ಮೊಬೈಲ್ ಅಂಗಡಿಗಳಿಗೆ ನುಗ್ಗಿ ಕಳ್ಳತನ: ಇಬ್ಬರ ಬಂಧನ- ಲಕ್ಷಾಂತರ ರೂ. ಮೌಲ್ಯದ ಸೊತ್ತು ವಶ

Update: 2019-02-02 14:23 GMT

ಹಾಸನ,ಫೆ.2: ತಾಲೂಕಿನ ಶಾಂತಿಗ್ರಾಮದಲ್ಲಿ ಇತ್ತಿಚಿಗೆ ನಡೆದಿದ್ದ ಮೂರು ಮೊಬೈಲ್ ಅಂಗಡಿಗಳ ಸರಣಿ ಕಳ್ಳತನ ಮಾಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಕಳ್ಳತನವಾಗಿದ್ದ ಮೊಬೈಲ್ ಮತ್ತು ಬಿಡಿ ಭಾಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್‍ಗೌಡ ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ 16 ರಂದು ಶಾಂತಿಗ್ರಾಮದ ಬಸ್‍ ನಿಲ್ದಾಣದ ಬಳಿ ಇದ್ದ ಮೂರು ಮೊಬೈಲ್ ಅಂಗಡಿಗಳಲ್ಲಿ ಬೆಂಗಳೂರು ಮೂಲದ ಗಣೇಶ್ ಹಾಗೂ ಮನೋಜು ಎಂಬ ಬಾಲಕ ಸೇರಿ ಸುಮಾರು 45 ಮೊಬೈಲ್‍, ಅದರ ಬಿಡಿ ಭಾಗಗಳನ್ನು ಹಾಗೂ ಡಿವಿಆರ್ ಸೇರಿದಂತೆ ಲಕ್ಷಾಂತರ ರೂ. ಗಳಿಗೂ ಹೆಚ್ಚಿನ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದರು ಎಂದರು. 

ಸಿಂಗಂ ಚಿತ್ರದಲ್ಲಿ ಬರುವ ಒಂದು ದೃಶ್ಯದಿಂದ ಪ್ರಭಾವಿತನಾಗಿದ್ದ ಬೆಂಗಳೂರು ಮೂಲದ ಪಿಯುಸಿ ಓದುತ್ತಿದ್ದ ಯುವಕ ಬೀಗ ಮುರಿದು ಮೊಬೈಲ್ ಕಳವು ಮಾಡಿರುವುದನ್ನು ಒಪ್ಪಿಕೊಂಡಿರುವುದಾಗಿ ವಿವರಿಸಿದರು. ಈತ ಬೆಂಗಳೂರಿನಿಂದ ಶಾಂತಿಗ್ರಾಮದ ತನ್ನ ಸಂಬಂಧಿಕರ ಮನೆಗೆ ಬಂದಿದ್ದಾಗ ಈ ಬಗ್ಗೆ ಪ್ಲಾನ್ ಮಾಡಿದ್ದು, ಬಳಿಕ ನಿಗದಿಯಂತೆ ಒಂದೇ ದಿನ ಮೂರು ಮೊಬೈಲ್ ಅಂಗಡಿಗಳಲ್ಲಿ ಕಳವು ಮಾಡಿ 3 ಲಕ್ಷ ರೂ. ಮೌಲ್ಯದ 42 ಕ್ಕೂ ಹೆಚ್ಚು ಮೊಬೈಲ್‍ಗಳನ್ನು ದೋಚಿ ಪರಾರಿಯಾಗಿದ್ದ. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳ ಬೆನ್ನತ್ತಿದ್ದರು. ಬಳಿಕ ಬೆಂಗಳೂರು ಮೂಲದ ಗಣೇಶ್ ಹಾಗೂ ಆತನೊಂದಿಗೆ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ. ಬಂಧಿತರಿಂದ ಸುಮಾರು 3 ಲಕ್ಷ ರೂ ಮೌಲ್ಯದ 42ಕ್ಕೂ ಹೆಚ್ಚು ಮೊಬೈಲ್‍ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ವೃತ್ತ ನಿರೀಕ್ಷಕರಾದ ವಸಂತ್, ಠಾಣಾಧಿಕಾರಿ ಕೃಷ್ಣ, ಸಿಬ್ಬಂದಿಗಳಾದ ಸುಬ್ರಹ್ಮಣ್ಯ, ದೇವರಾಜ್, ಮಂಜುನಾಥ್, ಝುಲ್ಫಿಕರ್ ಅಹಮದ್, ಪೀರ್ ಖಾನ್, ರೂಪೇಶ್, ಲೋಕನಾಥ್ ಅವರ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್‍ಗೌಡ ಅವರು ಶ್ಲಾಘನೆ ವ್ಯಕ್ತಪಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News