1.25 ಲಕ್ಷ ರೂ. ಮೌಲ್ಯದ ಸಗಣಿ ಕದ್ದ ಸರಕಾರಿ ಅಧಿಕಾರಿ!

Update: 2019-02-06 07:35 GMT

ಚಿಕ್ಕಮಗಳೂರು, ಫೆ.6: ಬೆಲೆಬಾಳುವ ವಸ್ತುಗಳು ಕದ್ದು ಹೋಗಿರುವ ಬಗ್ಗೆ ಪೊಲೀಸ್ ದೂರು ದಾಖಲಾಗುವುದು ಸಾಮಾನ್ಯ. ಆದರೆ ಸಗಣಿ ಕಳುವಾಗಿದೆ ಎಂಬ ದೂರಿನ ಬಗ್ಗೆ ಯಾವತ್ತಾದರೂ ಕೇಳಿದ್ದೀರಾ?... ಅಂತಹ ಒಂದು ಅಪರೂಪದ ವಿದ್ಯಮಾನ  ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ ನಡೆದಿದೆ.

ಪಶು ಸಂಗೋಪನಾ ಇಲಾಖೆ ಯಾಗತಿ ಠಾಣೆಯ ಪೊಲೀಸರಿಗೆ ಇತ್ತೀಚೆಗೆ ದೂರು ನೀಡಿ 1.25 ಲಕ್ಷ ರೂ. ಮೌಲ್ಯದ 35ರಿಂದ 40 ಟ್ರ್ಯಾಕ್ಟರ್ ಲೋಡುಗಳಷ್ಟು ಸಗಣಿ ಕಳವಾಗಿದೆ ಎಂದು ಆರೋಪಿಸಿದೆ. ಈ ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಇಲಾಖೆಯ ಮೇಲ್ವಿಚಾರಕರೊಬ್ಬರನ್ನು ಬಂಧಿಸಿದ್ದಾರೆ.

ಸಗಣಿಯನ್ನು ವ್ಯಾಪಕವಾಗಿ ಗೊಬ್ಬರವಾಗಿ ಕೃಷಿ ಮತ್ತು ತೋಟಗಾರಿಕೆಯಲ್ಲಿ ಬಳಸಲಾಗುತ್ತಿರುವುದರಿಂದ ಆದಕ್ಕೆ ಉತ್ತಮ ಬೇಡಿಕೆಯಿದೆ. ಇಲಾಖೆಯ ಅಮೃತಮಹಲ್ ಕಾವಲ್ ಪ್ರದೇಶದಲ್ಲಿ ಶೇಖರಿಸಿಡಲಾಗಿದ್ದ ಬೃಹತ್ ಪ್ರಮಾಣದ ಸಗಣಿಯನ್ನು ಕಳವುಗೈದು ಬೇರೊಂದು ಖಾಸಗಿ ಸ್ಥಳದಲ್ಲಿಡಲಾಗಿದೆ. ಈ ಖಾಸಗಿ ಸ್ಥಳದ ಮಾಲಕನ ಹೆಸರನ್ನೂ ಎಫ್‍ಐಆರ್ ನಲ್ಲಿ ಸೇರಿಸಲಾಗಿದೆ. ಮಹಜರ್ ಪ್ರಕ್ರಿಯೆ ನಂತರ ಕದ್ದ ಸಗಣಿಯನ್ನು ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News