ಕುಡಿಯುವ ನೀರು ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಬಂಡೆಪ್ಪ ಕಾಶೆಂಪೂರ್ ಅಸಮಾಧಾನ

Update: 2019-02-02 17:40 GMT

ಬೀದರ್, ಫೆ. 2: ನಗರಕ್ಕೆ 24 ಗಂಟೆ ನೀರು ಪೂರೈಕೆ ಮಾಡುವ ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ್ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶನಿವಾರ ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪರಿಷತ್ ಸದಸ್ಯರಾದ ಅರವಿಂದ್ ಕುಮಾರ್ ಅರಳಿ, ರಘುನಾಥರಾವ್ ಮಲ್ಕಾಪುರೆ, ಅಮೃತ್ ಸೇರಿ ಇನ್ನಿತರ ಯೋಜನೆಗಳಡಿ ಈಗಾಗಲೇ ಪೂರ್ಣಗೊಂಡ ಕಾಮಗಾರಿಗಳು ತೃಪ್ತಿದಾಯಕವಾಗಿಲ್ಲ. ಶಾಸಕರ ಮನೆಗೆ ನೀರು ಬರದಿದ್ದರೆ ಇನ್ನು ಜನ ಸಾಮಾನ್ಯರ ಗತಿಯೇನು? ನಗರದ ಜನತೆಗೆ ಕುಡಿಯುವ ನೀರು ಪೂರೈಕೆ ಕಾಮಗಾರಿ ನೆಪದಲ್ಲಿ ರಸ್ತೆಗಳನ್ನು ಹಾಳು ಮಾಡಲಾಗಿದೆ ಎಂದು ದೂರಿದರು.

ಖುದ್ದು ವೀಕ್ಷಣೆ: ಯೋಜನೆ ಕಾಮಗಾರಿ ಪ್ರಗತಿ ಪರಿಶೀಲನೆಗೆ ನಾಳೆ(ಫೆ.3) ನಡೆಸಲಿದ್ದು, ಯಾವುದೇ ರೀತಿಯ ಲೋಪದೋಷಗಳು ಕಂಡುಬಂದರೆ ಕೂಡಲೇ ಗುತ್ತಿಗೆದಾರರು ಸೇರಿದಂತೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಬಂಡೆಪ್ಪ ಕಾಶೆಂಪೂರ್ ಹೇಳಿದರು.

ಬ್ರಿಮ್ಸ್ ಆಸ್ಪತ್ರೆ ನಿರ್ಮಾಣ ವೇಳೆಯಲ್ಲಿ ಪೀಠೋಪಕರಣ ಖರೀದಿ ಅವ್ಯವಹಾರ ನಡೆದಿದೆ. ಈ ಬಗ್ಗೆ ಉನ್ನತಮಟ್ಟದ ತನಿಖೆ ಆಗಬೇಕೆಂಬ ಪರಿಷತ್ ಸದಸ್ಯರ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಸಂಬಂಧ ಅಧಿಕಾರಿಗಳನ್ನು ನೇಮಿಸಿ, ತನಿಖೆ ನಡೆಸಿ ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ಆದೇಶಿಸಿದರು.

ತಾಂತ್ರಿಕ ತೊಂದರೆಯಿಂದ ಇನ್ನೂ 44 ಸಾವಿರ ಮಕ್ಕಳಿಗೆ ಇದುವರೆಗೆ ವಿದ್ಯಾರ್ಥಿ ವೇತನ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಇದರಿಂದ ಸಿಡಿಮಿಡಿಗೊಂಡ ಬಂಡೆಪ್ಪ ಕಾಶೆಂಪೂರ್, ಇದನ್ನು ಗಂಭೀರವಾಗಿ ಪರಿಗಣಿಸಿ ಫೆ.15ರ ಒಳಗೆ ಆಧಾರ್ ಜೋಡಣೆಗೆ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.

ಸಭೆಯಲ್ಲಿ ಕ್ರೀಡಾ ಸಚಿವ ರಹೀಂ ಖಾನ್, ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ್ ಪಾಟೀಲ್, ಜಿ.ಪಂ. ಅಧ್ಯಕ್ಷೆ ಭಾರತಬಾಯಿ ಶೆರಿಕಾರ, ಉಪಾಧ್ಯಕ್ಷ ಡಾ.ಪ್ರಕಾಶಪಾಟೀಲ, ಡಿಸಿ ಡಾ.ಎಚ್.ಆರ್.ಮಹಾದೇವ, ಸಿಇಓ ಮಹಾಂತೇಶ ಬೀಳಗಿ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News