ಇಂದಿರಾ-ಮೋದಿ ಹೋಲಿಕೆ ಅಸಾಧ್ಯ, ಅದು ಇಂದಿರಾಗೆ ಮಾಡುವ ಅವಮಾನ ಎಂದ ರಾಹುಲ್

Update: 2019-02-05 09:33 GMT

ಹೊಸದಿಲ್ಲಿ, ಫೆ.5: ತಮ್ಮ ಅಜ್ಜಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಈಗಿನ ಪ್ರಧಾನಿ ನರೇಂದ್ರ ಮೋದಿ ನಡುವೆ ಹೋಲಿಕೆ ಅಸಾಧ್ಯ ಎಂದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಅಂತಹ ಹೋಲಿಕೆ ``ಇಂದಿರಾಜಿಗೆ ಮಾಡುವ ಅವಮಾನ,'' ಎಂದು ಬಣ್ಣಿಸಿದ್ದಾರೆ.

``ನನ್ನ ಅಜ್ಜಿಯ ತೀರ್ಮಾನಗಳು ಪ್ರೀತಿಯಿಂದ ಮೂಡಿದ್ದವು, ಆಕೆಯ ಕೆಲಸಗಳು ಎಲ್ಲರನ್ನೂ ಒಗ್ಗೂಡಿಸುವಂತಹುದ್ದಾಗಿತ್ತು ಹಾಗೂ ಆಕೆ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡಿದ್ದರಲ್ಲದೆ ಭಾರತದ ಬಡವರ ಬಗ್ಗೆ ಕಾಳಜಿ ಹೊಂದಿದ್ದರು,'' ಎಂದು ಹೇಳಿದರು.

``ಆದರೆ ಮೋದಿಯ ನಿರ್ಧಾರಗಳು ಸಿಟ್ಟು ಮತ್ತು ದ್ವೇಷದಿಂದ ಮೂಡುತ್ತಿವೆ ಹಾಗೂ ಅವರ ತೀರ್ಮಾನಗಳು ದೇಶವನ್ನು ಒಡೆಯುತ್ತಿವೆ. ಮೇಲಾಗಿ ಅವರಿಗೆ ಬಡವರ ಹಾಗೂ ದುರ್ಬಲರ ಬಗ್ಗೆ ಯಾವುದೇ ಅನುಕಂಪವಿಲ್ಲ'' ಎಂದು ರಾಹುಲ್ ಹಿಂದುಸ್ತಾನ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯ ಪಟ್ಟರು.

``ಭಾರತದ ಪ್ರತಿಯೊಂದು ಸಂಸ್ಥೆಯೂ ಮೋದಿಯ ಸರ್ವಾಧಿಕಾರಿ ಧೋರಣೆಯಿಂದ ಸಮಸ್ಯೆಯೆದುರಿಸುತ್ತಿದೆ. ಬ್ರಿಟಿಷರು ನಂಬಿದಂತೆ ಮೋದಿ ತಾವು ಭಾರತದ ದೊರೆಯೆಂದು ತಿಳಿದಿದ್ದಾರೆ, ಕಾಂಗ್ರೆಸ್ ಇಂತಹ ಧೋರಣೆಯಲ್ಲಿ ನಂಬಿಕೆಯಿರಿಸಿಲ್ಲ,'' ಎಂದು ರಾಹುಲ್ ಹೇಳಿದರು.

``ಆಡಳಿತ ನಡೆಸುವುದು ಹೀಗಲ್ಲ. ನಾವು ಕೂಡ ಸರಕಾರದಲ್ಲಿದ್ದೆವು ಹಾಗೂ ಈಗ ವಿಪಕ್ಷದಲ್ಲಿದ್ದೇವೆ. ನಮ್ಮ ಸಂಸ್ಥೆಗಳು ಭಾರತದ ಆತ್ಮವಾಗಿವೆ. ಆದರೆ ಮೋದಿ ಭಾರತಕ್ಕಿಂತ ದೊಡ್ಡವರಲ್ಲ. ಭಾರತ ಎಲ್ಲದಕ್ಕಿಂತ ಹಾಗೂ ಎಲ್ಲರಿಗಿಂತ ದೊಡ್ಡದು,'' ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News