ಅಕ್ರಮ ಸಕ್ರಮ ಅರ್ಜಿಗಳ ವಿಲೇವಾರಿಗೆ ಕಂದಾಯ-ಅರಣ್ಯ ಇಲಾಖೆ ಜಂಟಿ ಸರ್ವೇ ಸೂಕ್ತ: ಶಾಸಕ ರಾಜೇಗೌಡ

Update: 2019-01-29 18:38 GMT

ಚಿಕ್ಕಮಗಳೂರು, ಜ.29: ಸರಕಾರ ಜನರ ಬಳಿಗೆ ಬಂದಿದ್ದು, ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಜಿಲ್ಲಾಡಳಿತ ಅನುಕೂಲ ಕಲ್ಪಿಸಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಶೆಟ್ಟಿಕೊಪ್ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕುವೆಂಪು ಕಲಾ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಎನ್.ಆರ್.ಪುರ ತಾಪಂ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಕಸಬಾ ಹೋಬಳಿ ಮಟ್ಟದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿವೇಶನ ರಹಿತರಿಗೆ ಹಕ್ಕುಪತ್ರ ಸೇರಿದಂತೆ ಜಮೀನು ಅಕ್ರಮ-ಸಕ್ರಮ ಫಾರಂ ನಂ.94(ಸಿ) ಮತ್ತು 57 ಯಶಸ್ವಿಯಾಗಿ ಕಾರ್ಯರೂಪಕ್ಕೆ ಬರಲು ಅರಣ್ಯ ಇಲಾಖೆ ಮತ್ತು ಗ್ರಾಪಂ ಜಂಟಿಯಾಗಿ ಸರ್ವೇ ಮಾಡಿದರೆ ಮಾತ್ರ ಸಮಸ್ಯೆ ಬಗೆಹರಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ವಸತಿ  ರಹಿತರಿಗೆ ನಿವೇಶನ  ಕೊಡಲು ಜಿಲ್ಲಾಡಳಿತ ಮುಂದಾಗಬೇಕು. ಗ್ರಾಮದ ಎಲ್ಲ ಸಮಸ್ಯೆ ಬಗೆಹರಿಸಲು ಹೊಂದಾಣಿಕೆ ಮುಖ್ಯವಾಗಿ ಬೇಕಾಗಿದ್ದು, ಅರಣ್ಯ ಮತ್ತು ವಸತಿ ಸಚಿವರ ಬಳಿ ಸಮಸ್ಯೆಗಳ ಬಗ್ಗೆ ಚರ್ಚಿಸಿ ಶಾಸನ ಸಭೆಯಲ್ಲಿ ತಮ್ಮ ಪರ ಧ್ವನಿ ಎತ್ತಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಇದೇ ವೇಳೆ ಅವರು ಭರವಸೆ ನೀಡಿದರು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಕೆ.ಆರ್ ಆನಂದಪ್ಪ ಮಾತನಾಡಿ, ಜನರು ತಮ್ಮ ಹಳ್ಳಿಗಳಿಂದ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಮುಖ್ಯ ಮಂತ್ರಿಗಳ ಬಳಿಗೆ ಹೋಗಲು ಆಗುವುದಿಲ್ಲ. ಅಲ್ಲದೇ ಜಿಲ್ಲೆಯ ಕೇಂದ್ರ ಸ್ಥಾನಕ್ಕೂ ಬರಲಾಗುವುದಿಲ್ಲ. ಆ ಕಾರಣಕ್ಕಾಗಿ ಸರ್ಕಾರ ನಿಮ್ಮ ಬಳಿಗೆ ಬಂದು ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಲ್ಪಿಸುವುದು ಜನಸಂಪರ್ಕ ಸಭೆಯ ಮುಖ್ಯ ಉದ್ದೇಶ, ಜನಸಂಪರ್ಕ ಸಭೆಯಲ್ಲಿ ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸಿ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲಾಗುವುದು. ಉಳಿದ ಅರ್ಜಿಗಳನ್ನು ಕಾನೂನಾತ್ಮಕವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿ.ಪಂ. ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ತಮ್ಮ ಮನೆ ಬಾಗಿಲಿಗೆ ಬಂದಿದೆ. ಜನರು ತಮ್ಮ ಅಹವಾಲುಗಳನ್ನು ಸಲ್ಲಿಸಿ ಪರಿಹಾರ ಕಂಡುಕೊಳ್ಳುವಂತೆ ಹೇಳಿದರು.

ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅವರು ಮಾತನಾಡಿ, ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯ್ದೆಗೆ ಸಂಬಂಧಿಸಿದಂತೆ ಹಲವಾರು ಅರ್ಜಿಗಳು ಬಂದಿವೆ. ಅವುಗಳನ್ನು ಪರಿಶೀಲಿಸಿ ಕಾನೂನಾತ್ಮಕವಾಗಿ ಕ್ರಮ ವಹಿಸಲಾಗುವುದು ಎಂದ ಅವರು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿ ಇಲ್ಲಿ ಸ್ವೀಕರಿಸುವ ಅರ್ಜಿಗಳನ್ನು ಪರಿಶೀಲಿಸಿ ನಿಗದಿತ ಅವಧಿಯೊಳಗೆ ಇತ್ಯರ್ಥಪಡಿಸಲಾಗುವುದು ಎಂದರು.

ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮ ಮಾತನಾಡಿ, ಪ್ರತೀ  ಜಿಲ್ಲೆಯ ಪತ್ರಿ ಗ್ರಾಮಗಳಲ್ಲಿಯೂ ಪ್ರತಿ ಶನಿವಾರ ಸ್ವಚ್ಛ ಶನಿವಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿ ಪಂಚಾಯತ್ ಕನಿಷ್ಠ 5 ಹಳ್ಳಿಗಳನ್ನು ಪ್ರತಿ ಶನಿವಾರ ಸ್ವಚ್ಛಗೊಳಿಸಬೇಕು ಎಂದ ಅವರು, ಸ್ವಚ್ಛತಾ ಕಾರ್ಯ ಕೈಗೊಂಡಿರುವ ಬಗ್ಗೆ ಪ್ರತಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಾಟ್ಸ್ ಆಫ್ ಮೂಲಕ ಮಾಹಿತಿ ಕಳುಹಿಸುತ್ತಾರೆ. ಇದರಿಂದ ಹಳ್ಳಿಗಳಲ್ಲಿ ಸ್ವಚ್ಛತೆ ಕಾಪಾಡಲು ಅನುಕೂಲವಾಗುತ್ತದೆ. ಜನತೆ ಪಂಚಾಯತ್ ತೆರಿಗೆಯನ್ನು ಕಟ್ಟಬೇಕು. ಇದರಿಂದ ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಅನುಕೂಲವಾಗುತ್ತದೆ ಎಂದರು.

ಸಭೆಯಲ್ಲಿ ತರೀಕೆರೆ ಉಪವಿಭಾಗಾಧಿಕಾರಿ ರೂಪ, ಜಿ.ಪಂನ ಸದಸ್ಯ ಟಿ.ಆರ್.ಸದಾಶಿವ, ತಾ.ಪಂ ಅಧ್ಯಕ್ಷೆ ಜಯಶ್ರೀ ಮೋಹನ್, ತಾ.ಪಂ ಸದಸ್ಯ ನಾಗೇಶ್, ವಿವಿಧ ಇಲಾಖೆಯ ಅನುಷ್ಠಾನಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News