ಕರಾಟೆ ಚಾಂಪಿಯನ್‍ಶಿಪ್‍: ಕೊಡಗಿನ ಇಬ್ಬರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ

Update: 2019-02-09 18:45 GMT

ಪೊನ್ನಂಪೇಟೆ,ಫೆ.9: ಅಖಿಲ ಭಾರತ ಅಂತರ್ ಡೋಜೋ ಕರಾಟೆ ಚಾಂಪಿಯನ್‍ ಶಿಪ್‍ನಲ್ಲಿ ಕೊಡಗಿನ ಇಬ್ಬರು ವಿದ್ಯಾರ್ಥಿನಿಯರು ಚಿನ್ನ ಸೇರಿದಂತೆ ತಲಾ ಎರಡು ಪದಕಗಳನ್ನು ತಮ್ಮದಾಗಿಸಿಕೊಂಡು ಸಾಧನೆಗೈದಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಚಾಂಪಿಯನ್‍ಶಿಪ್‍ನಲ್ಲಿ ಈ ಸಾಧನೆ ಮಾಡಿರುವ ಯುವ ಪ್ರತಿಭೆಗಳು ಕೊಡಗಿಗೆ ಕೀರ್ತಿ ತಂದಿದ್ದಾರೆ.
ಚಾಂಪಿಯನ್‍ಶಿಪ್‍ನ 22ರಿಂದ 25 ಕೆ.ಜಿ.ಯವರೆಗಿನ ಸ್ಫರ್ಧೆಯಲ್ಲಿ ಅದ್ವಿತೀಯ ಪ್ರದರ್ಶನ ನೀಡಿದ ದುದ್ದಿಯಂಡ ಎಚ್. ಮುರ್ಶಿದ 1 ಚಿನ್ನ ಮತ್ತು 1 ಬೆಳ್ಳಿ ಪದಕ ಗಳಿಸಿದರೆ, 32ರಿಂದ 35 ಕೆ.ಜಿ.ಯವರೆಗಿನ ಸ್ಫರ್ಧೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಆಲೀರ ಯು. ನಾಫಿಯಾ 1 ಚಿನ್ನ ಮತ್ತು 1 ಕಂಚಿನ ಪದಕ ಪಡೆದಿದ್ದಾರೆ.

ದುದ್ದಿಯಂಡ ಎಸ್. ಹಂಸ ಮತ್ತು ಮುಮ್ತಾಜ್ ದಂಪತಿಗಳ ಪುತ್ರಿಯಾಗಿರುವ ಮುರ್ಶಿದ ಮತ್ತು ಆಲೀರ ಎಂ. ಉಸ್ಮಾನ್ (ಅಲವಿ) ಮತ್ತು ರುಮ್ತಾಜ್ ದಂಪತಿಗಳ ಪುತ್ರಿಯಾಗಿರುವ ನಾಫಿಯಾ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News