ಗಣರಾಜ್ಯೋತ್ಸವ ಪರೇಡ್‌: ಹದಿನೈದು ವರ್ಷಗಳ ಬಳಿಕ ಅತ್ಯುತ್ತಮ ತಂಡವಾಗಿ ಕರ್ನಾಟಕ-ಗೋವಾ ಎನ್‌ಸಿಸಿ

Update: 2019-02-02 17:26 GMT

ಬೆಂಗಳೂರು, ಫೆ.2: ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ ಕರ್ನಾಟಕ-ಗೋವಾ ಎನ್‌ಸಿಸಿ ತಂಡ ಸತತ 15 ವರ್ಷಗಳ ಬಳಿಕ ಪ್ರಧಾನ ಮಂತ್ರಿ ಬ್ಯಾನರ್ ಹಾಗೂ ಟ್ರೋಫಿ ಪಡೆದಿದ್ದು, ಅತ್ಯುತ್ತಮ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ರಾಷ್ಟ್ರೀಯ ಕ್ಯಾಡೆಟ್ ಕಾರ್ಪ್ಸನ್ ಉಪ ಮಹಾನಿರ್ದೇಶಕ ಡಿ.ಎಂ.ಪುರ್ವಿ ಮಟ್ ಹರ್ಷ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದ ಚೋಪ್ರಾ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 106 ಎನ್‌ಸಿಸಿ ಕೆಡೆಟ್ಸ್ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಿದ್ದು, ಇವರಲ್ಲಿ 97 ಕರ್ನಾಟಕ, 9 ಗೋವಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ವಿದ್ಯಾರ್ಥಿಗಳ ಶ್ರದ್ಧೆ, ತರಬೇತಿದಾರರ ಪ್ರಯತ್ನದಿಂದ ಪ್ರಶಸ್ತಿ ಸಿಕ್ಕಿದೆ ಎಂದು ತಿಳಿಸಿದರು.

ರಾಜ್ಯ ಮತ್ತು ಹೊಸದಿಲ್ಲಿಯ ವಾತಾವರಣ ಭಿನ್ನವಾಗಿದ್ದು, ಅಲ್ಲಿನ ಪ್ರತಿಕೂಲ ವಾತಾವರಣಕ್ಕೆ ಹೊಂದಣಿಕೆಯಾಗಿ ಪ್ರದರ್ಶನ ನೀಡಿದ್ದಾರೆ. ಕಳೆದ 20 ವರ್ಷದಿಂದ 2-3 ಸ್ಥಾನದಲ್ಲಿ ಕರ್ನಾಟಕ-ಗೋವಾ ತಂಡ ಇರುತ್ತಿತ್ತು. ಈ ಬಾರಿ ಚಾಂಪಿಯನ್ ಆಗಿದ್ದೇವೆ ಎಂದರು.

ಹೊಸದಿಲ್ಲಿಯಲ್ಲಿ ಮೈನಸ್ ಡಿಗ್ರಿ ಚಳಿ ಇದ್ದರೂ, ಕರ್ನಾಟಕ-ಗೋವಾ ಎಸ್‌ಸಿಸಿ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಪಡೆದಿದೆ. ಕರ್ನಾಟಕದ ವಾತಾವರಣಕ್ಕೂ ಅಲ್ಲಿಯ ವಾತಾವರಣಕ್ಕೂ ಬಹಳ ವ್ಯತ್ಯಾಸವಿದ್ದು, ಕೆಲ ತೊಂದರೆಗಳಾದರೂ ಸಹ ತರಬೇತಿದಾರರು ಕಾಳಜಿ ವಹಿಸಿದ್ದರು. ಪ್ರದರ್ಶನದ ಜೊತೆ ಆರೋಗ್ಯದ ಮೇಲೆ ನಿಗಾವಹಿಸಲು ಸೂಚಿಸಿ ಪ್ರೋತ್ಸಾಹ ನೀಡಿದ್ದಕ್ಕೆ ಪ್ರಶಸ್ತಿ ದೊರೆತಿದೆ ಎಂದು ಹೇಳಿದರು.

ಶಿವಮೊಗ್ಗ, ತುಮಕೂರು, ಬೆಂಗಳೂರು, ಕಲಬುರಗಿ, ಹುಬ್ಬಳಿ, ಧಾರವಾಡ ಸೇರಿದಂತೆ ಎಲ್ಲಾ ಜಿಲ್ಲೆಗಳ ಕೆಡೆಟ್‌ಗಳು ಹೊಸದಿಲ್ಲಿಯ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ್ದು, 106 ಕೆಡೆಟ್‌ಗಳಲ್ಲಿ ರಾಜ್ಯದವರೇ 97 ಕೆಡೆಟ್‌ಗಳಿರುವುದು ಹೆಮ್ಮೆಯ ವಿಷಯವಾಗಿದೆ. ಫೈರಿಂಗ್, ಕವಾಯತು, ರಾಜ್‌ಪಥ್, ಪಿಎಂ ರ್ಯಾಲಿ ಸೇರಿದಂತೆ ಇತರೆ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಎಂದು ತಿಳಿಸಿದರು.

ಕರ್ನಲ್ ಬೋಪಣ್ಣ ಮಾತನಾಡಿ, ರಾಜ್ಯದ ಬೇರೆ ಬೇರೆ ಭಾಗಗಳಿಂದ ಆಗಮಿಸಿದ್ದ ಕೆಡೆಟ್‌ಗಳನ್ನು ನವೆಂಬರ್ ತಿಂಗಳಿಂದ ತರಬೇತಿ ನೀಡಲಾಗಿತ್ತು. 35 ಹುಡುಗಿಯರು, 71 ಹುಡುಗರು 106 ಕೆಡೆಟ್‌ಗಳು ಆರ್ಕಷಕ ಪಥಸಂಚಲನ ನೀಡಿದ್ದರು. ಪ್ರಶಸ್ತಿ ಪಡೆಯುವ ಮೂಲಕ ರಾಜ್ಯಕ್ಕೆ ಗರಿಮೆ ತಂದಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News