ಬಿಜೆಪಿ ಸರಕಾರ ಸಂವಿಧಾನದ ಆಶಯಗಳಿಗೆ ಮಾರಕ: ಮಾವಳ್ಳಿ ಶಂಕರ್

Update: 2019-02-01 18:39 GMT

ಚಿಕ್ಕಮಗಳೂರು, ಫೆ.1: ಕೇಂದ್ರದ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರಕಾರ ಸಂವಿಧಾನದ ಧ್ಯೇಯೋದ್ದೇಶಗಳನ್ನು ವಿಕಾರಗೊಳಿಸುತ್ತಿದೆ. ಇದರ ಬಗ್ಗೆ ಎಚ್ಚರ ವಹಿಸಬೇಕಾಗಿದೆ ಎಂದು ರಾಜ್ಯದ ಹಿರಿಯ ದಲಿತ ಹೋರಾಟಗಾರ ಹಾಗೂ ಅಂಬೇಡ್ಕರ್ ವಾದ ದಲಿತ ಸಂಘರ್ಷ ಸಮಿತಿಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಎಚ್ಚರಿಸಿದ್ದಾರೆ.  

ಕರ್ನಾಟಕ ದಲಿತ ಸಂಘರ್ಷ ಸಮಿತಿ( ಅಂಬೇಡ್ಕರ್ ವಾದ) ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಮೈಸೂರು ವಿಭಾಗ ಮಟ್ಟದ  ಸಂವಿಧಾನ ಸಂರಕ್ಷಣಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನ ಉಳಿದರೆ ಪ್ರಜಾ ಪ್ರಭುತ್ವ ಉಳಿಯುತ್ತದೆ. ಆದರೆ ಸಂವಿಧಾನದ ಆಶಯಗಳನ್ನೇ ತಿರುಚುವ ಸಂಚನ್ನು ಕೇಂದ್ರ ಸರಕಾರ ಹಾಗೂ ಮನುವಾದಿಗಳು ನಿರಂತರವಾಗಿ ಮಾಡುತ್ತಿದ್ದಾರೆ. ಸಂವಿಧಾನವನ್ನು  ಬದಲಾಯಿಸುತ್ತೇವೆಂಬ ಮಾತುಗಳನ್ನು ಬಿಜೆಪಿಯ ಸಂಸದರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಈ ಬಗ್ಗೆ ಸಂವಿಧಾನ ಪರವಾಗಿರುವ ನಾಗರಿಕರು ತಮ್ಮ ಹೋರಾಟವನ್ನು ತೀವ್ರಗೊಳಿಸಬೇಕಾಗಿದೆ ಎಂದ ಅವರು, ಸಂವಿಧಾನ ರಕ್ಷಣೆ ಇಂದಿನ ತುರ್ತು ಆವಶ್ಯಕತೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಅಂಬೇಡ್ಕರ್ ಅವರು ಸಮಸಮಾಜದ ಕನಸಿನೊಂದಿಗೆ ಮೀಸಲಾತಿಯ ಕಲ್ಪನೆಯನ್ನು ಜಾರಿ ಮಾಡಿದರು. ಆದರೆ ಕೋಮುವಾದಿ ಮನಸ್ಥಿತಿಯವರು ಮೀಸಲಾತಿಯೇ ಬೇಡ ಎನ್ನುತ್ತಲೇ ಮೇಲ್ವರ್ಗದವರಿಗೆ ಮೀಸಾಲತಿ ಜಾರಿ ಮಾಡಿ, ಶತಶತಮಾನಗಳಿಂದ ಶೋಷಿತರಾಗಿರುವ ತಳ ಸಮುದಾಯದವರಿಗೆ ನ್ಯಾಯ ಕೊಡಿಸುವ ಮೀಸಲಾತಿಯ ಆಶಯವನ್ನೇ ಕೊನೆಗಾಣಿಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಕೋಮುವಾದಿಗಳ ಜೊತೆ ಹೋಗುತ್ತಿರುವ ದಲಿತ ಸಮುದಾಯದ ಯುವಪೀಳಿಗೆ ಈ ಬಗ್ಗೆ ಅತ್ಯಂತ ಜಾಗರೂಕತೆಯ ಹೆಜ್ಜೆ ಇಡಬೇಕೆಂದು ಕಿವಿಮಾತು ಹೇಳಿದರು.

ದಲಿತ ಚಳುವಳಿ ಶೋಷಿತ ಸಮುದಾಯದಲ್ಲಿ ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಂಡು ಬರುತ್ತಿದೆ. ದಲಿತ ಹೋರಾಟದ ತ್ಯಾಗ, ಬಲಿದಾನ ಮಾಡಿದ ಹೋರಾಟಗಾರರ ನೋವನ್ನು ಅರ್ಥ ಮಾಡಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ದಲಿತ ಸಂಘಟನೆಗಳಲ್ಲಿ ಕವಲುಗಳಾಗಿರಬಹುದು. ಹಿಂದಿನ ಹೋರಾಟಗಳು, ಹಿಂದಿನ ಚಳವಳಿಗಳು ಇಂದಿನ ಯುವಪೀಳಿಗೆಗೆ ಮಾರ್ಗದರ್ಶಕವಾಗಿವೆ. ಪ್ರಪಂಚ ಹಾಗೂ ದೇಶಾದ್ಯಂತ ಬದಲಾವಣೆಗಳಾಗುತ್ತಿವೆ. ಭತ್ತ ಬೆಳೆಯುವ ರೈತ ಬೆತ್ತಲಾಗುತ್ತಿದ್ದಾನೆ. ದತ್ತಪೀಠದ ವಿಚಾರಗಳು ಜೋರಾಗುತ್ತಿವೆ ಎಂದು ಹೇಳಿದ ಶಂಕರ್, ರಾಮಮಂದಿರ ಬೇಕೇ, ಚುನಾವಣೆ ಸಂದರ್ಭದಲ್ಲಿ ಮಂದಿರ, ದೇವರುಗಳ ವಿಚಾರ ಏಕೆ ಬರುತ್ತದೆ? ಸಂವಿಧಾನದ ಆಶಯ ಈಡೇರಿದೆಯೇ? ಎಂದು ಪ್ರಶ್ನಿಸಿದರು.

ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾಗಿದ್ದ ಅಂಬೇಡ್ಕರ್ ವಾದಿ ಹಾಗೂ ಬರಹಗಾರ ನಾಗ ಸಿದ್ದಾರ್ಥ ಹೊಲೆಯಾರ್ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನ ಬ್ರಾಹ್ಮಣ್ಯರಾದಿಯಾಗಿ ಎಲ್ಲಾ  ಜಾತಿ, ಮತ, ಧರ್ಮೀಯ ಪ್ರತಿಯೊಬ್ಬರನ್ನು ರಕ್ಷಣೆ ಮಾಡುತ್ತಿದೆ. ಆದರೆ ಸಂವಿಧಾನದ ರಕ್ಷಣೆಗೆ ದಲಿತರು ಮುಂದಾಗಿರುವುದು ವಿಶೇಷವಾಗಿದೆ ಎಂದು ಹೇಳಿದ ಅವರು, 1911ರಲ್ಲಿ ಪದವೀಧರರು ಭೂಮಾಲಕರು ಮತ್ತು ತೆರಿಗೆದಾರರಿಗೆ ಮಾತ್ರ ಸೀಮಿತವಾಗಿದ್ದ ಮತದಾನದ ಹಕ್ಕನ್ನು ಕೇವಲ 28 ವರ್ಷ ವಯಸ್ಸಿನ ಯುವಕ ಅಂಬೇಡ್ಕರ್ ಎಲ್ಲರಿಗೂ ಮತದಾನದ ಹಕ್ಕನ್ನು ಕೊಡಿಸುವ ಹೋರಾಟದಲ್ಲಿ ಯಶಸ್ವಿಯಾದರು ಎಂದು ಸಂವಿಧಾನದ ರಚನೆಯ ಮಾಹಿತಿಯನ್ನು ವಿವರಿಸಿದರು.

ಮೀಸಲಾತಿಗೂ ನಿರುದ್ಯೋಗಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಮೀಸಲಾತಿಯ ಬಗ್ಗೆ ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸಲಾಗುತ್ತಿದೆ. ಮೀಸಲಾತಿಯಿಂದ ಯಾವುದೇ ಸಮುದಾಯಕ್ಕೂ ಅನ್ಯಾಯವಾಗಿಲ್ಲ. ಎಲ್ಲಾ ಸಮುದಾಯಕ್ಕೂ ದೇಶದಲ್ಲಿ ಶೇ.50 ರಷ್ಟು ಮೀಸಲಾತಿ ದೊರೆಯುತ್ತಿದೆ ಎಂದು ವಿವರಿಸಿದ ನಾಗಸಿದ್ದಾರ್ಥ ಅವರು, ಸಂವಿಧಾನದ ಬಲ ಮತ್ತು ಮೀಸಲಾತಿಯ ಫಲದಿಂದ ನೌಕರಿ ಪಡೆದಿರುವ ದಲಿತ ಸಮುದಾಯದ ನೌಕರರು ತಾವು ಬಂದ ಸಮಾಜವನ್ನು ಕಡೆಗಣಿಸಿದ್ದಾರೆ. ದಲಿತ ಸಮಾಜ ಮತ್ತು ದಲಿತ ನೌಕರರ ಮಧ್ಯೆ ದೊಡ್ಡ ಕಂದಕ ಏರ್ಪಟ್ಟಿದ್ದು, ತಾವು ಬಂದ ಸಮಾಜಕ್ಕೆ ತಮ್ಮ ಸಂಪಾದನೆಯ ಸ್ವಲ್ಪಭಾಗ ನೀಡುವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸಬೇಕೆಂದು ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮೈಸೂರು ವಿಭಾಗೀಯ ಸಂಚಾಲಕ ಮಲ್ಲೇಶ್ ಅಂಬುಗ, ಇತ್ತೀಚೆಗೆ ಕೇಂದ್ರ ಸಚಿವ ಅನಂತ್‍ ಕುಮಾರ್ ಹೆಗಡೆಯಂತಹ ನೀಚರು ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಸಂಸತ್ತಿನಲ್ಲಿ ಅನುಮತಿಯಿಲ್ಲದಿದ್ದರೂ ಮೇಲ್ವರ್ಗದವರಿಗೆ ಶೇ.10 ರಷ್ಟು ಮೀಸಲಾತಿ ಕಲ್ಪಿಸುವ ಕಾನೂನು ಜಾರಿಗೊಳಿಸುತ್ತಿದ್ದಾರೆ. ಇಂತಹ ಸಂವಿಧಾನ ವಿರೋಧಿ ಪ್ರಯತ್ನಗಳು ನಡೆಯುತ್ತಿರುವುದರಿಂದ ರಾಜ್ಯದ ಎಲ್ಲಾ ಕಂದಾಯ ವಿಭಾಗಗಳಲ್ಲಿ ಸಂವಿಧಾನ ಸಂರಕ್ಷಣೆಯ ಸಮಾವೇಶಗಳು ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಜಿಲ್ಲಾ ಸಂಚಾಲಕ ಲಿಂಗರಾಜ್ ಮಲ್ಲಾಡಿ ಸ್ವಾಗತಿಸಿದರು. ಲಕ್ಷ್ಮಣ್ ಬೇಲೂರು ನಿರೂಪಣೆ ಮಾಡಿ, ಮಹೇಂದ್ರ ಸ್ವಾಮಿ ವಂದಿಸಿದರು. ಮೈಸೂರು ವಿಭಾಗದ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ನಗರದ ತಾಲೂಕು ಕಚೇರಿ ಆವರಣದಿಂದ ಅಂಬೇಡ್ಕರ್ ಭವನದವರೆಗೆ ಬೃಹತ್ ಮೆರವಣಿಗೆ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News