ಕೊಡಗು ಮಳೆಹಾನಿ ಸಂತ್ರಸ್ತರಿಗೆ ಮೊದಲ ಹಂತದಲ್ಲಿ 100 ಮನೆಗಳು: ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ

Update: 2019-02-01 11:49 GMT

ಮಡಿಕೇರಿ, ಫೆ.1: ಕೊಡಗಿನ ಮಳೆಹಾನಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು 25 ಕೋಟಿ ರೂ.ಗಳನ್ನು ವಿನಿಯೋಗಿಸುವುದಾಗಿ ನೀಡಿದ್ದ ಭರವಸೆಗೆ ಬದ್ಧವಾಗಿ ಮೊದಲ ಹಂತದಲ್ಲಿ 100 ಮನೆಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ತಿಳಿಸಿದ್ದಾರೆ.

ಮಡಿಕೇರಿ ತಾಲೂಕಿನ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.   ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದೇನೆ. ಪುನರ್ವಸತಿ ಕಲ್ಪಿಸುವುದಕ್ಕಾಗಿ ಜಾಗ ಪರಿಶೀಲನೆ ನಡೆಸಲಾಗುತ್ತಿದೆ. ಸರಕಾರ ಈಗಾಗಲೇ ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ಆ ಯೋಜನೆಯಂತೆ ನಮ್ಮ ಗುತ್ತಿಗೆದಾರರು ಮನೆ ನಿರ್ಮಾಣ ಮಾಡಲಿದ್ದಾರೆ. ಮೊದಲ ಹಂತದಲ್ಲಿ 100 ಮನೆ, 2 ನೇ ಹಂತದಲ್ಲಿ ಮತ್ತೆ 100 ಮನೆಗಳನ್ನು ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಜಾಗ ಗುರುತಿಸಿ, ಅನುಮತಿ ಪತ್ರ ನೀಡುವಂತೆ ಸರ್ಕಾರದ ಬಳಿ ಮನವಿ ಮಾಡಿದ್ದೆವು, ಅದಕ್ಕೆ ಈಗ ಸರ್ಕಾರ ಒಪ್ಪಿಕೊಂಡಿದೆ, ನಾವು ನಮ್ಮ ಕಾರ್ಯ ಮಾಡುತ್ತಿದ್ದೇವೆ. ಸಂತ್ರಸ್ತರ ಖಾಸಗಿ ಜಾಗದಲ್ಲೂ ಮನೆ ನಿರ್ಮಿಸಿಕೊಡಲು ನಾವು ಸಿದ್ದರಿದ್ದೇವೆ, ಆದರೆ ಸಂತ್ರಸ್ತರ ಪಟ್ಟಿಯಲ್ಲಿ ಫಲಾನುಭವಿಗಳ ಹೆಸರಿರಬೇಕು. ನಮ್ಮ ಕೈಲಾದ ಮಟ್ಟಿಗೆ ನಾವು ಸಂತ್ರಸ್ತರಿಗೆ ನೆರವಾಗುತ್ತೇವೆ ಎಂದು ಸುಧಾಮೂರ್ತಿ ತಿಳಿಸಿದರು.

ಪ್ರಕೃತಿ ವಿಕೋಪದಲ್ಲಿ ಹಾನಿಗೊಳಗಾದ ರಸ್ತೆಗಳ ತ್ವರಿತವಾಗಿ ದುರಸ್ತಿ ಪಡಿಸಿ ಸಂಪರ್ಕ ಕಲ್ಪಿಸಿರುವುದು ಶ್ಲಾಘನಾರ್ಹ ಕ್ರಮ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News