‘ಲಾಲಿಪಪ್’ ಕೊಡುವಲ್ಲಿಯೂ ಕೇಂದ್ರ ಸರಕಾರ ವಿಫಲ: ಉಪಮುಖ್ಯಮಂತ್ರಿ ಪರಮೇಶ್ವರ್

Update: 2019-02-01 12:36 GMT

ಬೆಂಗಳೂರು, ಫೆ. 1: ಕರ್ನಾಟಕ ಸರಕಾರ ಸಾಲಮನ್ನಾ ಮಾಡಿದ್ದ ವೇಳೆ ರೈತರಿಗೆ ‘ಲಾಲಿಪಪ್’ ನೀಡಿದ್ದಾರೆಂದು ಪ್ರಧಾನಿ ಮೋದಿ ಟೀಕಿಸಿದ್ದರು. ಆದರೆ, ಆ ‘ಲಾಲಿಪಪ್’ ಕೊಡುವಲ್ಲಿಯೂ ಕೇಂದ್ರ ಸರಕಾರ ವಿಫಲವಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಲೇವಡಿ ಮಾಡಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕೇಂದ್ರ ಸರಕಾರ ಮಂಡಿಸಿರುವ ಆಯವ್ಯಯ ಕೇವಲ ರಾಜಕೀಯ ದೃಷ್ಟಿ ಹೊಂದಿದ್ದು, ರೈತರು, ಸಾಮಾನ್ಯಜನರು, ಯುವಜನರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದರು.

ಕೇಂದ್ರ ಮಂಡಿಸಿರುವುದು ಸಂಪೂರ್ಣ ಬಜೆಟ್ ಅಲ್ಲ. ಕೇವಲ ಲೇಖಾನುದಾನ ಅನುಮತಿ ಪಡೆಯಲು ಮಾತ್ರ. ಇದರಲ್ಲೂ ಯಾವುದೆ ಯೋಜನೆಗಳನ್ನು ಘೋಷಿಸದೆ ಇರುವುದು ನಿರೀಕ್ಷೆ ಹುಸಿ ಮಾಡಿದೆ. ಆದ್ಯತಾ ಇಲಾಖೆಗಳಿಗೂ ನಿರೀಕ್ಷಿತ ಅನುದಾನ ನೀಡಿಲ್ಲ. ಕೆಲವೇ ತಿಂಗಳಲ್ಲಿ ಬರಲಿರುವ ಲೋಕಸಭೆ ಚುನಾವಣೆ ದೃಷ್ಟಿಯಿಂದ ಕೊಟ್ಟಿರುವ ಬಜೆಟ್ ಇದಾಗಿದೆ. ಬಜೆಟ್‌ನಲ್ಲಿ ಇವರ ಸಾಧನೆಗಳ ಹೆಸರಿನಲ್ಲಿ ಸತ್ಯಕ್ಕೆ ದೂರವಾದ ಅನೇಕ ವಿಷಯಗಳನ್ನು ಉಲ್ಲೇಖಿಸಿದ್ದಾರೆ. ಆರ್ಥಿಕ ಪರಿಸ್ಥಿತಿ, ಉದ್ಯೋಗ ಕಲ್ಪಿಸಿಕೊಡುವ ಯಾವ ಯೋಜನೆಯನ್ನೂ ನೀಡಿಲ್ಲ. ಹಳೆಗಾಡಿಗೆ ಆಯುಧ ಪೂಜೆ ಮಾಡಿದಂತೆ ಈ ಬಜೆಟ್ ಇದೆ. ಆಯವ್ಯಯದಲ್ಲಿ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಬಹುದೆಂಬ ನಿರೀಕ್ಷೆ ಇತ್ತು. ಸಾಲಮನ್ನಾ ಘೋಷಿಸಬಹುದಿತ್ತು. ಆದರೆ, ಕೇವಲ 6 ಸಾವಿರ ರೂ.ಖಾತೆಗೆ ಹಾಕುವುದಾಗಿ ಹೇಳಿದ್ದಾರೆ. ಅದೂ ಮೂರು ಕಂತಿನಲ್ಲಿ. ಕೇವಲ 2 ಸಾವಿರ ರೂ.ಗಳಿಗೆ ರೈತರು ಕಾಯಬೇಕೆ? ರೈತರಿಗೆ 6 ಸಾವಿರ ರೂ.ನೀಡುವ ಯೋಜನೆ ಮೂಲಕ ರೈತರನ್ನು ತೃಪ್ತಿ ಪಡಿಸಲು ಹೊರಟಿದ್ದು ಸರಿಯಲ್ಲ. ಕನಿಷ್ಠ ಪಕ್ಷ ರೈತರ ಬೆಳೆಗೆ ಸೂಕ್ತ ಬೆಲೆ ಕೊಡಿಸುವ ನಿಟ್ಟಿನಲ್ಲಿ ಯೋಜನೆ ತರಬಹುದಿತ್ತು ಎಂದರು.

ಕೈಗಾರಿಕೆ ಕ್ಷೇತ್ರಕ್ಕೂ ಯಾವುದೇ ಉತ್ತೇಜನ ನೀಡಿಲ್ಲ. ಪ್ರಧಾನಿ ಅವರ ಮೇಕ್ ಇನ್ ಇಂಡಿಯಾ ಎಂಬ ಹೇಳಿಕೆ ಬಿಟ್ಟರೆ, ಕೈಗಾರಿಕೆ ಕ್ಷೇತ್ರದ ಪ್ರೋತ್ಸಾಹ ನೀಡಿಲ್ಲ. ನೋಟು ಅಮಾನ್ಯೀಕರಣದಿಂದ ಎಷ್ಟೆಲ್ಲ ಕಪ್ಪುಹಣ ಬಂದಿದೆ ಎಂಬ ಮಾಹಿತಿ ಬಹಿರಂಗ ಪಡಿಸಬೇಕಿತ್ತು.

ಸಮಾಜ ಕಲ್ಯಾಣ ಇಲಾಖೆಗೆ ಕೇವಲ 70 ಸಾವಿರ ಕೋಟಿ ರೂ.ಮೀಸಲಿಟ್ಟಿದ್ದಾರೆ. ಕರ್ನಾಟಕ ರಾಜ್ಯದಲ್ಲಿ 27ಸಾವಿರ ಕೋಟಿ ರೂ.ನೀಡಿದ್ದೇವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೂ ಬಜೆಟ್‌ನಲ್ಲಿ ಅನ್ಯಾಯ ಮಾಡಿದ್ದಾರೆ. ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯಾಗಿದ್ದು ಬಿಟ್ಟರೆ, ಸರಕಾರಿ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News