ಕಸ ಸಂಗ್ರಹಣೆ ಟೆಂಡರ್ ವಿಚಾರದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ: ಚಿಕ್ಕಮಗಳೂರು ನಗರಸಭೆ ಅಧ್ಯಕ್ಷೆ ಶಿಲ್ಪಾ

Update: 2019-02-06 11:17 GMT

ಚಿಕ್ಕಮಗಳೂರು, ಫೆ.6: ಕಸ ಸಂಗ್ರಹಣೆ ವಿಚಾರದಲ್ಲಿ ನಗರಸಭೆ ಯಾವುದೇ ರಾಜಕೀಯ ಮಾಡಿಲ್ಲ. ಸ್ವಯಂ ಪ್ರೇರಣೆಯಿಂದ ಕಸಸಂಗ್ರಹಣೆ ಮಾಡಲು ಮುಂದಾದ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ನಗರದ ಕಸ ಸಂಗ್ರಹಣೆಗೆ ಟೆಂಡರ್ ಕರೆಯದೇ ಗುತ್ತಿಗೆ ನೀಡಲು ಕಾನೂನಿನಲ್ಲಿ ಅವಕಾಶವಿದೆ ಎಂದು ನಗರಸಭೆ ಅಧ್ಯಕ್ಷೆ ಶಿಲ್ಪಾರಾಜಶೇಖರ್ ಸ್ಪಷ್ಟಪಡಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಅವರು ನಗರಸಭೆ ಕಸ ಸಂಗ್ರಣೆಗೆ ಟೆಂಡರ್ ಕರೆಯದೆ ಗುತ್ತಿಗೆ ನೀಡಿ ಅವ್ಯವಹಾರ ನಡೆಸಲಾಗಿದೆ ಎಂದು ದೂರಿದ್ದಾರೆ. ಆದರೆ ಈ ಆರೋಪ ಸತ್ಯಕ್ಕೆ ದೂರವಾಗಿದ್ದು, ಕಸ ಸಂಗ್ರಹಣೆಗೆ ಸಂಘಸಂಸ್ಥೆ, ಖಾಸಗಿ ಅವರು ಮುಂದೆ ಬಂದರೆ ಅಂತಹ ಸಂಸ್ಥೆಗೆ ಗುತ್ತಿಗೆ ನೀಡಲು ಕಾನೂನಿನಲ್ಲೇ ಅವಕಾಶವಿದೆ ಎಂದ ಅವರು, ಈ ಹಿಂದೆ ಸ್ವಚ್ಛ ಟ್ರಸ್ಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ರೇಣುಕಾಂಬ ಸ್ವಸಹಾಯ ಸಂಘಕ್ಕೆ ಕಸ ಸಂಗ್ರಹಣೆಯನ್ನು ವಹಿಸಲಾಗಿತ್ತು. ಅವರು ಮನೆ ಮನೆ ಕಸ ಸಂಗ್ರಹಿಸಿ ಮಾಸಿಕ 30 ರೂ. ಶುಲ್ಕ ಪಡೆಯುತ್ತಿದ್ದರು. ಆದರೆ ಖರ್ಚು ಹೆಚ್ಚಾದ ಕಾರಣದಿಂದ ಕಸ ಸಂಗ್ರಹಣೆಗೆ ಸಂಸ್ಥೆಗಳು ಹಿಂದೆ ಸರಿದವು. ಇಂತಹ ಸಂದರ್ಭದಲ್ಲಿ ಸ್ವಯಂ ಪ್ರೇರಿತವಾಗಿ ಮುಂದೆ ಬಂದ ತುಮಕೂರು ಮೂಲದ ಎಸ್‍ಎಂಪಿ ಎಂಟರ್ ಪ್ರೈಸಸ್ ಅವರಿಗೆ ಇದರ ಗುತ್ತಿಗೆ ವಹಿಸಿಕೊಡಲಾಗಿದೆ ಎಂದರು. 

ನಗರಸಭೆಯಿಂದ ಎಂಟರ್ ಪ್ರೈಸಸ್‍ಗೆ ನಯಾಪೈಸ ನೀಡುತ್ತಿಲ್ಲ, 30 ಆಟೊ ಟಿಪ್ಪರ್, 80 ಜನ ಕಾರ್ಮಿಕರು ಈ ಸಂಸ್ಥೆಯಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಎಸ್‍ಎಂಪಿ ಎಂಟರ್ ಪ್ರೈಸಸ್ ಕಸ ಸಂಗ್ರಹಣೆ ಜವಬ್ದಾರಿ ವಹಿಸಿಕೊಂಡ ನಂತರ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರಿಂದಲೂ ಪ್ರಶಂಸೆಗೆ ಒಳಗಾಗಿದೆ ಎಂದ ಅವರು, ಕಸ ಸಂಗ್ರಹಣೆ ಬಗ್ಗೆ ಎಸ್‍ಎಂಪಿ ಎಂಟರ್ ಪ್ರೈಸಸ್ ಅವರೆ ಸಂಪೂರ್ಣ ಜವಬ್ದಾರಿ ತಗೆದುಕೊಂಡಿದ್ದು, ಮಾಸಿಕ ಹಿಂದಿನ ಶುಲ್ಕವನ್ನೇ ಪಡೆಯುತ್ತಿದ್ದಾರೆ.

ಮಾಸಿಕ 10.64 ಲಕ್ಷ ರೂ. ಸಂಗ್ರಹಣೆ ಮಾಡಲಾಗುತ್ತಿದ್ದು, ಮಾಸಿಕ 13.45 ಲಕ್ಷ ರೂ. ಖರ್ಚಾಗುತ್ತಿದೆ. ಆದರೂ ಸಂಸ್ಥೆ ಉತ್ತಮವಾಗಿ ನಿರ್ವಹಣೆ ಮಾಡುತ್ತಿದೆ. ನಗರದಲ್ಲಿ 30,370 ಮನೆಗಳಿದ್ದು, 19,880 ಮನೆಗಳಿಂದ ಮಾತ್ರ ಶುಲ್ಕ ಸಂಗ್ರಹಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಉಳಿದ ಮನೆಗಳ ಶುಲ್ಕವನ್ನು ಸಂಗ್ರಹಿಸುವ ಜವಬ್ದಾರಿ ಅವರಿಗೆ ನೀಡಲಾಗಿದೆ. ಶುಲ್ಕ ಸಂಗ್ರಹಣೆ ಮನೆಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಎಸ್‍ಎಂಪಿ ಎಂಟರ್ ಪ್ರೈಸಸ್ ಆಗುತ್ತಿರುವ ನಷ್ಟವೂ ಸರಿದೂಗಲಿದೆ. ಕಸ ಸಂಗ್ರಹಣೆಗೆ ನಗರಸಭೆಯಿಂದ ಸಂಪೂರ್ಣ ಜವಬ್ದಾರಿ ಎಸ್‍ಎಂಪಿ ಎಂಟರ್ ಪ್ರೈಸಸ್ ಅವರದ್ದೇ ಆಗಿದ್ದು, ಜೆಡಿಎಸ್ ಮುಖಂಡ ದೇವರಾಜ್ ಆರೋಪ ಮಾಡಿರುವುದು ಕಪೋಲಕಲ್ಪಿತವಾಗಿದೆ. ಇದರಲ್ಲಿ ನಗರಸಭೆ ಅಧ್ಯಕ್ಷೆಯಾಗಲೀ, ಆಯುಕ್ತರಾಗಲೀ ಯಾವುದೇ ಅವ್ಯವಹಾರ ನಡೆಸಿಲ್ಲ ಎಂದರು.

ನಗರಸಭೆ ಸದಸ್ಯ ರಾಜಶೇಖರ್ ಮಾತನಾಡಿ, ಎಸ್‍ಎಂಪಿ ಎಂಟರ್ ಪ್ರೈಸಸ್ ಈಗಾಗಲೇ ತುಮಕೂರು, ಬಿಜಾಪುರ ಜಿಲ್ಲೆಗಳಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಚಿಕ್ಕಮಗಳೂರಿನಲ್ಲಿ ಉತ್ತಮವಾಗಿ ಕಸ ಸಂಗ್ರಹಣೆ ಮಾಡುತ್ತಿರುವುದನ್ನು ಗಮನಿಸಿ ಹಾಸನ ಜಿಲ್ಲೆಯಲ್ಲಿಯೂ ಎಸ್‍ಎಂಪಿ ಎಂಟರ್ ಪ್ರೈಸಸ್ ನೀಡಲು ಮುಂದಾಗಿದೆ. ಕಸದ ನಿರ್ವಹಣೆ ಜವಬ್ದಾರಿಯನ್ನು ಹೆಚ್.ಹೆಚ್. ದೇವರಾಜ್ ವಹಿಸಿಕೊಳ್ಳುವುದಾದರೆ ಕೌನ್ಸಿಲ್‍ನಲ್ಲಿ ತೀರ್ಮಾನಿಸಿ ಅವರು ಸೂಚಿಸಿದವರಿಗೆ ನೀಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ನಗರಸಭೆ ಸದಸ್ಯರಾದ ಎಚ್.ಡಿ.ತಮಯ್ಯ, ಮುತ್ತಯ್ಯ, ಸುಧೀರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News