ಯುವಜನತೆ ವಿವೇಕಾನಂದರ ಮಾತುಗಳ ಸಾಕಾರಕ್ಕೆ ಪಣ ತೊಡಬೇಕಿದೆ: ಹಿರೇಮಗಳೂರು ಕಣ್ಣನ್

Update: 2019-02-02 18:51 GMT

ಚಿಕ್ಕಮಗಳೂರು, ಫೆ.2: ಭಾರತ ಎಂದರೆ ಆದರ್ಶ, ಗೌರವಾನ್ವಿತ, ಆಧ್ಯಾತ್ಮ, ಮೃತ್ಯುಂಜಯ ಹಾಗೂ ಧರ್ಮಶಕ್ತರಾಷ್ಟ ಎಂದಾಗಿದೆ. ಸರ್ವೆಜನ ಸುಖಿನೋಭವಂತು ಅನ್ನುವ ದೇಶ ನಮ್ಮದು ಎಂದು ಹೆಮ್ಮೆಯಿಂದ ಹೇಳಬಹುದಾದ ದೇಶ ನಮ್ಮದು ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು. 

ಜಿಲ್ಲಾಡಳಿತ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನವಚೇತನ ಯುವಕ ಸಂಘ ಶನಿವಾರ ಹಿರೇಮಗಳೂರಿನಲ್ಲಿ ಆಯೋಜನೆ ಮಾಡಿದ್ದ ಜಿಲ್ಲಾಯುವಜನ ಮೇಳ ಮತ್ತು ಜಿಲ್ಲಾ ಯುವ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮದೇಶ,ನಮ್ಮ ಸಮಾಜ, ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಹಾಗೆ ಯುವಕ-ಯುವತಿಯರು ದೇಶಪ್ರೇಮವನ್ನು ರೂಢಿಸಿಕೊಳ್ಳಬೇಕಿದೆ. ವಿವೇಕ ವಾಣಿಯಂತೆ ಯುವಸಮೂಹ ಏಳಿ ಎದ್ದೇಳಿ ಗುರಿಮುಟ್ಟುವ ವರೆಗೂ ನಿಲ್ಲದಿರಿ ಎಂಬುದು ಪ್ರಸಕ್ತ ಧ್ಯೇಯವಾಕ್ಯವಾಗಬೇಕಿದೆ ಎಂದರು.

ಶಾಸಕ ಸಿಟಿ ರವಿ ಮಾತನಾಡಿ, ಯಾವ ರಾಷ್ಟ್ರದಲ್ಲಿ ಕಲೆ ಸಂಸ್ಕೃತಿ ವಿಕಸನ ವಾಗುವುದಿಲ್ಲವೋ ಅಂತಹ ದೇಶದಲ್ಲಿ ನಾಗರಿಕತೆ ಬೆಳೆಯಲು ಸಾಧ್ಯವಿಲ್ಲ. ದೇಶದಲ್ಲಿರುವ ಸಾವಿರಾರು ಬಗೆಯ ಕಲೆ ಇಲ್ಲಿನ ಸಂಸ್ಕೃತದ ಶ್ರೀಮಂತಿಕೆಯ ಹಿರಿಮೆಯನ್ನು ಎತ್ತಿ ಹಿಡಿಯುತ್ತದೆ. ಹಾಗೆಯೇ ಎಲ್ಲಿ ವಿಜ್ಞಾನವಿರುವುದಿಲ್ಲವೊ ಆ ಸಮಾಜ ಜಡ್ಡುಗಟ್ಟಿದ ಸಮಾಜವಾಗುತ್ತದೆ ಎಂದರು.

ನವಚೇತನ ಯುವಕ ಸಂಘದ ಅಧ್ಯಕ್ಷ ಬಿ.ರೇವನಾಥ್ ಮಾತನಾಡಿ, ಕಳೆದ ಹತ್ತು ವರ್ಷಗಳ ಹಿಂದೆ ಇದೆ ಇತಿಹಾಸ ಪ್ರಸಿದ್ಧ ಹಿರೇಮಗಳೂರಿನಲ್ಲಿ ಜಿಲ್ಲಾ ಯುವಜನೋತ್ಸವ ಮಾಡಿ ಹಲವು ಪ್ರತಿಭೆಯನ್ನು ಪ್ರೋತ್ಸಾಹಿಸಲಾಗಿತ್ತು. ಜಿಲ್ಲೆಯಾದ್ಯಂತ ನೂರಾರು ಕಲಾವಿದರು ಇಂದು ಬಂದಿದ್ದಾರೆ. ತಮ್ಮೊಳಗಿರುವ ಸುಪ್ತಪ್ರತಿಭೆಯನ್ನು ಪ್ರದರ್ಶಿಸಿ ರಾಜ್ಯ ಹಾಗೂ ರಷ್ಟ್ರಮಟ್ಟಕ್ಕೆ ಬೆಳೆಯಲು ಈ ವೇದಿಕೆ ಸಹಕಾರಿಯಾಗಲಿ ಎಂದರು.

ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ವಿವಿಧ ಕಲಾ ತಂಡಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಜನರ ಗಮನ ಸೆಳೆದರು. ರಾಜ್ಯಪ್ರಶಸ್ತಿ ವಿಜೇತ ಹರೀಶ್ ಕೊಪ್ಪ,ನಗರಸಭೆ ಅಧ್ಯಕ್ಷೆ ಶಿಲ್ಪರಾಜಶೇಖರ್, ಶ್ರೀದೇವಿ ಮೋಹನ್,ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ ಹುಲ್ಲಳ್ಳಿ, ನಗರಸಭೆ ಮಾಜಿ ಸದಸ್ಯ ಜಗದೀಶ್, ವಾಲಿಬಾಲ್ ತರಬೇತುದಾರರಾದ ವಿನುತಾ, ಸಂತೋಷ್, ಶಿವಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News