ಚಿಂತಾಮಣಿ ದೇವಾಲಯದಲ್ಲಿ ವಿಷ ಪ್ರಸಾದ ದುರಂತ ಪ್ರಕರಣ: ಮೂವರ ಬಂಧನ

Update: 2019-01-29 17:24 GMT

ಚಿಕ್ಕಬಳ್ಳಾಪುರ,ಜ.29: ಚಿಂತಾಮಣಿ ಗಂಗಮ್ಮ ದೇವಾಲಯದಲ್ಲಿ ವಿಷ ಪ್ರಸಾದ ಸೇವಿಸಿ ಇಬ್ಬರು ಮೃತಪಟ್ಟ ಪ್ರಕರಣ ಕೊನೆಗೂ ಬೇಧಿಸಿರುವ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದಾರೆ.

ಕಳೆದ ಜ.25ರಂದು ಶುಕ್ರವಾರ ಚಿಂತಾಮಣಿಯ ನಾರಸಿಂಹಪೇಟೆಯಲ್ಲಿರುವ ಗಂಗಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿದ 17 ಮಂದಿ ತೀವ್ರ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದರು. ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಕವಿತಾ (32) ಸರಸ್ವತಮ್ಮ (58) ಮೃತಪಟ್ಟಿದ್ದು, ಉಳಿದವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಮೂವರ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ.

ವಿಷ ಹಾಕಿದರು

ಮಂಗಳವಾರ ನಗರ ಹೊರವಲಯದ ಅಣಕನೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ವಲಯದ ಐಜಿಪಿ ದಯಾನಂದ್ ಪ್ರಕರಣದ ಮಾಹಿತಿ ನೀಡಿ, ಅಮರಾವತಿ ಎಂಬ ಮಹಿಳೆ ಶುಕ್ರವಾರ ದೇವಾಲಯಕ್ಕೆ ಕೇಸರೀಬಾತ್ ತಂದು ಹಂಚಿದ್ದು, ಲಕ್ಷ್ಮೀ ಎಂಬಾಕೆ ಪ್ರಸಾದ ಮಾಡಿಕೊಟ್ಟಿದ್ದಾಳೆ. ಆದರೆ 26 ರಂದು ಸಂಜೆಯವರೆಗೂ ಇವರಿಬ್ಬರೂ ದೇವಾಲಯದ ಆಸುಪಾಸಿನಲ್ಲಿಯೇ ಯಾವುದೇ ಅನುಮಾನ ಬಾರದ ರೀತಿಯಲ್ಲಿ ಓಡಾಡಿಕೊಂಡಿದ್ದರು ಎಂಬುದು ವಿಶೇಷ ಎಂದರು.

ಪ್ರಸಾದ ತಯಾರಿಸಿದ ಲಕ್ಷ್ಮೀ ಅದನ್ನು ಎರಡು ಬಾಕ್ಸ್ ಗಳಲ್ಲಿ ಹಾಕಿ ಒಂದರಲ್ಲಿ ವಿಷ ಬೆರೆಸಿದ್ದಾರೆ. ವಿಷ ಬೆರಿಸಿದ ಪ್ರಸಾದವನ್ನು ಸರಸ್ವತಮ್ಮ ಮತ್ತು ಆಕೆಯ ಮಗಳು ಗೌರಿ ಅವರಿಗೆ ಮಾತ್ರ ನೀಡುವಂತೆ ಅಮರಾವತಿಗೆ ತಾಕೀತು ಮಾಡಿದ್ದಾಳೆ. ಆದರೆ ದೇವಾಲಯದ ಬಳಿ ಪ್ರಸಾದ ಹಂಚುವ ವೇಳೆ ದೊಡ್ಡ ಪಾತ್ರೆಯಲ್ಲಿದ್ದ ಪ್ರಸಾದ ಇನ್ನೂ ಸ್ವಲ್ಪ ಬಾಕಿ ಇರುವಾಗಲೇ ವಿಷ ಬೆರಿಸಿದ ಪ್ರಸಾದವನ್ನು ಸೇರಿಸಿದ ಪರಿಣಾಮ ಇತರರು ಅಸ್ವಸ್ಥರಾಗಿ, ಸಾಯುವಂತಾಗಿದೆ ಎಂದು ತಿಳಿಸಿದರು.

ಅನೈತಿಕ ಸಂಬಂಧ ಕಾರಣ?: ವಿಷ ಬೆರಿಸಿದ ಲಕ್ಷ್ಮೀ ಮತ್ತು ಮೃತಪಟ್ಟ ಸರಸ್ವತಮ್ಮ ಅವರ ಅಳಿಯ ಲೋಕೇಶ್ ನಡುವೆ ಅನೈತಿಕ ಸಂಬಂಧ ಇತ್ತು. ಮದುವೆಗೂ ಮೊದಲೇ ಇಬ್ಬರ ನಡುವೆ ಸಂಬಂಧ ಇದ್ದು, ಮದುವೆ ನಂತರವೂ ಮುಂದುವರಿದಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ಲೋಕೇಶ್ ಪತ್ನಿ ಗೌರಿ ಮತ್ತು ಲಕ್ಷ್ಮೀ ನಡುವೆ ಎರಡು ಬಾರಿ ಜಗಳ ನಡೆದು ಪೊಲೀಸ್ ಠಾಣೆಯಲ್ಲಿ ದೂರೂ ದಾಖಲಾಗಿತ್ತು ಎಂದು ತಿಳಿಸಿದರು.

ಅಲ್ಲದೆ ಈ ಹಿಂದೆ 2018ರ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಗೌರಿ ಅವರನ್ನು ಸಾಯಿಸುವ ಉದ್ಧೇಶದಿಂದಲೇ ಎರಡು ಬಾರಿ ಪ್ರಸಾದದಲ್ಲಿ ವಿಷ ಬೆರಿಸಿ ನೀಡಿದ್ದರು ಎಂಬುದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಆದರೆ ಈ ಎರಡೂ ಬಾರಿಯೂ ಚಿಕಿತ್ಸೆ ಪಡೆದ ಗೌರಿ ಚೇತರಿಸಿಕೊಂಡಿದ್ದು ಮೂರನೇ ಬಾರಿಗೆ ಹೆಚ್ಚಿನ ವಿಷ ಬೆರಿಸಿದ ಪ್ರಸಾದ ನೀಡಲು ತೀರ್ಮಾನಿಸಿದ್ದರು ಎಂದು ವಿವರಿಸಿದರು. ಮೊದಲೇ ರೂಪಿಸಿದ ಸಂಚಿನಂತೆ ಸರಸ್ವತಮ್ಮ ಅವರು ಶುಕ್ರವಾರ ದೇವಾಲಯಕ್ಕೆ ಬಂದಿದ್ದು, ವಿಷ ಬೆರೆಸಿದ ಪ್ರಸಾದ ಮನೆಗೆ ಕೊಂಡೊಯ್ದಿದ್ದಾರೆ. ಆದರೆ ಪ್ರಸಾದ ತಿಂದರೆ ತಮಗೆ ಅನಾರೋಗ್ಯ ಕಾಡುತ್ತಿದೆ ಎಂಬ ಕಾರಣ ನೀಡಿ ಗೌರಿ ಪ್ರಸಾದ ತಿಂದಿಲ್ಲ. ಆದರೆ ಸರಸ್ವತಮ್ಮ ಪ್ರಸಾದ ತಿಂದ ಪರಿಣಾಮ ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ ಎಂದು ವಿವರಿಸಿದರು.

ಪ್ರಕರಣ ಬೇಧಿಸಿದ್ದು ಹೇಗೆ? ಲೋಕೇಶ್ ಅವರ ಪತ್ನಿ ಗೌರಿ ಅವರು ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಗೆ ಬಂದು, ತಮ್ಮ ಪತಿ ಮತ್ತು ಲಕ್ಷ್ಮೀ ನಡುವೆ ಅಕ್ರಮ ಸಂಬಂಧ ಇರುವ ಬಗ್ಗೆ ಹೇಳಿಕೆ ನೀಡಿದ್ದರು. ಅಲ್ಲದೆ ಈ ಹಿಂದೆ ಎರಡು ಬಾರಿ ಪ್ರಸಾದದಲ್ಲಿ ವಿಷ ಬೆರಿಸಿ ಕೊಲೆಗೆ ಯತ್ನಿಸಿರುವುದೂ ಅವರೇ ಇರಬಹುದು ಎಂಬ ಶಂಕೆಯನ್ನೂ ಸಹ ಅವರು ವ್ಯಕ್ತಪಡಿಸಿದ್ದರು. ಪೊಲೀಸ್ ವಶದಲ್ಲಿದ್ದ ಲಕ್ಷ್ಮೀ ಅವರನ್ನು ಈ ಬಗ್ಗೆ ವಿಚಾರಣೆ ನಡೆಸಿದ ವೇಳೆ ಲಕ್ಷ್ಮೀ ಎಲ್ಲವನ್ನೂ ಒಪ್ಪಿಕೊಂಡಿರುವುದಾಗಿ ಐಜಿಪಿ ತಿಳಿಸಿದರು.

ಮೂವರ ಬಂಧನ: ಪ್ರಸ್ತುತ ಪ್ರಸಾದ ತಯಾರಿಸಿದ ಲಕ್ಷ್ಮೀ, ಅದನ್ನು ತಂದು ಹಂಚಿದ ಅಮರಾವತಿ ಮತ್ತು ಗಂಗಮ್ಮ ದೇವಾಲಯದ ಮುಂದೆ ಹೂವು ಮಾರಾಟ ಮಾಡುತ್ತಿದ್ದ ಪಾರ್ವತಮ್ಮ ಎಂಬವರು ಪ್ರಸಾದ ಹಂಚಲು ಸಹಕರಿಸಿದ ಆರೋಪದ ಮೇಲೆ ಈಗಾಗಲೇ ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ಅಗತ್ಯವಿದ್ದರೆ ನ್ಯಾಯಲಯದಲ್ಲಿ ಹಾಜರು ಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯುವುದಾಗಿ ತಿಳಿಸಿದರು.

ಭದ್ರಾವತಿಯಲ್ಲಿ ಲೋಕೇಶ್ ವಶಕ್ಕೆ?: ಪ್ರಕರಣದಲ್ಲಿ ಪ್ರಮುಖ ಆರೋಪಿ ಲಕ್ಷ್ಮೀ ಅವರ ಪತಿ ಮಂಜುನಾಥ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿರುವ ಪೊಲೀಸರು ಪ್ರಕರಣದಲ್ಲಿ ಅವರ ಕೈವಾಡ ಇಲ್ಲದಿರುವುದು ಬೆಳಕಿಗೆ ಬಂದಿದ್ದು, ಅವರನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೆ ಗೌರಿ ಅವರ ಪತಿ ಲೋಕೇಶ್ ಅವರ ಕೈವಾಡದ ಬಗ್ಗೆ ಮಾಹಿತಿ ಅಗತ್ಯವಿದ್ದು, ಲೋಕೇಶ್ ಅವರು ಇರುವ ಜಾಗದ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಶೀಘ್ರದಲ್ಲಿಯೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದರು.

ಅಲ್ಲದೆ ಪ್ರಕರಣವನ್ನು ಶೀಘ್ರದ ಬೇಧಿಸುವಲ್ಲಿ ಯಶಸ್ವಿಯಾದ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸರಿಗೆ 50 ಸಾವಿರ ಬಹುಮಾನ ಘೋಷಿಸಿರುವುದಾಗಿ ಐಜಿಪಿ ದಯಾನಂದ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‍ರೆಡ್ಡಿ, ಚಿಂತಾಮಣಿ ಡಿವೈಎಸ್‍ಪಿ ಶ್ರೀನಿವಾಸ್ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News