ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ದೇಶಕ್ಕೆ ಅನಿವಾರ್ಯ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ

Update: 2019-02-09 18:52 GMT

ಮಂಡ್ಯ,ಫೆ.9: ದೇಶದಲ್ಲಿ ದಕ್ಷ, ಪ್ರಾಮಾಣಿಕ ನಾಯಕತ್ವದ ಕೂಗು ಕೇಳಿ ಬರುತ್ತಿದ್ದು, ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಮಂತ್ರಿಯಾಗುವುದು ದೇಶಕ್ಕೆ ಅನಿವಾರ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಪ್ರತಿಪಾದಿಸಿದರು.

ಸ್ವರ್ಣಸಂದ್ರದ ಬಿಜಿಎಸ್ ಸಮುದಾಯ ಭವನದಲ್ಲಿ ನಡೆದ ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ನಿರ್ಣಾಯಕ ಘಟ್ಟ ಮುಟ್ಟುತ್ತಿದೆ. 2014ರಲ್ಲಿ ನಡೆದ ದೊಡ್ಡ ಕ್ರಾಂತಿಯ ಫಲವಾಗಿ ಮೋದಿ ದೇಶದಲ್ಲಿ 5 ವರ್ಷ ದಕ್ಷ ಹಾಗೂ ಭ್ರಷ್ಟಾಚಾರ ಮುಕ್ತ ಉತ್ತಮ ಆಡಳಿತ ನೀಡಿದ್ದಾರೆ ಎಂದು ಪ್ರಸಂಸೆ ವ್ಯಕ್ತಪಡಿಸಿದರು.

ಕಾರ್ಯಕರ್ತರು ಕೇವಲ ಸ್ಲೋಗನ್ ಕೂಗಿದರೆ ಸಾಲದು, ಮೋದಿ ಕೊಟ್ಟ ಕಾರ್ಯಕ್ರಮಗಳ ಗುಣಮಟ್ಟದ ಚರ್ಚೆ ನಡೆಸಿ ಅದನ್ನು ಮತದಾರರಿಗೆ ತಲುಪಿಸುವ ಕೆಲಸ ಆಗಬೇಕಿದೆ. ಮೋದಿ ಒಬ್ಬ ಗಟ್ಟಿ ಮನುಷ್ಯ. ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರಂತೆ ದಿಟ್ಟ ನಿರ್ಧಾರ ಕೈಗೊಳ್ಳುವ ವ್ಯಕ್ತಿ ಎಂದರೆ ಅದು ನರೇಂದ್ರ ಮೋದಿ ಎಂದು ಬಣ್ಣಿಸಿದರು.

ಸರ್ಧಾರ್ ಪಟೇಲ್ ಅವರ ನಾಯಕತ್ವದಲ್ಲಿ ದೇಶದ ಸಂಸ್ಥಾನಗಳು ಒಂದಾಗದಿದ್ದರೆ, ಇಂದು ಅಖಂಡ ಭಾರತವಾಗಲು ಸಾಧ್ಯವಾಗುತ್ತಿರಲಿಲ್ಲ.
ಪ್ರಸ್ತುತ ದೇಶ ಕವಲು ದಾರಿಗಳಾಗಿ ನಡೆಯುತ್ತಿದೆ. ಇದನ್ನು ಒಂದು ಮಾಡಲು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಒಂದು ಪರಿಪೂರ್ಣ ರಾಷ್ಟ್ರವಾಗಬೇಕಾಗದೆ ಜನ ಮತ್ತೊಮ್ಮೆ ಮೋದಿ ಅವರಿಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

ಮಂಡ್ಯ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಪ್ರವಾಸ ಮಾಡಿ ಪಕ್ಷ ಸಂಘಟಿಸುವ ನಿರ್ಧಾರ ಮಾಡಲಾಗಿದ್ದು, ಎಲ್ಲ ಕಾರ್ಯಕರ್ತರು ಉತ್ಸಾಹದಿಂದ ಕೇಂದ್ರದ ಯೋಜನೆಗಳನ್ನು ಜನರಿಗೆ ತಿಳಿಸುವ ಮೂಲಕ ಬಿಜೆಪಿ ಅರಳುವಂತೆ ಮಾಡಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ ಪಕ್ಷದಲ್ಲಿ ಅಂದು ಯಾವುದೇ ಸ್ಥಾನಮಾನ ಹೊಂದಿರದ ರಾಹುಲ್‍ ಗಾಂಧಿಗೆ ಸಂವಿಧಾನಕ್ಕಿಂತ ಹೆಚ್ಚು ಅಧಿಕಾರವಿತ್ತು. 2004ರಿಂದ 2014ರವರೆಗೆ 10 ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಧಾನಿಯಾಗಿದ್ದ ಮನಮೋಹನ್‍ ಸಿಂಗ್ ಅವರಿಗಿಂತ ರಾಹುಲ್‍ಗೆ ಹೆಚ್ಚು ಅಧಿಕಾರವಿತ್ತು. 2009ರಿಂದ 2014ರ 2ನೇ ಅವಧಿಯಲ್ಲಿ ನಾನು ಕೇಂದ್ರ ಮಂತ್ರಿ ಮಂಡಲದಲ್ಲಿ ವಿದೇಶಾಂಗ ಸಚಿವನಾಗಿದ್ದೆ. ಆ ಸಂದರ್ಭದಲ್ಲಿ ಕ್ಯಾಬಿನೆಟ್‍ನಲ್ಲಿ ವಿಷಪೂರಿತವಾದ ಪರಿಸ್ಥಿತಿ ಉದ್ಭವವಾಯಿತು ಎಂದು ಹೇಳಿದರು,

ಸಮ್ಮಿಶ್ರ ಪಕ್ಷಗಳ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರ ಕೈಯಲ್ಲಿ ಮಂತ್ರಿ ಮಂಡಲ ಹಿಡಿತವಿರಲಿಲ್ಲ. ಆ ಸಂದರ್ಭದಲ್ಲಿ ದೇಶದಲ್ಲಿ ದೊಡ್ಡ ದೊಡ್ಡ ಹಗರಣಗಳು ನಡೆಯಲು ಶುರುವಾದವು. ಕಾಮನ್‍ವೆಲ್ತ್ ಗೇಮ್, 2ಜಿ, ಕಲ್ಲಿದ್ದಲು ಹಗರಣಗಳು ಹೆಚ್ಚಾದವು. ಇದರಿಂದ ದೇಶದಲ್ಲಿ ಭ್ರಷ್ಟತೆ ಹೆಚ್ಚಾಗಿತ್ತು. ಮಂತ್ರಿಗಳ ಮೇಲೆ ಮನಮೋಹನ್ ಸಿಂಗ್ ಹಿಡಿತ ಸಾಧಿಸಲು ಆಗಲೇ ಇಲ್ಲ ಎಂದು ಕಾಂಗ್ರೆಸ್ ಆಡಳಿತ ವೈಖರಿ ಬಗ್ಗೆ ಕಿಡಿಕಾರಿದರು.

ನಾನು ಮೂರುವರೆ ವರ್ಷಗಳ ಕಾಲ ವಿದೇಶಾಂಗ ಸಚಿವನಾಗಿದ್ದಾಗ ರಾಹುಲ್‍ ಗಾಂಧಿ ಅವರು ಒಂದು ಫರ್ಮಾನು ಹೊರಡಿಸಿ ಅಧ್ಯಕ್ಷ, 
ಪ್ರಧಾನ ಕಾರ್ಯದರ್ಶಿಯಾಗಿರಲಿ 80 ವರ್ಷ ಮೇಲ್ಪಟ್ಟವರು ಮಂತ್ರಿಯಾಗುವಂತಿಲ್ಲ ಎಂದಾಗ ನಾನು ರಾಜೀನಾಮೆ ಕೊಟ್ಟು ಹೊರಬಂದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಆಗುತ್ತಿದ್ದ ಕೆಲವೊಂದು ವಿಚಾರ ಹಾಗೂ ಆದೇಶಗಳು ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರಿಗೆ ಗೊತ್ತಿಲ್ಲದೆ ನಡೆಯುತ್ತಿದ್ದವು. ಅವರ ಗಮನಕ್ಕೆ ಬರದೇ ಕೆಲವೊಂದು ಆದೇಶಗಳು ಹೊರಡುತ್ತಿದ್ದವು. ರಾಹುಲ್‍ ಗಾಂಧಿಗೆ ಪಕ್ಷದಲ್ಲಿ ಸಂವಿಧಾನಕ್ಕಿಂತ (ಎಕ್ಟ್ರಾ ಕಾನ್‍ಸ್ಟಿಟ್ಯೂಷನಲ್ ಅಥಾರಿಟಿ) ಹೆಚ್ಚು ಅಧಿಕಾರವಿತ್ತು. ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ಮಂಡಿಸಬೇಕಿದ್ದ ಮಸೂದೆಯ ಪ್ರತಿಯನ್ನೇ ಹರಿದು ಹಾಕಿದ್ದರು. ಪಕ್ಷದಲ್ಲಿ ಏನೂ ಆಗದಿದ್ದ ರಾಹುಲ್‍ ಗಾಂಧಿ ಅಧಿಕಾರ ಚಲಾಯಿಸುತ್ತಿದ್ದರು. ರಾಷ್ಟ್ರಕ್ಕೆ ಹಾಗೂ ಸಂಸತ್‍ಗೆ ಜವಾಬ್ದಾರರಲ್ಲದಿದ್ದರೂ ಅವರ ಆದೇಶ ಪಾಲಿಸಬೇಕಾಗಿತ್ತು ಎಂದು ಹೇಳಿದರು.

ಇದನ್ನೆಲ್ಲ ಗಮನಿಸುತ್ತಿದ್ದ ನರೇಂದ್ರ ಮೋದಿ ಅವರು 2014ರಿಂದ 2019ರವರೆಗೆ ದೇಶದಲ್ಲಿ ಹಗರಣ ರಹಿತವಾಗಿ ಆಡಳಿತ ನೀಡಿದರು. ಯಾವ ಮಂತ್ರಿಯ ಬಗ್ಗೆಯೂ ಗುಮಾನಿ ಇಲ್ಲ. ಅಷ್ಟು ಪಾರದರ್ಶಕವಾಗಿ ಅಧಿಕಾರ ನಡೆಸಿ ಪ್ರಗತಿ ವೇಗ ಜಾಸ್ತಿ ಮಾಡುವ ಮೂಲಕ ದೇಶದಲ್ಲಿ ಕ್ರಾಂತಿ ಮಾಡಿದರು ಎಂದರು.

ಕಾಂಗ್ರೆಸ್ ಸರ್ಕಾರವಿದ್ದಾಗ ಪ್ರತಿದಿನ ಪಾಕಿಸ್ತಾನದಿಂದ ನಮ್ಮ ದೇಶದ ಮೇಲೆ ದಾಳಿಗಳು ನಡೆಯುತ್ತಲೇ ಇದ್ದವು. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುತ್ತಿದ್ದಂತೆ ಪಾಕಿಸ್ತಾನಕ್ಕೆ ಹೊಸ ಸಂದೇಶ ರವಾನಿಸಿದರು. ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಎಂಬ ಸ್ಟ್ರಾಟರ್ಜಿ ಮಾಡುವ ಮೂಲಕ ಪಾಕಿಸ್ತಾನವನ್ನು ಮಟ್ಟ ಹಾಕಿದರು. ಪಾಕಿಸ್ತಾನಕ್ಕೆ ಮಿಲಿಟರಿ ಭಾಷೆಯಲ್ಲಿಯೇ ಪ್ರತ್ಯುತ್ತರ ನೀಡಿದರು ಎಂದು ಹೇಳಿದರು.

ನಮ್ಮ ದೇಶದ ಗಡಿಯನ್ನು ಕಾಪಾಡುವ ಶಕ್ತಿ ಮೋದಿಗೆ ಮಾತ್ರ ಇದೆ. ಮೋದಿ ಏನೂ ಎಂಬುದು ಪಾಕಿಸ್ತಾನಕ್ಕೆ ಅರ್ಥವಾಗಿದೆ. ನಮ್ಮ ದೇಶದ ಆರ್ಥಿಕ ಸ್ಥಿತಿ, ಪ್ರಗತಿ ವೇಗದಲ್ಲಿ ನಡೆಯುತ್ತಿದ್ದರೆ, ಪಾಕಿಸ್ತಾನ ದಿವಾಳಿಯಾಗುತ್ತಿದೆ. ವಿಶ್ವಬ್ಯಾಂಕ್‍ನಿಂದ ಪಡೆದ ಎಲ್ಲ ಸಾಲವನ್ನು ನರೇಂದ್ರ ಮೋದಿ ಬಡ್ಡಿ ಸಮೇತವಾಗಿ ತೀರಿಸಿ ಸಾಲಮುಕ್ತ ದೇಶವನ್ನಾಗಿ ಮಾಡಿದ್ದಾರೆ ಎಂದರು.

ಮಹಾಘಟ್ ಬಂಧನ್ ಕುರಿತು ವ್ಯಂಗ್ಯವಾಡಿದ ಅವರು, ಮೋದಿ ಸೋಲಿಸಲು 20ಕ್ಕೂ ಹೆಚ್ಚು ಪಕ್ಷಗಳು ಒಂದಾಗಿವೆ. ಆ ಪಕ್ಷಗಳ ನಾಯಕತ್ವ ಯಾರದ್ದು ಅನ್ನೋದೆ ಗೊತ್ತಿಲ್ಲ, ಅದಕ್ಕಾಗಿ ಚುನಾವಣೆ ಬಳಿಕ ಹೇಳುತ್ತೇವೆ ಎಂದರು. 

ವೇದಿಕೆಯಲ್ಲಿ ಬಿಜೆಪಿ ಪರಾಜಿತ ಅಭ್ಯರ್ಥಿ ಡಾ.ಸಿದ್ದರಾಮಯ್ಯ, ರಾಜ್ಯ ಉಪಾಧ್ಯಕ್ಷ ಬಿ.ಸೋಮಶೇಖರ್, ಜಿಲ್ಲಾ ಉಸ್ತುವಾರಿ ಅಶ್ವಥ್‍ ನಾರಾಯಣ, ಜಿಲ್ಲಾಧ್ಯಕ್ಷ ನಾಗಣ್ಣಗೌಡ, ಮಾಜಿ ಅಧ್ಯಕ್ಷ ಎಚ್.ಹೊನ್ನಪ್ಪ, ಎನ್.ಶಿವಣ್ಣ, ಕೆ.ಎಸ್.ನಂಜುಂಡೇಗೌಡ, ನಗರ ಘಟಕ ಅಧ್ಯಕ್ಷ ಅರವಿಂದ್, ಮಲ್ಲಿಕಾರ್ಜುನ್, ಮಧುಚಂದನ್, ಅರುಣ್‍ಕುಮಾರ್, ವಿದ್ಯಾನಾಗೇಂದ್ರ, ಪಾಲಹಳ್ಳಿ ಲಿಂಗಣ್ಣ, ಡಾ.ಸದಾನಂದ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

ನನ್ನ ಜೊತೆ ಕಾಂಗ್ರೆಸ್ ಪಕ್ಷದಲ್ಲಿದ್ದವರು ಬಿಜೆಪಿ ಪಕ್ಷಕ್ಕೆ ಬರಬೇಕು ಎಂದು ಬೆಂಬಲಿಗರಿಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕರೆ ನೀಡಿದರು.
ಮದ್ದೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ದೇಶದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಮಂಡ್ಯದ ಬಿಜೆಪಿ ಕಾರ್ಯಕರ್ತರ ಸಭೆಗೆ ಬಂದಿದ್ದೇನೆ. ಯಶಸ್ಸು ಸಿಗುವ ವಿಶ್ವಾಸವಿದೆ, ನನ್ನ ಜೊತೆ ಕಾಂಗ್ರೆಸ್‍ನಲ್ಲಿದ್ದವರು ಬಿಜೆಪಿಗೆ ಬರಬೇಕು ಎಂಬುದು ನನ್ನ ಆಸೆ. ಇಂದು ಆ ಕರೆ ಕೊಡುತ್ತಿದ್ದೇನೆ. ಈ ಬಗ್ಗೆ ನನ್ನ ಬೆಂಬಲಿಗರೊಂದಿಗೆ ಮಾತನಾಡುತ್ತೇನೆ ಎಂದರು.

ಮಂಡ್ಯದಲ್ಲಿ ಇಂದು ನಡೆಯುತ್ತಿರುವ ಕಾರ್ಯಕರ್ತರ ಸಭೆ ಪ್ರಚಲಿತ ದೇಶದ ಪರಿಸ್ಥಿತಿ ವಿಚಾರ ವಿನಿಮಯ ಮಾಡುವ ಸಭೆ. ನಮ್ಮ ಗಮನ ಲೋಕಸಭೆ ಚುನಾವಣೆಗೆ ಕೇಂದ್ರೀಕೃತವಾಗಿದೆ. ಬಿಜೆಪಿಗೆ ದೊಡ್ಡ ಬೆಂಬಲ ಸಿಗುವ ನಿರೀಕ್ಷೆ ಇದೆ ಎಂದು ತಿಳಿಸಿದರು. ರಾಜ್ಯ ಸಮ್ಮಿಶ್ರ ಸರ್ಕಾರದ ಬಜೆಟ್ ಕುರಿತು ಪ್ರತಿಕ್ರಿಯಿಸಿದ ಅವರು ಸರ್ಕಾರವೇ ಅಭದ್ರವಾಗಿರುವಾಗ ಬಜೆಟ್‍ಗೆ ಆದ್ಯತೆ ಕೊಡಲ್ಲ ಎಂದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಿಯೋ ಬಿಡುಗಡೆಗೊಳಿಸಿರುವ ಕುಮಾರಸ್ವಾಮಿ ಬಗ್ಗೆ ಕೇಳಿದ ಪ್ರಶ್ನೆಗೆ ಈ ಬಗ್ಗೆ ಯಡಿಯೂರಪ್ಪ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಆರೋಪ ಸಾಬೀತಾದರೆ ಅವರೇ ರಾಜಕೀಯದಿಂದ ದೂರ ಸರಿಯುವ ಮಾತನಾಡಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News