ಸರಣಿ ಅಪಘಾತಕ್ಕೆ ಮೂವರು ಬಲಿ: ಇಬ್ಬರಿಗೆ ಗಾಯ

Update: 2019-01-31 04:35 GMT

ವಿಜಯಪುರ, ಜ.31: ಭೀಕರ ಸರಣಿ ಅಪಘಾತವೊಂದರಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಝಳಕಿ ಬಳಿಯ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಇಂದು ನಸುಕಿನ ಜಾವ ಸಂಭವಿಸಿದೆ. ಇನ್ನಿಬ್ಬರು ಗಾಯಗೊಂಡಿದ್ದಾರೆ.

ನಾಲ್ಕು ವಾಹನಗಳ ನಡುವೆ ಈ ಅಪಘಾತ ಸಂಭವಿಸಿದೆ. ಎರಡು ಲಾರಿಗಳ ಮುಖಾಮುಖಿ ಢಿಕ್ಕಿಯ ಬಳಿಕ ಕಾರು ಸಹಿತ ಇನ್ನೊಂದು ವಾಹನಗಳು ಢಿಕ್ಕಿಯಾಗಿವೆ. ಅಪಘಾತದಲ್ಲಿ ಎರಡು ಲಾರಿಗಳ ಚಾಲಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಉರುಳಿಬಿದ್ದ ಲಾರಿಯೊಂದರ ಅಡಿಯಲ್ಲಿ ಸಿಲುಕಿದ ಲಾರಿಯೊಂದರ ನಿರ್ವಾಹಕ ಕೂಡ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಇನ್ನಿಬ್ಬರಿಗೆ ಗಾಯಗಳಾಗಿದ್ದು, ಈ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಮಹಾರಾಷ್ಟ್ರದ ಸೋಲಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.  ಮೃತಪಟ್ಟವರ ಹಾಗೂ ಗಾಯಾಳುಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.

ಅಪಘಾತದ ಹಿನ್ನೆಲೆಯಲ್ಲಿ ರಾ.ಹೆ. 13ರಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಬಗ್ಗೆ ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News