ಕತ್ತಿಯಿಂದ ಕಡಿದು ವ್ಯಾಪಾರಿಯ ಬರ್ಬರ ಹತ್ಯೆ: ಮೂವರು ಆರೋಪಿಗಳ ಬಂಧನ

Update: 2019-02-06 11:28 GMT
ಕೊಲೆಯಾದ ಶಫೀಕ್

ಮಡಿಕೇರಿ, ಫೆ.6 : ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ವ್ಯಾಪಾರಿಯೊಬ್ಬರನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ವಿರಾಜಪೇಟೆ ಪಟ್ಟಣದಲ್ಲಿ ನಡೆದಿದೆ.

ಸ್ಥಳೀಯ ನಿವಾಸಿ ಶಫೀಕ್ (40) ಕೊಲೆಯಾದ ವ್ಯಕ್ತಿ. ವಿರಾಜಪೇಟೆಯ ಸಮೀಪದ ಕೆದಮುಳ್ಳೂರು ಗ್ರಾಮದ ಮಾಳೇಟ್ಟಿರ ದರ್ಶನ್, ಅಸ್ಸಾಂ ಮೂಲದ ರಹೀಂ ಹಾಗೂ ಮತ್ತೊಬ್ಬ ಆರೋಪಿ ಜೀವನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳವಾರ ರಾತ್ರಿ ಸುಮಾರು 10.45 ಗಂಟೆಗೆ ಮನೆಯೊಳಗೆ ನುಗ್ಗಿದ ಮೂವರು ಆರೋಪಿಗಳು ಮಾತಿಗೆ ಮಾತು ಬೆಳೆಸಿ ಶಫೀಕ್‍ನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಮನೆಯೊಳಗೆ ಕಿರುಚಾಟ ಕೇಳಿದಾಗ ಸ್ಥಳೀಯ ನಿವಾಸಿಗಳು ಎಚ್ಚೆತ್ತುಕೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಆರೋಪಿಗಳ ಬಂಧನ ಸುಲಭವಾಯಿತೆಂದು ಸ್ಥಳೀಯರು ತಿಳಿಸಿದ್ದಾರೆ.

ಅಂಗಡಿಯೊಂದನ್ನು ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದ ಶಫೀಕ್ ರಿಯಲ್ ಎಸ್ಟೇಟ್ ವ್ಯವಹಾರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಹೇಳಲಾಗಿದೆ. 
ಆರೋಪಿ ಜೀವನ್ ಈ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಮೂರು ವರ್ಷಗಳ ಸೆರೆವಾಸ ಅನುಭವಿಸಿದ್ದ. ಹಣಕಾಸು ವ್ಯವಹಾರದ ವ್ಯತ್ಯಾಸದಿಂದಾಗಿ ಈ ಕೊಲೆ ನಡೆದಿದೆ ಎಂದು ತಿಳಿದು ಬಂದಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ಬಳಸಿಕೊಂಡು ಆರೋಪಿಗಳು ಈ ಕೃತ್ಯವನ್ನು ನಡೆಸಿದ್ದಾರೆ. ವಿರಾಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಮೃತ ಶಫೀಕ್ ಪತ್ನಿ ಶಫೀನಾ ಹಾಗೂ ತಾಯಿ ಮತ್ತು ಓರ್ವ ಸಹೋದರನನ್ನು ಅಗಲಿದ್ದಾರೆ.

ತನಿಖೆಗೆ ಆಗ್ರಹ
ಮೃತರ ಅಂತ್ಯಕ್ರಿಯೆಗೂ ಮೊದಲು ವಿರಾಜಪೇಟೆ ಶಾಫಿ ಜುಮಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ, ಬಳಿಕ ಮಾತನಾಡಿದ ಸಮಾಜದ ಮುಖಂಡರು ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ಡಿವೈಎಸ್‍ಪಿ ನಾಗಪ್ಪ ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಸುಮಾರು ಎರಡು ಸಾವಿರ ಮಂದಿ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News