ಆನಂದ್ ತೇಲ್ ತುಂಬ್ಡೆ ವಿರುದ್ಧ ‘ಕೋಮು ಸೌಹಾರ್ದ’ ಹರಡಲು ಸಂಚು ಹೂಡಿದ ಆರೋಪ !

Update: 2019-02-06 09:57 GMT

ಪುಣೆ, ಫೆ.6: ಚಿಂತಕ ಹಾಗೂ ಹೋರಾಟಗಾರ ತೇಲ್ ತುಂಬ್ಡೆ ಅವರು `ಕೋಮು ಸಾಮರಸ್ಯ' ಹರಡಲು ಸಂಚು ಹೂಡಿದ ಆರೋಪ ಎದುರಿಸುತ್ತಿದ್ದಾರೆಯೇ?..... ಅಚ್ಚರಿಯೆಂಬಂತೆ ಪುಣೆ ಸೆಶನ್ಸ್ ನ್ಯಾಯಾಲಯ ಫೆಬ್ರವರಿ 1ರಂದು ಅವರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿ ಹೊರಡಿಸಿದ್ದ ಆದೇಶದಲ್ಲಿ ಈ ರೀತಿ ಉಲ್ಲೇಖಗೊಂಡಿದೆ. ಪ್ರಾಯಶಃ ಇದು ಆದೇಶವನ್ನು ಟೈಪ್ ಮಾಡುವಾಗ ನಡೆದ ಪ್ರಮಾದವೂ ಆಗಿರಬಹುದು.

ಕೋರ್ಟ್ ಆದೇಶದಲ್ಲಿ ಈ ರೀತಿ ಹೇಳಲಾಗಿತ್ತು… “ಪ್ರಾಸಿಕ್ಯೂಶನ್ ಪ್ರಕರಣದಂತೆ ಈಗಿನ ಅರ್ಜಿದಾರ/ಆರೋಪಿ (ತೇಲ್ ತುಂಬ್ಡೆ) ಅವರು ಇತರ ಆರೋಪಿಗಳೊಂದಿಗೆ ಹಾಗೂ ತಲೆಮರೆಸಿಕೊಂಡಿರುವ ಆರೋಪಿಗಳೊಂದಿಗೆ ಕೋಮು ಸಾಮರಸ್ಯ ಉಂಟು ಮಾಡಲು ಸಂಚು ಹೂಡಿದ ಆರೋಪ ಎದುರಿಸುತ್ತಿದ್ದಾರೆ ಹಾಗೂ ಜನರನ್ನು ಭಯಭೀತಗೊಳಿಸಿ ಮತ್ತು ಸ್ಫೋಟಕ ವಸ್ತುಗಳನ್ನು ಬಳಸಿ ದೇಶದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ಉಂಟು ಮಾಡಿದ ಆರೋಪ ಎದುರಿಸುತ್ತಿದ್ದಾರೆ''.

‘ಕೋಮು ಸಾಮರಸ್ಯ’ ಉಂಟು ಮಾಡಿದ ಆರೋಪ ಈ ಜಾಮೀನು ತಿರಸ್ಕರಿಸಿ ಹೊರಡಿಸಲಾದ ಆದೇಶದಲ್ಲಿ ಎರಡು ಬಾರಿ ಉಲ್ಲೇಖಗೊಂಡಿದೆ.

ಸುಪ್ರೀಂ ಕೋರ್ಟ್ ತೇಲ್ ತುಂಬ್ಡೆ ಅವರಿಗೆ ಫೆಬ್ರವರಿ 11ರ ತನಕ ಬಂಧನದಿಂದ ವಿನಾಯಿತಿ ನೀಡಿರುವ ಹೊರತಾಗಿಯೂ ಪುಣೆ ಪೊಲೀಸರು ಇತ್ತೀಚೆಗೆ ಅವರನ್ನು ಬಂಧಿಸಿ ನಂತರ ನ್ಯಾಯಾಲಯದಿಂದ ತರಾಟೆಗೊಳಗಾದ ನಂತರ  ಕೆಲವೇ ಗಂಟೆಗಳಲ್ಲಿ ಬಿಡುಗಡೆಗೊಳಿಸಿರುವುದು ಎಲ್ಲರಿಗೂ ತಿಳಿದ ವಿಚಾರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News