'ಅಧಿಕಾರಿಗಳು ನನ್ನನ್ನು ಬಂಧಿಸಿದರೂ ನನಗೆ ಯಾವುದೇ ಸಮಸ್ಯೆ ಇಲ್ಲ'

Update: 2019-02-02 04:07 GMT

ಕೊಲ್ಕತ್ತಾ, ಫೆ. 2: ಪ್ರಧಾನಿ ನರೇಂದ್ರ ಮೋದಿಯವರು ವಿರೋಧಿ ರಾಜಕೀಯ ಮುಖಂಡರನ್ನು ಅವಮಾನಿಸುವ ಸಲುವಾಗಿ, ನೋಟಿಸ್ ನೀಡುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪ ಮಾಡಿದ್ದಾರೆ. 

"ಅಧಿಕಾರಿಗಳು ನನ್ನನ್ನು ಬಂಧಿಸಿದರೂ ನನಗೆ ಯಾವುದೇ ಸಮಸ್ಯೆ ಇಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ನಾನು ಮಧ್ಯಂತರ ಬಜೆಟ್ ವಿರೋಧಿಸಿ ಒಂದಷ್ಟು ನಿಮ್ಮ ಮುಂದೆ ಮಾತನಾಡಿದ್ದೇನೆ. ಇದಕ್ಕಾಗಿ ಅಧಿಕಾರಿಗಳು ನನ್ನನ್ನು ಬಂಧಿಸಿದರೂ ಸಮಸ್ಯೆ ಇಲ್ಲ" ಎಂದು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದರು.

"ಇದಕ್ಕೆ ನಾನು ಅಧಿಕಾರಿಗಳ ಮೇಲೆ ಗೂಬೆ ಕೂರಿಸುವುದಿಲ್ಲ. ಏಕೆಂದರೆ ಅವರ ಮೇಲೆ ಒತ್ತಡ ಇದೆ. ನರೇಂದ್ರ ಮೋದಿ ಅಧಿಕಾರಿಗಳನ್ನು ಮನೆಗೆ ಕರೆಸಿಕೊಳ್ಳುತ್ತಾರೆ ಎಂದು ಕೇಳಲ್ಪಟ್ಟಿದ್ದೇನೆ. ಬಳಿಕ ಅವರು ವಿರೋಧ ಪಕ್ಷಗಳ ಮುಖಂಡರನ್ನು ಜನರ ದೃಷ್ಟಿಯಲ್ಲಿ ಕೀಳಾಗಿ ಬಿಂಬಿಸುವಂತೆ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚಿಸುತ್ತಾರೆ" ಎಂದು ಆಪಾದಿಸಿದರು.

ಒಂದು ದಿನ ನಮ್ಮ ಮನೆಯ ಅಡುಗೆಯವನನ್ನು ಸರ್ಕಾರಿ ಏಜೆನ್ಸಿಗಳು ವಿಚಾರಣೆಗೆ ಗುರಿಪಡಿಸಿದರೂ ಆಶ್ಚರ್ಯವಿಲ್ಲ ಎಂದು ತೃಣಮೂಲ ಕಾಂಗ್ರೆಸ್ ನಾಯಕಿ ವ್ಯಂಗ್ಯವಾಡಿದರು.

ದಕ್ಷಿಣ ಕೊಲ್ಕತ್ತಾದ ಕಾಳಿಘಾಟ್ ನಿವಾಸದಲ್ಲಿನ ತಮ್ಮ ಕಚೇರಿಯಲ್ಲಿ ಧೀರ್ಘಾವಧಿಯಿಂದ ಕಾರ್ಯದರ್ಶಿಯಾಗಿರುವ ಮಾಣಿಕ್ ಮಜೂಂದಾರ್ ಅವರನ್ನು ಸಿಬಿಐ ಅಧಿಕಾರಿಗಳು ಶಾರದಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಗುರಿಪಡಿಸಿದ ಹಿನ್ನೆಲೆಯಲ್ಲಿ ಮಮತಾ ಈ ಪ್ರತಿಕ್ರಿಯೆ ನೀಡಿದರು.

"ನಾವು ರಾಜಕೀಯ ಮಾಡುವಷ್ಟು ಪರಿಶುದ್ಧ ಹೃದಯದಿಂದ ಯಾರೂ ರಾಜಕೀಯ ಮಾಡಲಾಗದು" ಎಂದು ಮೋದಿಗೆ ಬ್ಯಾನರ್ಜಿ ಸವಾಲು ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News