ಸಂವಿಧಾನ ಬದಲಾಯಿಸುತ್ತೇವೆ ಎನ್ನುವವರು ರಾಷ್ಟ್ರದೋಹಿಗಳು: ಜೈರಾಮ್

Update: 2019-01-31 12:43 GMT

ಚಿಕ್ಕಮಗಳೂರು, ಜ.31: ಅಂಬೇಡ್ಕರ್ ಎಂದರೆ ಸಂವಿಧಾನ ಎಂಬುದು ಸತ್ಯ. ಆದರೆ ಸಂವಿಧಾನ ಎಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಎಂದರೆ ಅಂಬೇಡ್ಕರ್ ಎಂಬ ತಪ್ಪು ಕಲ್ಪನೆ ಸಮಾಜದಲ್ಲಿ ಬೇರೂರಿದೆ. ಈ ಮನೋಭಾವನೆ ಬದಲಾಗಬೇಕು, ತೊಡೆದು ಹಾಕಬೇಕು. ಸಂವಿಧಾನದ ಆಶಯ ಕೇವಲ ಶೋಷಿತ ವರ್ಗದ ಏಳಿಗೆ ಅಲ್ಲ, ದೇಶದ ಏಳಿಗೆಯಾಗಿದೆ. ಸಂವಿಧಾನ ಎಲ್ಲ ವರ್ಗಗಳ ಸ್ವತ್ತಾಗಿದೆ ಎಂದು ಬಹುಜನ ವಿಧ್ಯಾರ್ಥಿ ಸಂಘದ ರಾಜ್ಯ ಸಂಪನ್ಮೂಲ ವ್ಯಕ್ತಿ ಮತ್ತು ಚಿಂತಕ ಜೈರಾಮ್ ಅಭಿಪ್ರಾಯಿಸಿದರು. 

ಗುರುವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಬಹುಜನ ವಿದ್ಯಾರ್ಥಿ ಸಂಘ ಆಯೋಜಿಸಿದ್ದ 201ನೇ ವರ್ಷದ ಕೋರೆಗಾಂವ್ ವಿಜಯೋತ್ಸವ, ಮಾತೆ ಸಾವಿತ್ರಿ ಬಾಪುಲೆ ಜಯಂತಿ, ಸಂವಿಧಾನ ದಿನಾಚರಣೆ, ಬಹುಜನ ವಿದ್ಯಾರ್ಥಿ ಸಮ್ಮೇಳನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಸಮಾಜ ಕಲಪನೆಯೇ ಸಂವಿಧಾನದ ಆಶಯವಾಗಿದೆ. ಈ ಆಶಯ ಈಡೇರಬೇಕಾದರೆ ಉತ್ತಮ ಸರಕಾರ ರಚನೆಯಾಗಬೇಕು. ಉತ್ತಮ ಸರಕಾರ ರಚನೆಗೆ ಯುವ ಸಮುದಾಯ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ಅವರು ಕರೆ ನೀಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಒಂದು ವರ್ಗವನ್ನು ಗುರಿಯಾಗಿಟ್ಟುಕೊಂಡು ಸಂವಿಧಾನ ರಚಿಸಿಲ್ಲ. 6 ವರ್ಷದಿಂದ 12 ವರ್ಷದ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ, ಮೌರ್ಯ ಸಾಮ್ರಾಜ್ಯದಲ್ಲಿ ಆಳ್ವಿಕೆ ನಡೆಸಿದ ಅಶೋಕ ಚಕ್ರವರ್ತಿಯ ಜನಹಿತ ಕಾರ್ಯಗಳನ್ನು ರಾಜ್ಯನಿರ್ದೇಶಕ ತತ್ವಗಳಾಗಿ, ಸಾಹು ಮಹಾರಾಜ ಜಾರಿಗೆ ತಂದ ಅಸ್ಪೃಶ್ಯತೆ ನಿಷೇಧ ಕಾಯ್ದೆ ಸೇರಿದಂತೆ ಎಲ್ಲ ವರ್ಗದ ಏಳಿಗೆಗೆ ಪೂರಕವಾದ ಅಂಶಗಳನ್ನು ಸಂವಿಧಾನದಲ್ಲಿ ಅಳವಡಿಸುವ ಮೂಲಕ ಜಗತ್ತೇ ಒಪ್ಪಿಕೊಳ್ಳುವ ಸಂವಿಧಾನವನ್ನು ಅವರು ರಚಿಸಿದ್ದಾರೆ. ಆದರೆ ಸಮಾಜ ಇಂತಹ ಸಂವಿಧಾನವನ್ನು ಒಪ್ಪಿಕೊಳ್ಳದೇ ಅನುಮಾನದಿಂದ ನೋಡುತ್ತಿದೆ. ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುವುದು ದೊಡ್ಡ ರಾಷ್ಟ್ರದ್ರೋಹದ ಕೆಲಸವಾಗಿದೆ ಎಂದವರು ವಿಷಾಧಿಸಿದರು.

ಬದುಕು, ಭವಿಷ್ಯ ಬರೆಯುವುದೇ ಸಂವಿಧಾನ, ಇದನ್ನು ಅರ್ಥೈಸಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ. ದೇಶಕ್ಕೆ ಸ್ವತಂತ್ರ ಬಂದು 70ವರ್ಷ ಕಳೆದರೂ ಬಡತನ, ನಿರುದ್ಯೋಗ ದೇಶವನ್ನು ಕಾಡುತ್ತಿದೆ ಎಂದರೆ ಸಂವಿಧಾನವನ್ನು ಸರಿಯಾಗಿ ಜಾರಿಗೆ ತಂದಿಲ್ಲ ಎಂದು ಅರ್ಥ, ಸಂವಿಧಾನ ಸರಿಯಾಗಿ ಜಾರಿಗೆ ತರಲು ಉತ್ತಮ ಸರಕಾರವನ್ನು ಆಯ್ಕೆ ಮಾಡಬೇಕು. ಉತ್ತಮ ಸರಕಾರದ ಆಯ್ಕೆಯಲ್ಲಿ ನಾವು ಜಾಗೃತರಾಗಬೇಕೆಂದ ಅವರು, ಭಾರತದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ ಮಾತೆ ಸಾವಿತ್ರಿ ಬಾಪುಲೆ ಅವರ ಕೊಡುಗೆ ದೇಶದ ಶಿಕ್ಷಣ ಕ್ಷೇತ್ರದಲ್ಲಿ ಒಂದು ಕ್ರಾಂತಿಯಾಗಿದೆ ಎಂದ ಅವರು, ಶೋಷಿತ ವರ್ಗ ಶಿಕ್ಷಣವಂತರಾಗಬೇಕು ಎಂದು ಶ್ರಮಿಸಿದ ಸಾವಿತ್ರಿ ಬಾಪುಲೆ ಅನೇಕ ಅವಮಾನಗಳನ್ನು ಎದುರಿಸಿದರು. ಸಾವಿತ್ರಿ ಬಾಪುಲೆ ಅವರ ಹೋರಾಟದ ಫಲ ಡಾ.ಬಿ.ಆರ್. ಅಂಬೇಡ್ಕರ್ ಅಂತವರನ್ನು ಸೃಷ್ಟಿಸಿತು.  ಈ ಎಲ್ಲಾ ಅಂಶಗಳನ್ನು ವಿಧ್ಯಾರ್ಥಿಗಳಿಗೆ ಮನನ ಮಾಡಿಕೊಡುವ ಉದ್ದೇಶದಿಂದ ಬಹುಜನ ವಿಧ್ಯಾರ್ಥಿ ಸಮ್ಮೇಳನ ನಡೆಯುತ್ತಿದೆ ಎಂದರು. 

ಉಪನ್ಯಾಸಕ ಪ್ರೊ. ರಾಘವೇಂದ್ರ ಹಿರೇಮಗಳೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವ ಸಮುದಾಯ ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಶಿಕ್ಷಣವಂತರಾಗಬೇಕು. ಶೋಷಿತ ವರ್ಗ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬದಲಾಗಬೇಕಾದರೆ ಸಂಘಟಿತರಾಗಬೇಕು ಎಂದು ಕರೆ ನೀಡಿದರು.

ಸಮಾರಂಭದಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಬಹುಜನ ವಿಧ್ಯಾರ್ಥಿ ಸಂಘದ ಜಿಲ್ಲಾಧ್ಯಕ್ಷ ರೇವಣ್‍ಮೌರ್ಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಯೋಜಕ ಎಂ.ಎನ್. ಚಿದಂಬರಂ, ನಿವೃತ್ತ ಸೈನಿಕ ವಿಜಯಕುಮಾರ್ ರಾಮನಹಳ್ಳಿ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆ.ಸಿ.ವಸಂತ್‍ಕುಮಾರ್, ಡಿಟಿಸಿ ತರಬೇತಿದಾರ ಅಂಚೆ ಇಲಾಖೆ ಎಂ.ಡಿ. ಲೋಹಿತ್ ಕುಮಾರ್, ಮಾದಿಗ ಮಹಾಸಭಾ ಜಿಲ್ಲಾಧ್ಯಕ್ಷ ರಮೇಶ್ ಸೇರಿದಂತೆ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಕೋರೆಗಾಂವ್ ವಿಜಯೋತ್ಸವ ಶೋಷಿತ ವರ್ಗದವರು ಗೌರವ ಬದುಕಿಗಾಗಿ ನಡೆಸಿದ ಹೋರಾಟ. ಪೇಶ್ವೆಗಳ ಆಡಳಿತದಲ್ಲಿ ಶೋಷಿತ ವರ್ಗವನ್ನು ಅತ್ಯಂತ ಕನಿಷ್ಠವಾಗಿ ನಡೆಸಿಕೊಳ್ಳಲಾಗುತ್ತಿತ್ತು. ಪೇಶ್ವೆಗಳ ವಿರುದ್ಧ ಶೋಷಿತ ಸಮುದಾಯ ಹೋರಾಡಿ ಸೋಲಿಸಿದರು. ನಂತರದ ಬ್ರಿಟಿಷ್ ಆಡಳಿತದಲ್ಲಿ ಲಾರ್ಡ್ ಮೇಕಾಲೆ ಶಿಕ್ಷಣ ಪದ್ಧತಿ ಜಾರಿಗೆ ತಂದರು. ಇದರ ಪರಿಣಾಮ ಎಲ್ಲರೂ ಶಿಕ್ಷಣ ಪಡೆಯುವಂತಾಯಿತು. ಶೋಷಿತ ವರ್ಗ ಶಿಕ್ಷಣವಂತರಾಗಬೇಕು ಮತ್ತು ಸಂಘಟಿತರಾಗಬೇಕು. ಆಗಮಾತ್ರ ಆರ್ಥಿಕವಾಗಿ, ಸಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಶಕ್ತರಾಗಲು ಸಾಧ್ಯ. ಯುವ ಜನಾಂಗ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು.
- ಜೈರಾಮ್, ಚಿಂತಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News