ಬಂಧಿತ ಭಾರತೀಯ ವಿದ್ಯಾರ್ಥಿಗಳ ನೆರವಿಗೆ ಸುಷ್ಮಾ,: ಅಮೆರಿಕನ್ ರಾಯಭಾರಿ ಕಚೇರಿಗೆ ತುರ್ತು ಪತ್ರ ರವಾನೆ

Update: 2019-02-02 17:17 GMT

ಹೊಸದಿಲ್ಲಿ,ಫೆ.2: ‘ಪೇ ಟು ಸ್ಟೇ’ ಹಗರಣದಲ್ಲಿ ಅಮೆರಿಕದಲ್ಲಿ ಬಂಧಿತರಾಗಿರುವ ಭಾರತೀಯ ವಿದ್ಯಾರ್ಥಿಗಳಿಗೆ ಎಲ್ಲ ನೆರವುಗಳನ್ನು ಒದಗಿಸುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಶನಿವಾರ ಹೇಳಿದರು. ತನ್ಮಧ್ಯೆ ವಿದ್ಯಾರ್ಥಿಗಳ ಬಂಧನದ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿ ಇಲ್ಲಿಯ ಅಮೆರಿಕ ರಾಯಭಾರಿ ಕಚೇರಿಗೆ ತುರ್ತು ಪತ್ರವನ್ನು ಹೊರಡಿಸಿರುವ ಭಾರತವು,ತಕ್ಷಣವೇ ಅವರಿಗೆ ಭಾರತೀಯ ದೂತಾವಾಸವನ್ನು ಸಂಪರ್ಕಿಸಲು ಅವಕಾಶ ಕಲ್ಪಿಸುವಂತೆ ಕೋರಿದೆ.

‘ಅಮೆರಿಕದಲ್ಲಿಯ ನಕಲಿ ವಿವಿಯಲ್ಲಿ’ಪ್ರವೇಶಕ್ಕೆ ಸಂಬಂಧಿಸಿದಂತೆ ಹಲವಾರು ಭಾರತೀಯ ವಿದ್ಯಾರ್ಥಿಗಳ ಬಂಧನದಿಂದ ಉಂಟಾಗಿರುವ ಸ್ಥಿತಿಯ ಮೇಲೆ ನಿಗಾಯಿರಿಸಿರುವ ಭಾರತವು,ಇದನ್ನು ಬಗೆಹರಿಸಲು ಪೂರ್ವ ನಿಯಾಮಕ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.

ವಿದ್ಯಾರ್ಥಿಗಳಿಗೆ ಉದ್ಯೋಗದ ಆಮಿಷವನ್ನೊಡ್ಡಿ ನಕಲಿ ವಿವಿಯಲ್ಲಿ ಪ್ರವೇಶ ಪಡೆಯುವಂತೆ ಮಾಡಿ ಅವರನ್ನು ವಂಚಿಸಲಾಗಿದೆ. ಹೀಗಾಗಿ ಅವರನ್ನು ಈ ವಂಚಕರಿಗಿಂತ ಭಿನ್ನವಾಗಿ ಪರಿಗಣಿಸಬೇಕು ಎಂದು ಸಚಿವಾಲಯವು ಅಮೆರಿಕ ರಾಯಭಾರಿ ಕಚೇರಿಗೆ ಬರೆದಿರುವ ಪತ್ರದಲ್ಲಿ ಒತ್ತಿ ಹೇಳಿದೆ.

ವಿದ್ಯಾರ್ಥಿಗಳ ಕುರಿತು ಪೂರ್ಣ ವಿವರಗಳನ್ನು ಮತ್ತು ಇತ್ತೀಚಿನ ಮಾಹಿತಿಗಳನ್ನು ಸರಕಾರದೊಂದಿಗೆ ಹಂಚಿಕೊಳ್ಳುವಂತೆ, ಅವರನ್ನು ಸ್ಥಾನಬದ್ಧತೆಯಿಂದ ಶೀಘ್ರ ಬಿಡುಗಡೆಗೊಳಿಸುವಂತೆ ಮತ್ತು ಅವರ ಇಚ್ಛೆಗೆ ವಿರುದ್ಧವಾಗಿ ಗಡಿಪಾರು ಮಾಡದಂತೆ ನಾವು ಅಮೆರಿಕದ ಅಧಿಕಾರಿಗಳನ್ನು ಆಗ್ರಹಿಸಿದ್ದೇವೆ ಎಂದು ಸಚಿವಾಲಯವು ತಿಳಿಸಿದೆ.

ಬಂಧಿತ ವಿದ್ಯಾರ್ಥಿಗಳಿಗೆ ಅಗತ್ಯ ನೆರವನ್ನು ನೀಡಲು ಭಾರತೀಯ ರಾಯಭಾರಿ ಕಚೇರಿ ಮತ್ತು ದೂತಾವಾಸಗಳ ಅಧಿಕಾರಿಗಳು ಅಮೆರಿಕಾದ್ಯಂತ ಹಲವಾರು ಸ್ಥಾನಬದ್ಧತೆ ಕೇಂದ್ರಗಳಿಗೆ ಭೇಟಿ ನೀಡಿದ್ದಾರೆ. ಈವರೆಗೆ ಸುಮಾರು 30 ವಿದ್ಯಾರ್ಥಿಗಳನ್ನು ನಮ್ಮ ಅಧಿಕಾರಿಗಳು ಸಂಪರ್ಕಿಸಿದ್ದಾರೆ. ಉಳಿದ ಭಾರತೀಯ ವಿದ್ಯಾರ್ಥಿಗಳನ್ನು ಸಂಪರ್ಕಿಸಲು ಪ್ರಯತ್ನಗಳು ಮುಂದುವರಿದಿವೆ ಎಂದೂ ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News