ಸುಂಟಿಕೊಪ್ಪದಲ್ಲಿ ಪ್ರತ್ಯೇಕ ರಸ್ತೆ ಅಪಘಾತ: ಇಬ್ಬರು ಮೃತ್ಯು

Update: 2019-02-09 18:43 GMT

ಮಡಿಕೇರಿ, ಫೆ.9 : ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿರುವ ಭೀಕರ ಘಟನೆ ಸುಂಟಿಕೊಪ್ಪದಲ್ಲಿ ನಡೆದಿದೆ.

ಮೋಟಾರ್ ಬೈಕ್‍ವೊಂದಕ್ಕೆ ಎದುಗಡೆಯಿಂದ ಬರುತ್ತಿದ್ದ ಮ್ಯಾಕ್ಸಿ ಕ್ಯಾಬ್ ಢಿಕ್ಕಿಯಾದ ಪರಿಣಾಮ ಬೈಕ್ ಸವಾರ, ಮೈಸೂರು ಮೂಲದ ಬಸವ(30) ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ನಡೆದಿದೆ. 

ಸುಂಟಿಕೊಪ್ಪದಲ್ಲಿ ಗಾರೆ ಕೆಲಸ ಕಾಮಗಾರಿ ನಿರ್ವಹಿಸುತ್ತಿದ್ದ ಬಸವ ತನ್ನ ಸಹೋದ್ಯೋಗಿ, ಮಂಡ್ಯ ಜಿಲ್ಲೆಯ ಮಳವಳ್ಳಿ ನಿವಾಸಿ ಸುಬ್ಬಣ್ಣ ಎಂಬವರೊಂದಿಗೆ ಬೈಕ್‍ನಲ್ಲಿ ಸುಂಟಿಕೊಪ್ಪದಿಂದ ಕುಶಾಲನಗರಕ್ಕೆ ತೆರಳುತ್ತಿದ್ದಾಗ ಕೇರಳ ರಾಜ್ಯಕ್ಕೆ ಸೇರಿದ ಮ್ಯಾಕ್ಸಿ ಕ್ಯಾಬ್ ಶಾಂತಗೇರಿ ತಿರುವಿನಲ್ಲಿ ಬೈಕ್‍ಗೆ ಢಿಕ್ಕಿಯಾಗಿದ್ದು, ಇದರಿಂದ ಬಸವ ಸ್ಥಳದಲ್ಲೇ ಸಾವನ್ನಪ್ಪಿದರೆ, ಹಿಂಬದಿ ಸವಾರ ಸುಬ್ಬಣ್ಣ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮ್ಯಾಕ್ಸಿಕ್ಯಾಬ್‍ನ ಚಾಲಕ ಕಾಸರಗೋಡಿನ ಅಬ್ದುಲ್ ರಝಾಕ್ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು 12 ಮಂದಿ ಕೊಪ್ಪದ ಗೋಲ್ಡನ್ ಟೆಂಪಲ್ ಹಾಗೂ ನಿಸರ್ಗಧಾಮಕ್ಕೆ ಭೇಟಿ ನೀಡಿ, ಮಡಿಕೇರಿ ಮೂಲಕ ಕಾಸರಗೋಡಿಗೆ ಹಿಂತೆರಳುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ. ಚಾಲಕ ಅಬ್ದುಲ್ ರಝಾಕ್ ಅವಘಡವನ್ನು ತಪ್ಪಿಸಲು ಪ್ರಯತ್ನಿಸಲು ಹೋಗಿ ತೋಟದ ಬಳಿಯಲ್ಲಿದ್ದ ಜಾಹೀರಾತು ಫಲಕಕ್ಕೆ ಮ್ಯಾಕ್ಸಿಕ್ಯಾಬ್‍ನ್ನು ಢಿಕ್ಕಿ ಹೊಡೆದಿದ್ದು, ವಾಹನದ ಮುಂಭಾಗ ನಜ್ಜುಗುಜ್ಜಾಗಿದೆ. 

ಎರಡನೇ ಪ್ರಕರಣ: ಮೂಲತಃ ಭಾಗಮಂಡಲದ ಕೋಪಟ್ಟಿ ನಿವಾಸಿ ಬೆಂಗಳೂರಿನ ದೊಡ್ಡ ಬೊಮ್ಮ ಸಂದ್ರದಲ್ಲಿ ನೆಲೆಸಿರುವ ಶಿವಣ್ಣ (71) ಎಂಬವರು ಕಾರು ಅವಘಡಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ.

ಬೆಂಗಳೂರಿನಿಂದ ಕಾರೊಂದರಲ್ಲಿ ಶಿವಣ್ಣ ಅವರು ತಮ್ಮ ಮಗಳು ಭವ್ಯಳೊಂದಿಗೆ ಸುಳ್ಯದ ತನ್ನ ಬಾವನ ಮನೆಯ ಗೃಹಪ್ರವೇಶಕ್ಕೆ ಆಗಮಿಸುತ್ತಿದ್ದ ಸಂದರ್ಭ ಮುಂಜಾನೆ ಇಲ್ಲಿಗೆ ಸಮೀಪದ 7ನೇ ಹೊಸಕೋಟೆ ಬಳಿ ಕಾರು ಮನೆಯ ಕಾಂಪೌಂಡ್ ಗೇಟಿಗೆ ಢಿಕ್ಕಿಯಾಗಿ ಶಿವಣ್ಣ ಸ್ಥಳದಲ್ಲೇ ಅಸುನೀಗಿದ್ದಾರೆ.  ಕಾರಿನಲ್ಲಿದ್ದ ಭವ್ಯ ಮತ್ತು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News