ಹಿಂದೂ ಮಹಾಸಭಾ ವಿರುದ್ಧ ಮಡಿಕೇರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ

Update: 2019-02-04 12:21 GMT

ಮಡಿಕೇರಿ, ಫೆ.4 : ಮಹಾತ್ಮ ಗಾಂಧಿ ಅವರ ಹತ್ಯೆಯನ್ನು ಮರುಸೃಷ್ಟಿ ಮಾಡಿ ಪ್ರತಿಕೃತಿ ದಹಿಸಿದ ಹಿಂದೂ ಮಹಾಸಭಾ ಸಂಘಟನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಮಡಿಕೇರಿಯಲ್ಲಿ ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಮಹಾತ್ಮ ಗಾಂಧಿ ಪುಣ್ಯ ಸ್ಮರಣೆ ದಿನ ಹಿಂದೂ ಮಹಾಸಭಾ ಕಾರ್ಯದರ್ಶಿ ಪೂಜಾ ಶಕುನ ಪಾಂಡೆ ಅವರು ದೇಶವೇ ತಲೆ ತಗ್ಗಿಸುವ ರೀತಿಯಲ್ಲಿ ಗಾಂಧೀಜಿಯ ಗೌರವಕ್ಕೆ ದಕ್ಕೆ ತಂದಿದ್ದಾರೆ. ಗಾಂಧಿಯನ್ನು ಹತ್ಯೆಗೈದ ಗೋಡ್ಸೆಯನ್ನು ವಿಜೃಂಭಿಸುವ ಮೂಲಕ ವಿಕೃತ ಮನೋಭಾವ ಪ್ರದರ್ಶಿಸಿದ ಹಿಂದೂ ಮಹಾಸಭಾದ ಕಾರ್ಯ ದೇಶದ್ರೋಹಕ್ಕೆ ಸಮ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ದೇಶಕ್ಕೆ ಶಾಂತಿ ಮಾರ್ಗದಲ್ಲೇ ಸ್ವಾತಂತ್ರ್ಯ ತಂದುಕೊಟ್ಟ ಶಾಂತಿಧೂತ, ವಿಶ್ವಮಾನ್ಯ ಮಹಾತ್ಮ ಗಾಂಧಿ ಅವರ ಹೋರಾಟದ ಮಹತ್ವವನ್ನು ಅರಿಯದೆ ಅಗೌರವ ತೋರಲಾಗಿದೆ. ಗಾಂಧಿ ಹತ್ಯೆಯನ್ನು ಮರುಸೃಷ್ಟಿ ಮಾಡಿ ಗೋಡ್ಸೆಯನ್ನು ವಿಜೃಂಭಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಸಂಘಟನೆಯ ಮಾನ್ಯತೆಯನ್ನು ರದ್ದುಗೊಳಿಸಬೇಕೆಂದು ಕಾಂಗ್ರೆಸ್ ಪ್ರಮುಖರು ಒತ್ತಾಯಿಸಿದರು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದಲ್ಲಿ ಪಕ್ಷದ ವತಿಯಿಂದ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಕೆಪಿಸಿಸಿ ಪ್ರಮುಖ ಟಿ.ಪಿ.ರಮೇಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯಾ ಅಬ್ರಾರ್, ನಗರಸಭಾ ಸದಸ್ಯರಾದ ಚುಮ್ಮಿದೇವಯ್ಯ, ಪ್ರಕಾಶ್ ಆಚಾರ್ಯ, ಗಿಲ್ಬರ್ಟ್, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರ ಮೈನಾ, ಪ್ರಮುಖರಾದ ಕಾನೆಹಿತ್ಲು ಮೊಣ್ಣಪ್ಪ, ಸದಾಮುದ್ದಪ್ಪ, ಹನೀಫ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News