟಗಳು ಸಿಡಿಯದಂತೆ ನೋಡಿಕೊಳ್ಳಲಾಗುತ್ತಿದೆ. ಅದೇ ವೇಳೆಯಲ್ಲಿ ಈ ಎಲ್ಲಾ ಮುಸುಕು ಚಟುವಟಿಕೆಗಳ ಗುರಾಣಿಗಳನ್ನು ಅಡ್ಡಹಿಡಿದು ಸಾಮಾಜಿಕ ಹೋರಾಟಗಾರರನ್ನು, ಜನಪರ ವ್ಯಕ್ತಿ ಸಂಘಟನೆಗಳನ್ನು ಹತ್ತು ಹಲವು ರೀತಿಗಳಲ್ಲಿ ದಮನಿಸಿಡುವ, ಸುಳ್ಳು ಕೇಸುಗಳಡಿ ಕಾರಾಗೃಹಗಳಲ್ಲಿ ಕೊಳೆಹಾಕುವ, ಸುಳ್ಳು ಎನ್‌ಕೌಂಟರುಗಳಲ್ಲಿ ಕಗ್ಗೊಲೆ ಮಾಡುವ, ಹತ್ತು ಹಲವು ಜನ ವಿರೋಧಿ ನೀತಿಗಳನ್ನು ಜಾರಿಗೊಳಿಸುವ, ಸಂವಿಧಾನ ಹಾಗೂ ಸಾಂವಿಧಾನಿಕ ಸಂಸ್ಥೆಗಳನ್ನು ನಗಣ್ಯಗೊಳಿಸುವ, ದಲಿತ ದಮನಿತರಿಗೆ ಇದ್ದ ಅಲ್ಪಸ್ವಲ್ಪಮೀಸಲಾತಿಯಂತಹ ರಕ್ಷಣೆಗಳನ್ನು ಪ್ರತ್ಯಕ್ಷ ಹಾಗೂ ಪರೋಕ್ಷ ರೀತಿಗಳಲ್ಲಿ ನಾಜೂಕಿನಿಂದ ಅಸ್ತಿತ್ವರಹಿತಗೊಳಿಸುವ ಹೀಗೆ ಹಿಂದೆ ಇದ್ದ ಒಂದು ಮಟ್ಟದ ರಕ್ಷಣಾತ್ಮಕ ಚೌಕಟ್ಟುಗಳು ಹಾಗೂ ವಿಧಿ ವಿಧಾನಗಳ ಅಸ್ತಿತ್ವಗಳನ್ನೇ ನಿರ್ನಾಮ ಮಾಡುತ್ತಿರುವ ಕಾರ್ಯಗಳು ಇಂದು ಹೆಚ್ಚುಹೆಚ್ಚು ಬಿರುಸುಗೊಳ್ಳುತ್ತಿರುವುದನ್ನು ನಾವು ನೊಡುತ್ತಿದ್ದೇವೆ. ಇವೆಲ್ಲವೂ ಅಸಮಾನತೆಗಳನ್ನು ಮತ್ತಷ್ಟು ಹೆಚ್ಚುಗೊಳಿಸುವ ಕಾರ್ಯಗಳೇ ಆಗಿವೆ. ‘‘ಮೊದಲು ಕೂಲಿ ಮಾಡುತ್ತಿದ್ದವರು ದೂರವಾಣಿ ಹೊಂದಿರಲಿಲ್ಲ, ಇಂದು ಕೂಲಿ ಮಾಡುವವರು ಮೊಬೈಲ್‌ಗಳನ್ನು ಹೊಂದಿದ್ದಾರೆ ಹಾಗಾಗಿ ಸಮಾನತೆಯಲ್ಲಿ ಏರಿಕೆಯಾಗಿದೆ’’ ಎಂದೆಲ್ಲಾ ವಾದ ಮಾಡುವ ಒಂದು ದೊಡ್ಡ ಜನಸಮುದಾಯವಿದೆ. ಆದರೆ ಅದು ಸಮಾನತೆಯ ಲಕ್ಷಣವಲ್ಲ ಕೂಲಿಕಾರನ ಶ್ರಮವನ್ನು ಸಮರ್ಥವಾಗಿ ಮತ್ತು ನಾಜೂಕಿನಿಂದ ಮತ್ತಷ್ಟು ಶೋಷಿಸುವ, ಆತನ ಚಿಂತನೆಗಳನ್ನು ದಿಕ್ಕುತಪ್ಪಿಸಿ ನಿಯಂತ್ರಿಸುವ ಸಾಧನವಾಗಿದೆ ಎನ್ನುವ ಅಂಶವನ್ನು ಗಮನಿಸದೇ ಹೋಗುತ್ತಾರೆ. ಸಂಪತ್ತಿನ ಹಂಚಿಕೆಯ ಅನುಪಾತದ ಈಗಿನ ತೀವ್ರ ಕುಸಿತವನ್ನು ಪರಿಗಣಿಸಲು ಅವರು ಹೋಗುವುದಿಲ್ಲ. ಸಮಾನತೆಯ ವ್ಯಾಖ್ಯಾನವನ್ನು ಹೆಂಚಿನ ಮನೆ, ಮೊಬೈಲು, ಟೀವಿ, ಮೋಟಾರು ಸೈಕಲುಗಳಂತಹ ಸಾಧನಗಳ ಬಳಕೆಗಳ ಹೆಚ್ಚಳಗಳನ್ನು ಹಗಲುಗುರುಡುತನದಿಂದ ಗ್ರಹಿಸಲು ಹೋಗುವುದರ ಪರಿಣಾಮವಿದು. ಈ ವಾದಿಗಳ ವಲಯದಲ್ಲಿ ಒಂದು ದೊಡ್ಡ ಬುದ್ಧಿಜೀವಿ ವರ್ಗವೂ ಸೇರಿಕೊಂಡಿದೆ. ಮಧ್ಯಮ ವರ್ಗ ಇಂದು ಅನುಭವಿಸುತ್ತಿರುವ ಅನುಭೋಗಿವಸ್ತುಗಳ ಸಂಖ್ಯೆಯಲ್ಲಿನ ಆಯ್ಕೆಯ ಅವಕಾಶ ಮತ್ತು ಏರಿಕೆಯಿಂದ ಈ ವರ್ಗ ಉಬ್ಬಿಹೋಗಿ ಮೈಮರೆತು ನಿಂತಿರುವುದರ ಪರಿಣಾಮ ಇದಾಗಿದೆ.

ಭಾರತ ಒಂದು ಒಕ್ಕೂಟ ವ್ಯವಸ್ಥೆಯನ್ನು ಹೊಂದಿರುವ ಸ್ವತಂತ್ರ ಗಣರಾಜ್ಯವೆಂದು ಸಾರಿಕೊಂಡು ಬಂದಿದ್ದರೂ ನೈಜ ಅರ್ಥದಲ್ಲಿ ಅದನ್ನು ಮೊದಲಿನಿಂದಲೂ ಸಾಕಾರಗೊಳಿಸದೇ ಮತ್ತಷ್ಟು ಕುಬ್ಜಗೊಳಿಸುತ್ತಾ ಬಂದು ಈಗ ಅದು ಸಂಪೂರ್ಣ ಕೇಂದ್ರೀಕೃತ ಆಡಳಿತ ವ್ಯವಸ್ಥೆಯ ಸನಿಹ ಬಂದು ನಿಂತಾಗಿದೆ. ಸಂವಿಧಾನದ ಹೆಸರಿನಲ್ಲೇ, ಅದನ್ನು ಬಳಸಿಕೊಂಡೇ ಇದನ್ನು ಸಾಧಿಸಲಾಗಿದೆ ಎನ್ನುವ ಅಂಶವನ್ನು ಮರೆಯಕೂಡದು. ಸಂವಿಧಾನದಲ್ಲಿ ಅಡಕವಾಗಿರುವ ರಾಜ್ಯಗಳಿಗಿರುವ ಸ್ವಾಯತ್ತ ನಿರ್ಣಯಾಧಿಕಾರಗಳನ್ನು ಕೇಂದ್ರ ಸರಕಾರ ಭಾವಿಸಿದಲ್ಲಿ ಕಿತ್ತುಕೊಳ್ಳುವ ವಿಧಿಗಳೂ ಕೂಡ ಅದೇ ಸಂವಿಧಾನದಲ್ಲಿ ಮೊದಲಿನಿಂದಲೂ ಅಡಕಗೊಂಡಿವೆ ಎನ್ನುವುದನ್ನೂ ನಾವು ಗಂಭೀರವಾಗಿ ಗಮನಿಸಬೇಕು.

ರಾಜ್ಯ ಹಾಗೂ ಮತ್ತದರ ಸರಕಾರಗಳು ಮುನಿಸಿಪಾಲಿಟಿಗೆ ಸಮವಾಗುವತ್ತ ಕೇಂದ್ರೀಕರಣ ಪ್ರಕ್ರಿಯೆಗಳು ಸಾಗುತ್ತಿದೆ ಎಂದರೆ ಖಂಡಿತಾ ಉತ್ಪ್ರೇಕ್ಷೆಯಲ್ಲ. ಸಂವಿಧಾನದ ಆಶಯಗಳು ಒಳ್ಳೆಯದಿವೆ ಎಂದಾಕ್ಷಣ ಅವುಗಳು ಜಾರಿಗೊಂಡುಬಿಡುತ್ತವೆ ಎಂದೇನಿಲ್ಲ. ಅದು ಆಯಾ ಸರಕಾರಗಳ ಬದ್ಧತೆಯ ಮೇಲೆ ಅವಲಂಬಿಸಿರುವ ವಿಚಾರವಾಗುತ್ತದೆ. ಅಸಮಾನತೆ ತುಂಬಿ ತುಳುಕುತ್ತಿರುವ ಸಮಾಜ ವ್ಯವಸ್ಥೆಯೊಂದರಲ್ಲಿ ಎಂತಹ ಸಂವಿಧಾನ ರಚನೆಗೊಂಡರೂ ಅದು ಜಾರಿಯಾಗುವುದು ಸಮಾಜದ ಹಿಡಿತ ಸಾಧಿಸಿರುವ ಶಕ್ತಿಗಳ ಪರವಾಗಿಯೇ ಹೊರತು ಬಹುಸಂಖ್ಯಾತ ಜನಸಾಮಾನ್ಯರ ಪರವಾಗಿ ಅಲ್ಲ. ಇನ್ನು ಕೊಟ್ಟಂತೆ ಮಾಡಿ ಕೊಡದೇ ಇರುವಂತೆ ಮಾಡಬಹುದಾದ ವಿಧಿಗಳೂ ಕೂಡ ಒಂದು ಸಂವಿಧಾನದಲ್ಲಿ ಇದ್ದಾಗ ಅದು ಬಹುಸಂಖ್ಯಾತ ಜನಸಾಮಾನ್ಯರಿಗೆ ಮರೀಚಿಕೆಯಾಗಿ ಕಾಣಿಸಲಾರಂಭಿಸುತ್ತವೆ. ಭಾರತದ ಸಂವಿಧಾನದಲ್ಲಿ ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ, ಸಂಯುಕ್ತ ಪಟ್ಟಿ ಅಂತೆಲ್ಲಾ ನಿರ್ಣಯಾಧಿಕಾರದ ವರ್ಗೀಕರಣ ಮಾಡಲಾಗಿದ್ದರೂ ರಾಜ್ಯ ಪಟ್ಟಿಯಲ್ಲಿನ ನಿರ್ಣಯಾಧಿಕಾರಗಳನ್ನು ಯಾವುದಾದರೂ ತುರ್ತು ನೆಪ ಹೇಳಿ ಇಲ್ಲವೇ ಸಂಸತ್ತಿನಲ್ಲಿ ಭಾರೀ ಬಹುಮತ ಹೊಂದುವ ಸರಕಾರವೊಂದು ಸಂಸತ್ತಿನ ತೀರ್ಮಾನದ ಮೂಲಕವೇ ನಿರಾಕರಿಸಬಹುದು. ಇನ್ನು ಅಧಿಕಾರ ಕೇಂದ್ರವೊಂದು ನ್ಯಾಯಾಂಗದ ಮೇಲೂ ಪ್ರತ್ಯಕ್ಷ ಇಲ್ಲವೇ ಪರೋಕ್ಷವಾಗಿ ಹಿಡಿತ ಸಾಧಿಸಿದರೆ ಇಂತಹ ಕಾರ್ಯಗಳು ಮತ್ತೂ ಸುಲಭವಾಗಿ ನ್ಯಾಯಾಂಗವನ್ನು ಮುಂದಿಟ್ಟುಕೊಂಡು ಕೂಡ ಮಾಡಬಹುದು ಎನ್ನುವುದಕ್ಕೆ ಭಾರತದ ಸಂವಿಧಾನ ಜಾರಿಗೊಂಡ ದಿನದಿಂದಲೂ ಹಲವಾರು ಉದಾಹರಣೆಗಳನ್ನು ನಾವು ನೋಡಬಹುದು. ಈಗ ಅನುಷ್ಠಾನಗೊಳಿಸುತ್ತಿರುವ ಜಿಎಸ್‌ಟಿ ಇರಬಹುದು, ಆಧಾರ್ ಯೋಜನೆ ಇರಬಹುದು ಇವೆಲ್ಲಾ ಕೇಂದ್ರೀಕರಣದ ಪರಾಕಾಷ್ಠೆಯ ನಡೆಗಳೆಂದು ಅರ್ಥ ಮಾಡಿಕೊಳ್ಳಬೇಕು. ಸಂಸತ್ತನ್ನೂ ಬದಿಗೆ ಸರಿಸಿ, ರಾಜ್ಯಗಳ ಅಭಿಪ್ರಾಯಗಳನ್ನೂ ಕೇಳದೆ ಯಾವುದೇ ಸಾಂವಿಧಾನಿಕ ಮಾನ್ಯತೆ ಇಲ್ಲದ ಆಧಾರ್ ಯೋಜನೆಯನ್ನು ಏಕಪಕ್ಷೀಯವಾಗಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬಲವಂತದಿಂದ ಜನಸಾಮಾನ್ಯರ ಮೇಲೆ ಹೇರಲಾಯಿತು. ರಾಜ್ಯಗಳ ಅಧಿಕಾರ ಹಾಗೂ ಜನಸಾಮಾನ್ಯರ ಖಾಸಗಿತನದ ಹರಣ ಮಾಡುವ, ಜನಸಾಮಾನ್ಯರ ಮೇಲೆ ಸಾರಾಸಗಟು ಗೂಢಚಾರಿಕೆ ಮಾಡುವ ಕೇಂದ್ರದ ಈ ಅಪಾಯಕಾರಿ ನಡೆಯನ್ನು ಈಗ ನ್ಯಾಯಾಂಗ ಕೂಡ ಮಾನ್ಯ ಮಾಡುವಂತೆ ಆಗಿದ್ದನ್ನು ನಾವು ನೋಡಿದ್ದೇವೆ. ಅಂದರೆ ಆಳುವ ಶಕ್ತಿಗಳು ಸಂವಿಧಾನವನ್ನು ತಮಗೆ ಅನುಕೂಲವಾಗಿ ಹೇಗೆಲ್ಲಾ ಬಳಸಿಕೊಳ್ಳುತ್ತಾರೆ ಹೇಗೆಲ್ಲಾ ತಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ಪಕ್ಕಕ್ಕೆ ಸರಿಸಿ ದಕ್ಕಿಸಿಕೊಳ್ಳುತ್ತಾರೆ ಎನ್ನುವುದಕ್ಕೆ ಇದು ಒಂದು ತಾಜಾ ಉದಾಹರಣೆಯಾಗಿದೆ. ಹಾಗಾಗಿ ಇಂದು ಭಾರತ ಒಂದು ಒಕ್ಕೂಟ ವ್ಯವಸ್ಥೆಯಿರುವ ಗಣರಾಜ್ಯಕ್ಕೆ ಬದಲಾಗಿ ಸಂಪೂರ್ಣ ಕೇಂದ್ರೀಕೃತ ಆಡಳಿತ ವ್ಯವಸ್ಥೆಯ ಸನಿಹ ಬಂದು ನಿಂತಿದೆ. ಸಾಂವಿಧಾನಿಕವಾಗಿ ಸಾಧ್ಯವಾಗದ ಮೇಲ್ಜಾತಿ ಬಡವರಿಗೆ ಶೇ.10 ಮೀಸಲಾತಿಯನ್ನು ಸಂಸತ್ತಿನ ಎರಡೂ ಅಂಗಗಳೂ ಸಲೀಸಾಗಿ ಅಂಗೀಕರಿಸಿ ಈಗ ಜಾರಿಮಾಡುತ್ತಿದೆ. ಇದು ದಲಿತ ದಮನಿತರಿಗೆ ಇದ್ದ ಅಲ್ಪಸ್ವಲ್ಪಸಾಂವಿಧಾನಿಕ ರಕ್ಷಣೆಯನ್ನೇ ಚಾಣಾಕ್ಷತನದಿಂದ ಕಿತ್ತುಕೊಳ್ಳುವ ಷಡ್ಯಂತ್ರ ಕೂಡ ಹೌದು. ಇದರ ಬಗ್ಗೆ ನ್ಯಾಯಾಂಗ ಏನು ಹೇಳುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ. ಇಂತಹ ಕಾರ್ಯಗಳು ಇಂದು ನಿನ್ನೆಯಿಂದ ಶುರುವಾಗಿವೆ ಎಂದರೆ ಸರಿಯಾಗುವುದಿಲ್ಲ. ಇವುಗಳ ಮೂಲ ಸಂವಿಧಾನದ ಅಳವಡಿಕೆ ಹಾಗೂ ಜಾರಿಗೊಳಿಸುವಲ್ಲಿನಿಂದಲೇ ಶುರುವಾಗಿವೆ ಎನ್ನುವುದನ್ನು ಅರ್ಥ ಮಾಡಿಕೊಂಡಾಗ ಮಾತ್ರ ಸರಿಯಾಗಿ ಗ್ರಹಿಸಿ ನೋಡಲು ಸಾಧ್ಯವಾಗುತ್ತದೆ. ಭಾರತವನ್ನು ಹಾಗೇನೇ ಭಾರತದ ಸಂವಿಧಾನವನ್ನೂ ಮೊದಲಿನಿಂದಲೂ ಇಲ್ಲಿಯವರೆಗೂ ಒಪ್ಪಿಕೊಳ್ಳದೇ ಇರುವ ಒಂದು ದೊಡ್ಡ ಜನಸಮೂಹ ಈಗಲೂ ಇದೆ. ಅದರ ಹೇರಿಕೆಯ ವಿರುದ್ಧ ಸಶಸ್ತ್ರಹೋರಾಟಗಳೂ ಸೇರಿದಂತೆ ಹಲವಾರು ಹೋರಾಟಗಳಲ್ಲಿ ಈ ಜನ ಸಮುದಾಯಗಳು ನಿರತವಾಗಿವೆ.

  ಮಿಜೋರಾಂ, ಅಸ್ಸಾಂ, ತ್ರಿಪುರಾ, ಮೊದಲಾದ ಭಾರತದ ಈಶಾನ್ಯ ಭಾಗದ ಜನಸಮುದಾಯಗಳು ಹಾಗೇನೇ ಕಾಶ್ಮೀರ ಪ್ರದೇಶದ ಜನರು, ಮಧ್ಯಭಾರತದ ಹತ್ತು ಹಲವು ಬುಡಕಟ್ಟು ಸಮುದಾಯಗಳು ಭಾರತದ ಸಶಸ್ತ್ರ ಪಡೆಗಳೊಂದಿಗೆ ಅಕ್ಷರಶಃ ಬೀದಿ ಕಾಳಗ, ಯುದ್ಧಗಳಲ್ಲಿ ನಿರತವಾಗಿವೆ. ಆ ಪ್ರದೇಶಗಳಲ್ಲಿ ಭಾರತದ ಸೇನೆಯೇ ಕಾರ್ಯ ನಿರ್ವಹಿಸುತ್ತಾ ಬರುತ್ತಿದೆ. ಅಲ್ಲೆಲ್ಲಾ ಸೇನಾ ಪಡೆಗಳಿಗೆ ವಿಶೇಷಾಧಿಕಾರ ನೀಡಲಾಗಿದೆ. ಚುನಾಯಿತ ಸರಕಾರಗಳು ಕೇವಲ ನಾಮಮಾತ್ರದ್ದೆನ್ನುವಷ್ಟರ ಮಟ್ಟಿಗೆ ಸೀಮಿತವಾಗಿ ಕಾರ್ಯ ನಿರ್ವಹಿಸುತ್ತಾ ಬರುತ್ತಿವೆ. ಆ ಭಾಗಗಳಲ್ಲಿ ಈ ಬಾರಿಯೂ ಗಣರಾಜ್ಯೋತ್ಸವವನ್ನು ಬಹಿಷ್ಕರಿಸಿರುವ ವರದಿಗಳು ಬಂದಿವೆ. ಮಿಜೋರಾಮ್ನ ರಾಜ್ಯಪಾಲರು ಬಹುತೇಕ ಖಾಲಿ ಕುರ್ಚಿಗಳ ಮುಂದೆ ಭಾಷಣ ಮಾಡಬೇಕಾಗಿ ಬಂದದ್ದೂ ವರದಿಯಾಗಿದೆ. ದಕ್ಷಿಣದ ಹಲವು ರಾಜ್ಯಗಳ ಸರಕಾರಗಳ ಮುಖ್ಯಸ್ಥರೇ ಸಂಪನ್ಮೂಲ ಹಂಚಿಕೆ ಹಾಗೂ ಕೇಂದ್ರೀಕರಣದ ವಿರುದ್ಧ ಧ್ವನಿ ಗಟ್ಟಿಮಾಡುತ್ತಾ ಮಾತನಾಡಲಾರಂಭಿಸಿದ್ದಾರೆ. ಇವುಗಳು ಈ ಎಪ್ಪತ್ತು ವರ್ಷಗಳಲ್ಲಿ ಭಾರತ ಸಾಗಿ ಬಂದ ದಾರಿಗಳು ಹಾಗೂ ಸಾಧನೆಗಳೇನು ಎನ್ನುವುದಕ್ಕೆ ನಿದರ್ಶನಗಳಾಗಿವೆ. ಭಾರತದ ಒಕ್ಕೂಟ ವ್ಯವಸ್ಥೆಯ ವಾಸ್ತವಕ್ಕೆ ಹಿಡಿಯುವ ಕನ್ನಡಿಯಾಗಿದೆ. ಇಂತಹ ಸಂದರ್ಭದಲ್ಲಿ ‘‘ಸಂವಿಧಾನ ರಕ್ಷಿಸಿ, ಸಂವಿಧಾನ ನಮ್ಮ ಧರ್ಮಗ್ರಂಥ’’ ಎಂದೆಲ್ಲಾ ಕೂಗುಗಳು, ಘೋಷಣೆಗಳನ್ನು ಹಲವು ಜನಪರ ವಲಯಗಳಲ್ಲಿ ಗುರ್ತಿಸಿಕೊಂಡವರೂ ಕೂಡ ಹಾಕತೊಡಗಿದ್ದಾರೆ. ಇದು ಎಂತಹ ಅಭಾಸದ ನಡೆಯೆನ್ನುವುದನ್ನು ಅವರು ಗ್ರಹಿಸದೆಯೂ ಇರಬಹುದು. ಸಂವಿಧಾನ ಒಂದು ಧರ್ಮಗ್ರಂಥ ಎಂದು ಪರಿಭಾವಿಸುವಂತಾದರೆ ಅದರ ಅಪಾಯ ಗಂಭೀರ. ಸಂವಿಧಾನ ಎಂದರೆ ಸಂವಿಧಾನ ಮಾತ್ರ ಅದು ಧರ್ಮವೂ ಆಗಬಾರದು, ಧರ್ಮಗ್ರಂಥವೂ ಆಗಬಾರದು. ಆದರೆ ಇಂದು ಸಂವಿಧಾನದ ಸರಿಯಾದ ಆಶಯಗಳನ್ನು ಎತ್ತಿಹಿಡಿಯುವ ಅದೇ ವೇಳೆಯಲ್ಲಿ ದೇಶದ ಜನರನ್ನು ಹಾಗೂ ದೇಶವನ್ನು ರಕ್ಷಿಸಬೇಕಾದರೆ ಪ್ರಧಾನ ಕಂಟಕ ಶಕ್ತಿಗಳನ್ನು ಹಾಗೂ ತಡೆಗಳನ್ನು ಸರಿಯಾಗಿ ಗುರ್ತಿಸಿ ಆ ಶಕ್ತಿಗಳ ವಿರುದ್ಧ ಧ್ವನಿಗಳೇಳುವಂತೆ ಆಗಬೇಕು. ಸಂವಿಧಾನ ಜಾರಿಗೊಂಡು ಎಪ್ಪತ್ತು ವರ್ಷಗಳ ಈ ಸಂದರ್ಭದಲ್ಲಿ ಎಲ್ಲೆಲ್ಲಿ, ಏನೇನು, ಯಾಕೆ ಲೋಪಗಳು ಹಾಗೂ ತಪ್ಪುಗಳು ಯಾವ್ಯಾವ ಶಕ್ತಿಗಳಿಂದ ನಡೆಯುತ್ತಾ ಬಂದವು ಎನ್ನುವುದರ ಚರ್ಚೆ, ವಿಶ್ಲೇಷಣೆ, ನಡೆಯಬೇಕಾದುದು ಇಂದಿನ ತುರ್ತು ಅಗತ್ಯ ಅಲ್ಲವೇ?.

ಮಿಂಚಂಚೆ: nandakumarnandana67gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News