ವೈದ್ಯರ ಯಡವಟ್ಟು: ಆಪರೇಶನ್ ವೇಳೆ ಮಹಿಳೆಯ ಹೊಟ್ಟೆಯಲ್ಲಿ ಕತ್ತರಿ ಬಿಟ್ಟರು!

Update: 2019-02-09 09:29 GMT

ಹೈದರಾಬಾದ್, ಫೆ.9: ಕೆಲವೊಮ್ಮೆ ವೈದ್ಯರ ನಿರ್ಲಕ್ಷದಿಂದ ಯಡವಟ್ಟು ಸಂಭವಿಸುತ್ತವೆ. ಶಸ್ತ್ರಚಿಕಿತ್ಸೆ ಮಾಡುವಾಗ ಹೊಟ್ಟೆಯಲ್ಲಿ ಕತ್ತರಿ ಮತ್ತಿತರ ವಸ್ತುಗಳನ್ನು ಬಿಟ್ಟಿರುವ ಎಷ್ಟೋ ಘಟನೆಗಳನ್ನು ಕೇಳಿರುತ್ತೇವೆ. ಇಂತಹದ್ದೇ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ವೈದ್ಯರು ಆಪರೇಶನ್ ಮಾಡುವ ವೇಳೆ ಮಹಿಳೆಯ ಹೊಟ್ಟೆಯಲ್ಲಿ 9 ಇಂಚಿನ ಕತ್ತರಿಯನ್ನು ಬಿಟ್ಟಿದ್ದಾರೆ.

33ರ ವಯಸ್ಸಿನ ಮಹೇಶ್ವರಿ ಕಳೆದ ಶುಕ್ರವಾರ ರಾತ್ರಿ ತೀವ್ರ ಹೊಟ್ಟೆನೋವು ಎಂದು ಹೇಳಿಕೊಂಡು ನಿಮ್ಸ್‌ಗೆ (ನಿಜಾಮ್ ವೈದ್ಯಕೀಯ ವಿಜ್ಞಾನ ಸಂಸ್ಥೆ)ದಾಖಲಾಗಿದ್ದರು. ಎಕ್ಸ್-ರೇ ಮಾಡಿದಾಗ ಬೆಚ್ಚಿಬೀಳಿಸುವ ಸಂಗತಿ ಬೆಳಕಿಗೆ ಬಂದಿತು. ಹೊಟ್ಟೆಯೊಳಗೆ ಕತ್ತರಿ ಇರುವುದು ಪತ್ತೆಯಾಗಿತ್ತು. ನಿಮ್ಸ್ ವೈದ್ಯರೇ ಕಳೆದ ವರ್ಷ ನವೆಂಬರ್‌ನಲ್ಲಿ ಮಹೇಶ್ವರಿಗೆ ನಡೆಸಿದ್ದ ಶಸ್ತ್ರಚಿಕಿತ್ಸೆ ವೇಳೆ ಕತ್ತರಿಯನ್ನು ಹೊಟ್ಟೆಯೊಳಗೆ ಬಿಟ್ಟು ಯಡವಟ್ಟು ಮಾಡಿದ್ದರು.

ಎಕ್ಸ್‌ರೇ ವರದಿಯನ್ನು ಭಯಭೀತರಾದ ಮಹಿಳೆ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಮತ್ತೊಂದು ಆಪರೇಶನ್ ಮಾಡಿ ಮಹೇಶ್ವರಿ ಹೊಟ್ಟೆಯಿಂದ ಕತ್ತರಿ ಹೊರ ತೆಗೆದಿದ್ದಾರೆ.

‘‘ಪ್ರಕರಣದ ಬಗ್ಗೆ ನಾವು ತನಿಖೆ ನಡೆಸಲಿದ್ದು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ’’ಎಂದು ನಿಮ್ಸ್ ನಿರ್ದೇಶಕ ಡಾ.ಕೆ. ಮನೋಹರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News