‘ಕೃಷಿ ಸನ್ಮಾನ್ ಯೋಜನೆ’ಯಿಂದ ರಾಜ್ಯಕ್ಕೆ ಕೇವಲ 2,098 ಕೋಟಿ ರೂ.: ಸಿಎಂ ಕುಮಾರಸ್ವಾಮಿ

Update: 2019-02-05 12:10 GMT

ಬೆಂಗಳೂರು, ಫೆ. 5: ಐದು ಎಕರೆ ಒಳಗಿನ ಸಣ್ಣ ಮತ್ತು ಮಧ್ಯಮ ರೈತ ಕುಟುಂಬಕ್ಕೆ ವಾರ್ಷಿಕ 6 ಸಾವಿರ ರೂ.ನೀಡುವ ಕೇಂದ್ರದ ಕೃಷಿ ಸನ್ಮಾನ್ ಯೋಜನೆಯಿಂದ ರಾಜ್ಯಕ್ಕೆ ಕೇವಲ 2,098 ಕೋಟಿ ರೂ.ಮಾತ್ರ ನೆರವು ಸಿಗುತ್ತಿದೆ. ಆದರೆ, ರಾಜ್ಯ ಸರಕಾರ ಕೃಷಿ ಪಂಪ್‌ಸೆಟ್‌ನ ವಿದ್ಯುತ್‌ಗೆ ವರ್ಷಕ್ಕೆ 11ಸಾವಿರ ಕೋಟಿ ರೂ.ಸಬ್ಸಿಡಿ ನೀಡುತ್ತಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಮಂಗಳವಾರ ಹಲಸೂರಿನ ಖಾಸಗಿ ಹೊಟೇಲ್‌ನಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ ವತಿಯಿಂದ ಆಯೋಜಿಸಲಾಗಿದ್ದ ಬೆಸ್ಕಾಂ ಗ್ರಾಹಕರ ಅರಿವು ಸಮ್ಮೇಳನ-2019, ಸೌರ ಮೇಲ್ಛಾವಣಿ ಘಟಕ ಸಾಮರ್ಥ್ಯದ ಮೌಲ್ಯಮಾಪನ ಸಾಧನ ಮತ್ತು ವಿದ್ಯುತ್ ಚಾಲಿತ ವಾಹನಗಳ ರೀಚಾರ್ಜಿಂಗ್ ಸ್ಟೇಷನ್ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಕೇಂದ್ರ ಸರಕಾರ ಇತ್ತೀಚಿನ ಬಜೆಟ್‌ನಲ್ಲಿ ಘೋಷಿಸಿದ ಕೃಷಿ ಸಮ್ಮಾನ್ ಯೋಜನೆಯಿಂದ ರಾಜ್ಯಕ್ಕೆ ಹೆಚ್ಚಿನ ಲಾಭವಾಗುತ್ತಿಲ್ಲ. ಈ ಯೋಜನೆಗೆ ರಾಜ್ಯದ 59ರಿಂದ 60ಲಕ್ಷ ರೈತರಿಗೆ ಮಾತ್ರ ಲಾಭವಾಗಲಿದೆ. ಕರ್ನಾಟಕಕ್ಕೆ 2,098 ಕೋಟಿ ರೂ. ಮಾತ್ರ ಅನುದಾನ ಬರುತ್ತಿದೆ.

ಆದರೆ, ಇಂಧನ ಇಲಾಖೆ ಕೃಷಿಕರಿಗಾಗಿ 11ಸಾವಿರ ಕೋಟಿ ರೂ. ವಾರ್ಷಿಕ ಸಬ್ಸಿಡಿ ನೀಡುತ್ತಿದೆ. ಉಚಿತ ವಿದ್ಯುತ್ ಪೂರೈಕೆಯಿಂದ ವಿದ್ಯುತ್ ಸರಬರಾಜು ಕಂಪೆನಿಗಳು ನಷ್ಟದಲ್ಲಿವೆ. ಬೆಸ್ಕಾಂ ಒಂದರಲ್ಲೇ 4 ಸಾವಿರ ಕೋಟಿ ರೂ.ಸಾಲ ಇದೆ. ಈವರೆಗೂ ತೀರಿಸಲು ಆಗಿಲ್ಲ.
ಚೆಸ್ಕಾಂನಲ್ಲಿ 800 ಕೋಟಿ ಸಾಲ ಇದೆ. ಇಂಧನ ಇಲಾಖೆಯ ಮೂಲಸಂಸ್ಥೆಯಾದ ವಿದ್ಯುತ್ ಉತ್ಪಾದನಾ ಸಂಸ್ಥೆ 16 ಸಾವಿರ ಕೋಟಿ ರೂ.ಹೊರೆ ಇದೆ. ಸಬ್ಸಿಡಿ ಬಿಡುಗಡೆ ವ್ಯತ್ಯಯದಿಂದ ಎಸ್ಕಾಂಗಳು ಪ್ರತಿವರ್ಷ 3ರಿಂದ 4 ಸಾವಿರ ಕೋಟಿ ರೂ.ನಷ್ಟ ಅನುಭವಿಸುತ್ತಿವೆ. ಇದನ್ನು ರೈತರು ಅರ್ಥ ಮಾಡಿಕೊಳ್ಳಬೇಕು. 2008ರಿಂದ ಈವರೆಗೂ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆರಂಭದಲ್ಲಿ ಸಬ್ಸಿಡಿಯ ಪ್ರಮಾಣ 3ರಿಂದ 4 ಸಾವಿರ ಕೋಟಿ ರೂ.ಇತ್ತು. ಈಗ ಅದು 11ಸಾವಿರ ಕೋಟಿ ರೂ.ಗಳಷ್ಟು ಹೆಚ್ಚಾಗಿದೆ ಎಂದರು.

ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುವ ಲೈನ್‌ಮೆನ್‌ಗಳು ಮತ್ತು ಇತರ ಸಿಬ್ಬಂದಿಗಳು ಸುರಕ್ಷತೆಗೆ ಹೆಚ್ಚಿನ ಗಮನ ವಹಿಸಬೇಕು. ಗ್ರಾಹಕರಲ್ಲೂ ಹೆಚ್ಚಿನ ಅರಿವು ಮೂಡಿಸಬೇಕೆಂದ ಅವರು, ವಿದ್ಯುತ್ ಸ್ವಾವಲಂಬನೆಯಲ್ಲಿ ನಾವು ದಾಪುಗಾಲು ಇಟ್ಟಿದ್ದೇವೆ. ಕೆಲವು ಲೋಪದೋಷಗಳಿಂದ ಯೋಜನೆಯ ಯಶಸ್ಸು ಆಗಿಲ್ಲ ಎಂದರು.

ಬೆಸ್ಕಾಂ ಒಂಬುಡ್ಸಮನ್ ಅಧ್ಯಕ್ಷ ಎಸ್.ಎಸ್.ಪಟ್ಟಣಶೆಟ್ಟಿ ಮಾತನಾಡಿ, ಗ್ರಾಹಕ ಬಹಳ ಮುಖ್ಯ. ಆತ ಯಾರ ಅವಲಂಭಿಯೂ ಅಲ್ಲ. ಆತ ನಮಗೆ ಸೇವೆ ಮಾಡುವ ಅವಕಾಶ ನೀಡಿದ್ದಾನೆ. ನಮ್ಮ ಸೇವೆಯಿಂದ ಆತನಿಗೆ ಉಪಕಾರ ಮಾಡುತ್ತಿಲ್ಲ, ಬದಲಾಗಿ ನಾವು ಸೇವೆ ಮಾಡುವ ಅವಕಾಶಕ್ಕಾಗಿ ನಾವು ಧನ್ಯವಾದ ಹೇಳಬೇಕು ಎಂದಿದ್ದಾರೆ. ಹಾಗಾಗಿ ನಾವು ಉತ್ತಮ ಸೇವೆ ಸಲ್ಲಿಸಬೇಕು ಎಂದು ಕರೆ ನೀಡಿದರು.

ಗ್ರಾಹಕರ ಕುಂದುಕೊರತೆ ನಿವಾರಣಾ ವೇದಿಕೆಯನ್ನು 2004ರಲ್ಲಿ ರಚನೆ ಮಾಡಲಾಗಿದೆ. ಗ್ರಾಹಕರು ಈ ಒಂಬುಡ್ಸ್‌ಮನ್ ಮುಂದೆ ತಮ್ಮ ದೂರನ್ನು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು. ಪ್ರತಿ ಶನಿವಾರ ಗ್ರಾಹಕರ ಕುಂದುಕೊರತೆಗಳನ್ನು ಆಲಿಸಲಾಗುತ್ತದೆ. ಪ್ರತಿ ಜಿಲ್ಲೆಗಳಲೂ ವೇದಿಕೆಗಳು ಸ್ಥಾಪನೆಯಾಗಿವೆ. ಗ್ರಾಹಕರಿಗೆ ಇದರ ಮಾಹಿತಿ ಕೊರತೆ ಇದೆ. ನಾವು ಸಂಗ್ರಹಿಸಿದ ದೂರು ಮತ್ತು ತೆಗೆದುಕೊಂಡ ಕ್ರಮಗಳ ಬಗ್ಗೆ ಕೇಂದ್ರಕ್ಕೆ ವರದಿ ನೀಡಲಾಗುತ್ತದೆ. ಹಿಂದಿನ ವರ್ಷ ರವಾನಿಸಿದ ವರದಿಯ ಪ್ರಕಾರ ರಾಜ್ಯದಲ್ಲಿ 83 ದೂರು ಮಾತ್ರ ಬಾಕಿ ಇವೆ. ಬಹಳಷ್ಟು ಜಿಲ್ಲೆಗಳಲ್ಲಿ ದೂರುಗಳೆ ದಾಖಲಾಗುತ್ತಿಲ್ಲ.

ಸಿಜಿಆರ್‌ಎಫ್ ಮುಂದೆ ಬಿಲ್ಲಿಂಗ್, ಸೇವೆ ವಿಳಂಬ ಸೇರಿ 15 ಸೇವೆಗಳನ್ನು ನಿಗದಿತ ಅವಧಿಯಲ್ಲಿ ಸೇವೆ ಒದಗಿಸದಿದ್ದರೆ ಗ್ರಾಹಕರು ದೂರು ದಾಖಲಿಸಬಹುದು. ಜಿಲ್ಲಾ ಮಟ್ಟದ ವೇದಿಕೆಗಳು 60 ದಿನದಲ್ಲಿ ಪರಿಹಾರದ ಆದೇಶ ನೀಡಲಿದ್ದಾರೆ, ಅಲ್ಲಿ ಬಗೆಹರಿಯದಿದ್ದರೆ ರಾಜ್ಯಮಟ್ಟದ ಒಂಬುಡ್ಸ್‌ಮನ್‌ಗೆ ಮೇಲ್ಮನವಿ ಸಲ್ಲಿಸಬಹುದು ಎಂದು ಹೇಳಿದರು.

ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕಿ ಶಿಖಾ, ಕಾಸಿಯಾ ಅಧ್ಯಕ್ಷ ಬಸವರಾಜು ಜವಳಿ, ಪೀಣ್ಯಾ ಕೈಗಾರಿಕಾ ಪ್ರದೇಶ ಸಂಘದ ಅಧ್ಯಕ್ಷ ಎಂ.ಎನ್.ಗಿರಿ, ಬೆಸ್ಕಾಂನ ನಾಗರಿಕ ವೇದಿಕೆ ಅಧ್ಯಕ್ಷ ಶ್ರೀನಿವಾಸ್ ಮರಳಿ, ಶಾಸಕರಾದ ಬೋಜೆಗೌಡ, ಲಿಂಗೇಶ್ ಉಪಸ್ಥಿತರಿದ್ದರು.

‘ಗುಣಮಟ್ಟದ ವಿದ್ಯುತ್ ಮತ್ತು ಲಾಭದಾಯಕ ಬೆಲೆ ದೊರಕಿಸಿಕೊಟ್ಟರೆ ರೈತರು ಉಚಿತ ವಿದ್ಯುತ್ ಕೇಳುವುದಿಲ್ಲ. ಭೂಗರ್ಭದಲ್ಲಿ ತಂತಿಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಸೋರಿಕೆಯನ್ನು ತಡೆಗಟ್ಟಲಾಗುತ್ತಿದೆ. ಇನ್ನು ಮುಂದೆ ಭೂ ಮೇಲ್ಭಾಗದ ತಂತಿಗಳನ್ನು ಹಂತ-ಹಂತವಾಗಿ ಭೂ ಒಳಭಾಗದಲ್ಲಿ ಅಳವಡಿಸಲಾಗವುದು. ಜತೆಗೆ ಇಂಟರ್‌ನೆಟ್ ಸೌಲಭ್ಯದ ಆಪ್ಟಿಕಲ್ ಪೈಬರ್ ತಂತಿಗಳನ್ನು ಅಳವಡಿಸಲಾಗುತ್ತಿದೆ’
-ಎಚ್.ಡಿ.ಕುಮಾರಸ್ವಾಮಿ,  ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News