ಬೆಂಗಳೂರಿನಲ್ಲಿ ಮಿರಾಜ್ ಯುದ್ಧ ವಿಮಾನ ಪತನ: ಪೈಲಟ್‌ಗಳಿಬ್ಬರು ಹುತಾತ್ಮ

Update: 2019-02-01 12:43 GMT

ಬೆಂಗಳೂರು, ಫೆ.1: ರಾಜಧಾನಿ ಬೆಂಗಳೂರಿನ ಎಚ್‌ಎಎಲ್ ಆವರಣದಲ್ಲಿ ಪ್ರಾಯೋಗಿಕವಾಗಿ ಹಾರಾಟ ನಡೆಸುತ್ತಿದ್ದ ಮೀರಾಜ್-2000 ಯುದ್ಧ ವಿಮಾನ ಪತನವಾಗಿ ವಾಯುಪಡೆಯ ಇಬ್ಬರು ಪೈಲಟ್‌ಗಳು ಹುತಾತ್ಮರಾಗಿದ್ದಾರೆ.

ಶುಕ್ರವಾರ ಬೆಳಗ್ಗೆ 10:30 ಸುಮಾರಿಗೆ ಈ ದುರ್ಘಟನೆ ನಡೆದಿದ್ದು, ಸಮೀರ್ ಅಬ್ರೋಲ್ ಹಾಗೂ ಸಿದ್ದಾರ್ಥ್ ನೇಗಿ ಹುತಾತ್ಮರಾದ ಪೈಲಟ್‌ಗಳು ಎಂದು ಮೂಲಗಳು ತಿಳಿಸಿವೆ.

ಏನಿದು ಘಟನೆ?: ದುರಂತ ಸಂಭವಿಸಿದ ವಿಮಾನವನ್ನು ಎಚ್‌ಎಎಲ್ ಇತ್ತೀಚಿಗಷ್ಟೆ ಮೇಲ್ದರ್ಜೆಗೆ ಏರಿಸಿತ್ತು. ಇಬ್ಬರು ಪೈಲಟ್‌ಗಳು ಈ ಯುದ್ಧ ವಿಮಾನದಲ್ಲಿ ಕುಳಿತು ಟೇಕಾಫ್ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ತಾಂತ್ರಿಕ ದೋಷದಿಂದ ಹೊಗೆ ಕಾಣಿಸಿಕೊಂಡಿದ್ದು, ಗಗನಕ್ಕೆ ಹಾರುತ್ತಿದ್ದಂತೆ ವಿಮಾನದಲ್ಲಿ ಬೆಂಕಿ ಉಂಟಾಗಿ ಕೆಳಗೆ ಬಿದ್ದಿದೆ ಎಂದು ಹೇಳಲಾಗುತ್ತಿದೆ.

ಅಪಾಯದ ಮುನ್ಸೂಚನೆ ಅರಿತ ಪೈಲಟ್‌ಗಳು ಪ್ರಾಣಾಪಾಯದಿಂದ ಪಾರಾಗಲು ಹೊರಗೆ ಹಾರಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಹೊತ್ತಿ ಉರಿಯುತ್ತಿದ್ದ ಬೆಂಕಿಯ ಕೆನ್ನಾಲಿಗೆಗೆ ಓರ್ವ ಪೈಲಟ್ ಜೀವಂತ ದಹನವಾದರೆ ಮತ್ತೊಬ್ಬ ಪೈಲಟ್‌ಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಮಾನವು ಪತನಗೊಂಡ ತಕ್ಷಣ ಜೋರಾದ ಶಬ್ದ ಬಂದು ದಟ್ಟ ಹೊಗೆ ಕಾಣಿಸಿಕೊಂಡ ಪರಿಣಾಮ ಸುತ್ತಮುತ್ತಲಿನ ಜನರು ಒಂದು ಕ್ಷಣ ಆತಂಕಗೊಂಡರು. ಮೊದಲು ಭೂಕಂಪವಾದಂತೆ ಭಾಸವಾಗಿದ್ದು, ಬಳಿಕ ದಟ್ಟ ಹೊಗೆ ನೋಡಿ ವಿಮಾನ ಪತನವಾಗಿರುವುದು ಕಂಡು ಬಂದಿದೆ ಎನ್ನಲಾಗಿದೆ.

ಘಟನೆ ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದರಾದರೂ ಯುದ್ಧ ವಿಮಾನ ಸುಟ್ಟು ಕರಕಲಾಗಿತ್ತು. ಇನ್ನು, ಇಬ್ಬರು ಪೈಲಟ್‌ಗಳು ದುರ್ಮರಣಕ್ಕೀಡಾಗಿರುವ ಪ್ರಕರಣವನ್ನು ತನಿಖೆ ನಡೆಸಲಾಗುವುದು ಎಂದು ವಾಯುಪಡೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News