ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡುತ್ತಿದೆ: ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ

Update: 2019-02-03 12:56 GMT

ಮೈಸೂರು,ಫೆ.3: ಶಿಕ್ಷಣ ಕ್ಷೇತ್ರಕ್ಕೆ ನಮ್ಮ ಸರ್ಕಾರ ಒತ್ತು ನೀಡುತ್ತಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದು ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ರವಿವಾರ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಪ್ರಾಚಾರ್ಯರ ಸಂಘದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಜೊತೆಗೆ ಪರೀಕ್ಷಾ ಸಿದ್ದತೆ ಕುರಿತು ನೇರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 'ನಮ್ಮ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ಎಲ್ಲರೂ ಉನ್ನತ ಶಿಕ್ಷಣವನ್ನು ಪಡೆದು ಉತ್ತಮ ಪ್ರಜೆಗಳಾಬೇಕು. ಇದು ನಿಮಗೆ ಮಹತ್ತರ ಘಟ್ಟ. ಈ ಸಮಯದಲ್ಲಿ ನೀವು ಹೆಚ್ಚು ಸಮಯವನ್ನು ವ್ಯರ್ಥಮಾಡದೆ ಓದಿನಡೆಗೆ ತೊಡಗಿಸಿಕೊಳ್ಳಬೇಕು ಎಂದರು.

ನಾವು ರಾಜಕಾರಣಿಗಳು ದುಡ್ಡು ಕೊಟ್ಟು ಜನರನ್ನು ಕರೆಸುತ್ತೇವೆ. ಮುಖ್ಯ ಭಾಷಣ ಮಾಡಬೇಕಾದರೆ ಚೇರುಗಳು ಖಾಲಿ ಇರುತ್ತವೆ. ಆದರೆ ನೀವು ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿರುವುದನ್ನು ನೋಡಿದರೆ ಖಷಿಯಾಗುತ್ತದೆ. ನಿಮ್ಮ ಮುಂದೆ ಹಲವಾರು ಸವಾಲುಗಳಿಗೆ. ಬದುಕಿನಲ್ಲಿ ಸವಾಲುಗಳನ್ನು ಎದುರಿಸಲು ನೀವು ಈಗಲೇ ಸಿದ್ದವಾಗಬೇಕು. ಬೆಳಿಗ್ಗೆ 5 ಗಂಟೆಗೆ ಎದ್ದು ಯೋಗ, ಧ್ಯಾನಗಳನ್ನು ಮಾಡಿ ಓದಿಗೆ ಕೂರಬೇಕು ಎಂದು ಹೇಳಿದರು.

ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರಸ್ವಾಮಿಗಳು ಬೆಳಿಗ್ಗೆ 4 ಗಂಟೆಗೆ ಎದ್ದು ನಿತ್ಯ ಕಾಯಕದಲ್ಲಿ ತೊಡಗುತ್ತಿದ್ದರು. ಪ್ರಶಾಂತ ಮನಸ್ಸಿನಲ್ಲಿ ಓದಿದರೆ ವಿದ್ಯೆ ತಲೆ ಹತ್ತುತದೆ. ಬೇರೆ ವಿಚಾರಗಳನ್ನು ಬದಿಗಿಟ್ಟು ಓದಿನ ಕಡೆ ಗಮನಹರಿಸಬೇಕು, ಅಂಜಿಕೆ, ಭಯ ಬಿಟ್ಟು ಶಿಕ್ಷಕರ ಮಾರ್ಗದರ್ಶನ ಪಡೆದು ಚೆನ್ನಾಗಿ ಪರೀಕ್ಷೆ ಬರೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಾನು ಉನ್ನತ ಶಿಕ್ಷಣ ಸಚಿವನಾಗಿ ಶಿಕ್ಷಣದ ಜೊತೆಗೆ ಉದ್ಯೋಗ ಕೌಶಲ್ಯಗಳನ್ನು ಅಳವಡಿಸಲು ಚಿಂತನೆ ನಡೆಸಿದ್ದೇನೆ. ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಅದಕ್ಕೆ ತಕ್ಕಂತೆ ಪ್ರಾಧ್ಯಾಪಕರು ಕೂಡ ಬದಲಾವಣೆಗಳನ್ನು ಮಾಡಿಕೊಳ್ಳಬೇಕು, ಪ್ರತಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಅಭ್ಯಾಸ ಮಾಡಬೇಕು. ಎಲ್ಲಾ ಕ್ಷೇತ್ರಗಳಲ್ಲೂ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು. ಸರ್ಕಾರಿ ಕಾಲೇಜುಗಳಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಸರ್ಕಾರ ಒತ್ತು ನೀಡುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು  ಎಂದು ಹೇಳಿದರು.

ಸಂವಾದದಲ್ಲಿ ಶಾಸಕ ತನ್ವೀರ್ ಸೇಠ್, ವಿಧಾನಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಕೆ.ಟಿ ಶ್ರೀಕಂಠೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News