ರಫೇಲ್ ಕುರಿತ ಹೇಳಿಕೆ: ಪರಿಕ್ಕರ್‌ಗೆ ರಾಹುಲ್ ತಿರುಗೇಟು

Update: 2019-01-31 03:54 GMT

ಹೊಸದಿಲ್ಲಿ, ಜ.31: ಅನಾರೋಗ್ಯಪೀಡಿತ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರನ್ನು ಸೌಜನ್ಯಕ್ಕೆ ಭೇಟಿ ಮಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇದರಿಂದ ರಾಜಕೀಯ ಮೈಲೇಜ್ ಪಡೆಯಲು ಯತ್ನಿಸುತ್ತಿದ್ದಾರೆ ಎಂಬ ಆರೋಪವನ್ನು ಕಾಂಗ್ರೆಸ್ ಸ್ಪಷ್ಟವಾಗಿ ತಳ್ಳಿಹಾಕಿದೆ.

ಉಭಯ ನಾಯಕರ ನಡುವೆ ನಡೆದ ಇತ್ತೀಚಿನ ಚರ್ಚೆಯ ಯಾವ ಅಂಶಗಳನ್ನೂ ರಾಹಲ್‌ ಗಾಂಧಿ ಬಹಿರಂಗಪಡಿಸಿಲ್ಲ. ಅವರು ಹೇಳಿದ ಅಂಶ ಸಾರ್ವಜನಿಕ ಪರಿದಿಯಲ್ಲಿದೆ. ಪರಿಕ್ಕರ್ ಅವರ ಟೀಕೆಗಳ ಬಗ್ಗೆ ಪರಿಕ್ಕರ್ ಬಗ್ಗೆ ಸಹಾನುಭೂತಿ ಇದೆ. ಅದು ತೀವ್ರ ಒತ್ತಡದಿಂದಾಗಿ ಅವರು ಬರೆದ ಪತ್ರ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ.

"ಪರಿಕ್ಕರ್ ಅವರ ಪತ್ರ ನನಗೆ ತಲುಪುವ ಮುನ್ನವೇ ಮಾಧ್ಯಮಗಳಿಗೆ ಸೋರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ಅನಗತ್ಯ ಹಾಗೂ ದುರದೃಷ್ಟಕರ ವಿವಾದದ ಬಗ್ಗೆ ನಿಲುವನ್ನು ಸ್ಪಷ್ಟಪಡಿಸಲೇಬೇಕಾಗಿದೆ" ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಮಂಗಳವಾರ ಪರಿಕ್ಕರ್ ಅವರನ್ನು ಭೇಟಿ ಮಾಡಿದ ಬಳಿಕ ರಾಹುಲ್ ಹೇಳಿಕೆ ನೀಡಿ, ರಫೇಲ್ ವಿವಾದದ ಬಗ್ಗೆ ಅವರ ಜತೆ ಚರ್ಚಿಸಿದ್ದಾಗಿ ಬಹಿರಂಗಪಡಿಸಿದ್ದರು. ಒಪ್ಪಂದವನ್ನು ಬದಲಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ದೇಶದ ರಕ್ಷಣಾ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಪರಿಕ್ಕರ್ ಚರ್ಚೆ ವೇಳೆ ಸ್ಪಷ್ಟಪಡಿಸಿದ್ದಾಗಿ ರಾಹುಲ್ ಹೇಳಿಕೆ ನೀಡಿದ್ದರು. ಆದರೆ ಇದಾದ ಕೆಲವೇ ಗಂಟೆಗಳಲ್ಲಿ ಪರಿಕ್ಕರ್, ಕಾಂಗ್ರೆಸ್ ಅಧ್ಯಕ್ಷರಿಗೆ ಪತ್ರ ಬರೆದು ನೀವು ಸುಳ್ಳು ಹೇಳುತ್ತಿರುವುದಾಗಿ ಆಪಾದಿಸಿದ್ದರು. ತಮ್ಮ ಚರ್ಚೆ ವೇಳೆ ರಫೇಲ್ ಯುದ್ಧ ವಿಮಾನ ಒಪ್ಪಂದದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

2015ರ ಎಪ್ರಿಲ್‌ನಲ್ಲಿ ರಕ್ಷಣಾ ಸಚಿವರು ಗೋವಾದಲ್ಲಿ ಮೀನು ಮಾರುಕಟ್ಟೆ ಉದ್ಘಾಟಿಸುತ್ತಿದ್ದರೆ, ಮೋದಿ ಫ್ರಾನ್ಸ್‌ನಲ್ಲಿ ಒಪ್ಪಂದದ ಬಗ್ಗೆ ಘೋಷಣೆ ಮಾಡಿದರು ಎಂದು ಪರಿಕ್ಕರ್‌ಗೆ ಬರೆದ ಪತ್ರದಲ್ಲಿ ರಾಹುಲ್ ಹೇಳಿದ್ದಾರೆ. "ಮಂಗಳವಾರದ ಭೇಟಿ ಬಳಿಕ ನಿಮಗೆ ತೀವ್ರ ಒತ್ತಡವಿರುವುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಈ ಒತ್ತಡ ನಿಮ್ಮನ್ನು ಅಸಾಮಾನ್ಯ ಹೆಜ್ಜೆ ಇಡುವಂತೆ ಮಾಡಿದೆ. ಮೋದಿಗೆ ನಿಷ್ಠೆ ತೋರಿಸುವ ಭರದಲ್ಲಿ, ನನ್ನ ಮೇಲೆ ದಾಳಿಗೆ ಮುಂದಾಗಿದ್ದೀರಿ" ಎಂದು ರಾಹುಲ್ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News