ಟ್ರಂಪ್ ಹೊಸ ನಿರ್ಧಾರದಿಂದ ಪರಮಾಣು ಸಂಘರ್ಷದ ಅಪಾಯದಲ್ಲಿ ಜಗತ್ತು !

Update: 2019-02-02 14:55 GMT

ವಾಶಿಂಗ್ಟನ್, ಫೆ. 2: ಪರಮಾಣು ಅಸ್ತ್ರಗಳನ್ನು ನಿಯಂತ್ರಣದಲ್ಲಿರಿಸಲು ಅಮೆರಿಕ ರಶ್ಯದ ಜೊತೆಗೆ ಮೂರು ದಶಕಗಳಿಂದ ನಡೆಸುತ್ತಿರುವ ಪ್ರಯತ್ನಗಳನ್ನು ಕೊನೆಗೊಳಿಸಲು ಡೊನಾಲ್ಡ್ ಟ್ರಂಪ್ ಉತ್ಸುಕರಾಗಿರುವಂತೆ ಕಂಡುಬರುತ್ತಿದೆ.

 ಇನ್ನು 6 ತಿಂಗಳಲ್ಲಿ ‘ಮಧ್ಯಮ ವ್ಯಾಪ್ತಿಯ ಪರಮಾಣು ಶಸ್ತ್ರಗಳ ಒಪ್ಪಂದ’ದಿಂದ ಸಂಪೂರ್ಣವಾಗಿ ಹಿಂದೆಗೆಯಲು ಅಮೆರಿಕ ನಿರ್ಧರಿಸಿದೆ. ಅದಕ್ಕೂ ಮುನ್ನ ಈ ಒಪ್ಪಂದದಡಿಯಲ್ಲಿ ಬರುವ ಅಮೆರಿಕದ ಬಾಧ್ಯತೆಗಳನ್ನು ಅಮಾನತಿನಲ್ಲಿರಿಸಲು ಅದು ಮುಂದಾಗಿದೆ.

ಅದು ಸಂಭವಿಸಿದರೆ, ಜಗತ್ತಿನ ಎರಡು ಬೃಹತ್ ಪರಮಾಣು ಶಕ್ತಿಗಳ ನಡುವೆ ಉಳಿಯುವುದು ಕೇವಲ ಒಂದು ಒಪ್ಪಂದ- ಹೊಸ ‘ಸ್ಟಾರ್ಟ್’ ಒಪ್ಪಂದ. ಅದು ಕೂಡ 2021ರಲ್ಲಿ ಕೊನೆಗೊಳ್ಳುತ್ತದೆ.

500ರಿಂದ 5,500 ಕಿ.ಮೀ. ವ್ಯಾಪ್ತಿಯ ಜಮೀನು ಆಧಾರಿತ ಕ್ಷಿಪಣಿಗಳನ್ನು ನಿಷೇಧಿಸುವ 1987ರ ಒಪ್ಪಂದವನ್ನು ರಶ್ಯ ಉಲ್ಲಂಘಿಸಿದೆ ಎಂದು ಅಮೆರಿಕ ಆರೋಪಿಸಿದೆ. ಆದರೆ, ಈ ಆರೋಪವನ್ನು ರಶ್ಯ ನಿರಾಕರಿಸಿದೆ. ಪರಮಾಣು ಅಸ್ತ್ರಗಳಿಗೆ ತಡೆ ಹೇರುವ ಜಾಗತಿಕ ವ್ಯವಸ್ಥೆಯು ಕುಸಿದರೆ ಪರಮಾಣು ವಿನಾಶ ಸಂಭವಿಸುವ ಅಪಾಯವಿದೆ ಎಂಬುದಾಗಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎಚ್ಚರಿಸಿದ್ದಾರೆ.

►ರಶ್ಯ ಸೂಪರ್ ಪವರ್ ಆಗಿ ಉಳಿದಿಲ್ಲ!

ಈ ಒಪ್ಪಂದ ರದ್ದುಗೊಂಡರೆ ಹೊಸ ಶಸ್ತ್ರಗಳನ್ನು ಪ್ರದರ್ಶಿಸುವ ಮೂಲಕ ಶಸ್ತ್ರಾಸ್ತ್ರ ಸ್ಪರ್ಧೆಗೆ ಇಳಿಯುವುದಾಗಿ ರಶ್ಯ ಎಚ್ಚರಿಸಿದೆ. ಆದರೆ, ರಶ್ಯದ ಕ್ಷೀಣಿಸುತ್ತಿರುವ ಆರ್ಥಿಕತೆಗೆ ಶಸ್ತ್ರಾಸ್ತ್ರ ಸ್ಪರ್ಧೆಯನ್ನು ನಿಭಾಯಿಸುವ ಶಕ್ತಿ ಇರುವಂತೆ ಕಾಣುತ್ತಿಲ್ಲ.

‘ಮಧ್ಯಮ ವ್ಯಾಪ್ತಿಯ ಪರಮಾಣು ಶಸ್ತ್ರಗಳ ಒಪ್ಪಂದ’ವನ್ನು ಉಳಿಸಿಕೊಳ್ಳಲು ರಶ್ಯ ಕಾತರವಾಗಿದೆ. ಆದರೆ, ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಟ್ರಂಪ್ ಆಡಳಿತ ಯಾವುದೇ ಸೂಚನೆಯನ್ನು ನೀಡುತ್ತಿಲ್ಲ.

ಪರಮಾಣು ಒಪ್ಪಂದಗಳ ಅನುಪಸ್ಥಿತಿಯು, ಅಮೆರಿಕಕ್ಕೆ ಸರಿಸಮವಾಗಿ ತಾನೂ ಸೂಪರ್ ಪವರ್ ಆಗಿದ್ದೇನೆ ಎಂಬ ರಶ್ಯದ ಭ್ರಮೆಯನ್ನು ಕಳಚಿಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News