​ಮೊಬೈಲ್‌ನಲ್ಲಿ ಪ್ಯಾನಿಕ್ ಬಟನ್: ಆರಂಭ ಯಾವಾಗ? ಲಾಭ ಏನು?

Update: 2019-02-07 07:36 GMT

ಹೊಸದಿಲ್ಲಿ, ಫೆ.7: ಮೊಬೈಲ್‌ ಫೋನ್ ಗಳಲ್ಲಿ ಪ್ಯಾನಿಕ್ ಬಟನ್ ಅಳವಡಿಸಿ, ಇದನ್ನು ತುರ್ತು ಸ್ಪಂದನೆ ಸೇವಾ ವ್ಯವಸ್ಥೆ (ಇಆರ್‌ಎಸ್‌ಎಸ್)ಗೆ ಸಂಪರ್ಕಿಸುವ ವಿನೂತನ ಕ್ರಮವನ್ನು ಹಿಮಾಚಲ ಪ್ರದೇಶ ಹಾಗೂ ನಾಗಾಲ್ಯಾಂಡ್ ಯಶಸ್ವಿಯಾಗಿ ನಿರ್ವಹಿಸಿದ ಬಳಿಕ ದೇಶಾದ್ಯಂತ ಈ ವ್ಯವಸ್ಥೆಯನ್ನು ಫೆಬ್ರವರಿ 19ರಂದು ಆರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ವ್ಯವಸ್ಥೆಯನ್ನು ಹಂತಹಂತವಾಗಿ ಅಳವಡಿಸಿಕೊಳ್ಳುವಂತೆ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ.

ಹಿಮಾಚಲ ಮತ್ತು ನಾಗಾಲ್ಯಾಂಡ್‌ನಲ್ಲಿ ಈ ಕಾರ್ಯ ಸುಲಲಿತವಾಗಿ ನಡೆದಿದ್ದು, ಇತರ ರಾಜ್ಯಗಳಲ್ಲೂ ಈ ವ್ಯವಸ್ಥೆ ಸುಲಲಿತ ಸ್ವರೂಪ ಪಡೆಯುತ್ತಿದೆ ಎನ್ನುವುದನ್ನು ಅಧಿಕೃತವಾಗಿ ದೇಶವ್ಯಾಪಿ ವಿಸ್ತರಣೆ ಯೋಜನೆ ಘೋಷಣೆ ವೇಳೆ ಪ್ರದರ್ಶಿಸಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಗಳು ಹೇಳಿವೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಗೃಹ ವ್ಯವಹಾರಗಳ ಸಚಿವಾಲಯ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಈ ನಿಟ್ಟಿನಲ್ಲಿ ಸಂಯುಕ್ತವಾಗಿ ಕಾರ್ಯನಿರತವಾಗಿವೆ. ಹೊಸ ವ್ಯವಸ್ಥೆ ಮೂಲಕ ಬಳಕೆದಾರರು ಯಾವುದೇ ದಿಗಿಲು ಅಥವಾ ಅಪಾಯ ಸಾಧ್ಯತೆಯ ಮುನ್ಸೂಚನೆಯ ಸಂದೇಶವನ್ನು ಹತ್ತಿರದ ಪಿಸಿಆರ್ ಹಾಗೂ ಕುಟುಂಬ ಸದಸ್ಯರು/ ಸ್ನೇಹಿತರಿಗೆ ಕಳುಹಿಸಲು ಅವಕಾಶವಿರುತ್ತದೆ. ಉಪಗ್ರಹ ಆಧರಿತ ಜಿಪಿಎಸ್ ವ್ಯವಸ್ಥೆ ಮೂಲಕ ಬಳಕೆದಾರರ ಸ್ಥಳದ ಮಾಹಿತಿ ಕೂಡಾ ಲಭ್ಯವಾಗುತ್ತದೆ. ಒಟ್ಟಾರೆ ಚೌಕಟ್ಟಿನಲ್ಲಿ ಮೊಬೈಲ್ ಪ್ಯಾನಿಕ್ ಬಟನ್ ಸಂಕೇತವನ್ನು ತುರ್ತು ಸ್ಪಂದನೆ ಸಂಖ್ಯೆಯಾದ 112ಕ್ಕೆ ಸಂಪರ್ಕಿಸಲಾಗುತ್ತದೆ.

ಆದರೆ ಇಡೀ ದೇಶದಲ್ಲಿ ಏಕಕಾಲಕ್ಕೆ ಈ ವ್ಯವಸ್ಥೆಗೆ ಚಾಲನೆ ನೀಡಲು ಸಾಧ್ಯವಾಗುತ್ತಿಲ್ಲ. ರಾಜ್ಯ ಪೊಲೀಸ್ ಇಲಾಖೆಗಳು ಸಮಾನ ತುರ್ತುಸಂಖ್ಯೆ 112ಕ್ಕೆ ಸಂಪರ್ಕಿಸಿಕೊಳ್ಳುವವರೆಗೆ ದೇಶವ್ಯಾಪಿ ಚಾಲನೆ ಸಾಧ್ಯವಿಲ್ಲ ಎಂದು ಮೂಲಗಳು ಹೇಳಿವೆ.

ಈ ವಿಶೇಷ ಮಹಿಳಾ ಸುರಕ್ಷಾ ವ್ಯವಸ್ಥೆಗೆ ನಿರ್ಭಯ ನಿಧಿಯಿಂದ ನೆರವು ನೀಡಲಾಗಿದೆ. ಈ ವ್ಯವಸ್ಥೆ ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಉತ್ತಮ ಫಲಿತಾಂಶ ನೀಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News