"ಮಮತಾ ಬ್ಯಾನರ್ಜಿಗೆ ಚುನಾವಣಾಪೂರ್ವ ಗಿಫ್ಟ್ ನೀಡಿದ ಪ್ರಧಾನಿ ಮೋದಿ"

Update: 2019-02-05 04:03 GMT

ಕೊಲ್ಕತ್ತಾ, ಫೆ. 5: ಪಶ್ಚಿಮ ಬಂಗಾಳದಲ್ಲಿ ಅನಗತ್ಯ ವಿವಾದ ಸೃಷ್ಟಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ, ವಿರೋಧ ಪಕ್ಷಗಳಿಗೆ ಚುನಾವಣಾ ಪೂರ್ವ ಗಿಫ್ಟ್ ನೀಡಿದ್ದಾರೆ ಎಂದು ಡಿಎಂಕೆ ನಾಯಕಿ ಕನಿಮೋಳ್ ಅಭಿಪ್ರಾಯಪಟ್ಟಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಧರಣಿ ಸ್ಥಳಕ್ಕೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಜತೆಗೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.

"ಈ ಘಟನೆ ಮಮತಾ ಬ್ಯಾನರ್ಜಿಯವರಿಗೆ ಮೋದಿ ನೀಡಿದ ಚುನಾವಣಾಪೂರ್ವ ಉಡುಗೊರೆ...ಇಡೀ ದೇಶ ಮಮತಾರತ್ತ ನೋಡುತ್ತಿದೆ...ತಾವು ಅಧಿಕಾರಕ್ಕೆ ಮರಳುವುದಿಲ್ಲ ಎನ್ನುವುದು ಬಿಜೆಪಿಗೆ ಜನವರಿ 19ರ ರ್ಯಾಲಿ ಬಳಿಕ ಮನವರಿಕೆಯಾಗಿದೆ" ಎಂದು ಲೇವಡಿ ಮಾಡಿದರು.

"ನಮ್ಮನ್ನು ಬೇರ್ಪಡಿಸಲು ಸಾಂಸ್ಥಿಕ ಶಕ್ತಿಯನ್ನು ಬಳಸಿಕೊಳ್ಳಲಾಗುತ್ತಿದೆ... ಎಂದು ಅವರು ತಿಳಿದುಕೊಂಡಿದ್ದರೆ ಅದು ತಪ್ಪು. ನಮ್ಮ ಭಿನ್ನತೆಯನ್ನು ಮರೆಯುವುದನ್ನು ನಾವು ಕಲಿತಿದ್ದೇವೆ. ಬಿಜೆಪಿ ಕ್ರಮವನ್ನು ದೇಶ ಒಪ್ಪುವುದಿಲ್ಲ" ಎಂದರು.

ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಮಾತನಾಡಿ, "ಬಿಜೆಪಿ ವಿರುದ್ಧ ಹೋರಾಟಕ್ಕೆ ಸಂಯುಕ್ತ ರಂಗ ರಚಿಸದಿದ್ದಲ್ಲಿ ರಾಷ್ಟ್ರದ ಜನತೆ ಕ್ಷಮಿಸುವುದಿಲ್ಲ" ಎಂದರು. ಬಿಜೆಪಿ ವಿರುದ್ಧ ಸಂಯುಕ್ತ ರಂಗ ರೂಪಿಸುವಲ್ಲಿ ವಿರೋಧ ಪಕ್ಷಗಳು ಸಣ್ಣ ಪುಟ್ಟ ತೊಂದರೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ತೇಜಸ್ವಿ ಯಾದವ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಮತಾ ಮತ್ತು ಕೇಂದ್ರದ ನಡುವಿನ ಸಂಘರ್ಷ, ಎಲ್ಲ ವಿರೋಧ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ಸಹಕಾರಿಯಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News