ಹಂಪಿಯ ಸ್ಮಾರಕ ಕಂಬಗಳನ್ನು ಉರುಳಿಸಿದ ಕಿಡಿಗೇಡಿ: ವೀಡಿಯೊ ವೈರಲ್

Update: 2019-02-02 08:55 GMT

ಬಳ್ಳಾರಿ, ಫೆ. 2:  ಹಂಪಿಯದ್ದೆಂದು ಹೇಳಲಾದ ಪ್ರಾಚೀನ ದೇವಳದ ಕಂಬಕ್ಕೆ ವ್ಯಕ್ತಿಯೊಬ್ಬ ಹಾನಿಯೆಸಗುತ್ತಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಈ ಪಾರಂಪರಿಕ ತಾಣಕ್ಕೆ ರಕ್ಷಣೆಯೊದಗಿಸುವಂತೆ ಸ್ಥಳೀಯರು ಬೇಡಿಕೆಯಿಟ್ಟಿದ್ದಾರೆ.

ಎರಡು ವಾರಗಳ ಹಿಂದೆಯಷ್ಟೇ ಟೈಮ್ ಮ್ಯಾಗಜೀನ್ ಹಂಪಿ ವಿಶ್ವ ಪಾರಂಪರಿಕ ತಾಣವನ್ನು 2019ರಲ್ಲಿ ಅಗತ್ಯ ನೋಡಬೇಕಾದ ಸ್ಥಳಗಳ ಪೈಕಿ ಎರಡನೇ  ಸ್ಥಾನದಲ್ಲಿರಿಸಿತ್ತು. ಇದು ಸ್ಥಳೀಯರಿಗೆ ಹೆಮ್ಮೆಯ ಸಂಗತಿಯಾಗಿತ್ತು.

''ಅವರು ಎಲ್ಲಿಂದಲೋ  ಬಂದು ನಮ್ಮ ಹಂಪಿಯನ್ನು ನಾಶಗೈಯ್ಯುತ್ತಾರೆ'' ಎಂಬ ಶೀರ್ಷಿಕೆಯನ್ನು ನೀಡಲಾದ ಈ ವೀಡಿಯೊ ವಾಟ್ಸ್ಆ್ಯಪ್ ನಲ್ಲಿ ಹರಿದಾಡುತ್ತಿದೆ.

ಮೂಲತಃ ಮಧ್ಯ ಪ್ರದೇಶದವರಾದ ಹಾಗೂ ಬೆಂಗಳೂರು ನಿವಾಸಿಯಾಗಿರುವ ಆಯುಷ್ ಎಂಬವರು ಇನ್‍ಸ್ಟಾಗ್ರಾಂನಲ್ಲಿ ಈ ವೀಡಿಯೊ ಪೋಸ್ಟ್ ಮಾಡಿ ಅಧಿಕಾರಿಗಳು ಇಂತಹ ಜನರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ.

ಹಂಪಿಯ ಸ್ಮಾರಕಗಳಿಗೆ ಸೂಕ್ತ ರಕ್ಷಣೆಗೆ ಆಗ್ರಹಿಸಿ ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆ ಪ್ರತಿಭಟನೆ ನಡೆಸಲು ಸಜ್ಜಾಗಿದೆ. ಹಂಪಿಯ ರಕ್ಷಣೆಗೆ ರಾಜ್ಯ ಪುರಾತತ್ವ ಇಲಾಖೆ, ಭಾರತದ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮತ್ತು ಹಂಪಿ ವಿಶ್ವ ಪಾರಂಪರಿಕ ತಾಣ ನಿರ್ವಹಣಾ ಪ್ರಾಧಿಕಾರ ಹಾಗೂ ಒಬ್ಬ ಡಿವೈಎಸ್ಪಿ ಇದ್ದರೂ ಹಾನಿಯನ್ನು ತಡೆಯಲು ಸಾಧ್ಯವಾಗಿಲ್ಲ ಎಂದು ಸಂಘಟನೆ ಹೇಳಿಕೊಂಡಿದೆ.

''2016ರಲ್ಲಿ ದುಷ್ಕರ್ಮಿಗಳು ಅಚ್ಯುತ ರಾಯ ಬಜಾರಿನ ಕಂಬಗಳಿಗೆ ಹಾನಿಯೆಸಗಿದ್ದರು. ವಿರೂಪಾಕ್ಷ ಬಜಾರದ ಕಂಬಗಳನ್ನು ಪುರಾತತ್ವ ಇಲಾಖೆಯೇ ಕೆಡವಿತ್ತು'' ಎಂದು ಸೇನೆಯ ಸಂಚಾಲಕ ವಿಶ್ವನಾಥ್ ಮಳಗಿ ಹೇಳಿದ್ದಾರೆ.

ಕಂಬಕ್ಕೆ ಹಾನಿಯೆಸಗಿರುವ ವೀಡಿಯೊ ಬಗ್ಗೆ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿ ಕಾಳಿಮುತ್ತು ಅವರಲ್ಲಿ ಕೇಳಿದಾಗ ಆರಂಭದಲ್ಲಿ ಇದು ಹಂಪಿಯದ್ದಲ್ಲ ಎಂದು ಅವರು ಹೇಳಿದರೂ ನಂತರ ತಮ್ಮ ಸಿಬ್ಬಂದಿಯಲ್ಲಿ ಚರ್ಚಿಸಿ ''ಇದು ಹಂಪಿಯದ್ದೇ ಆದರೆ ಇತ್ತೀಚಿಗಿನದ್ದಲ್ಲ, ಹಳೆಯದು ಆಗ ಈ ಬಗ್ಗೆ ದೂರು ಕೂಡ ನೀಡಲಾಗಿತ್ತು'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News