ಕಳ್ಳಭಟ್ಟಿ ಸಾರಾಯಿ ದುರಂತ : ಸಾವಿನ ಸಂಖ್ಯೆ 100ಕ್ಕೆ ಏರಿಕೆ

Update: 2019-02-10 04:52 GMT

ಡೆಹ್ರಾಡೂನ್/ಮೀರಠ್, ಫೆ. 10: ಯೂರಿಯಾ, ಬ್ಯಾಟರಿ ದ್ರವ, ಕಾಸ್ಟಿಕ್ ಸೋಡಾ ಮತ್ತು ದೊಡ್ಡ ಪ್ರಮಾಣದ ನಿದ್ರಾಜನಕ ವಸ್ತುಗಳನ್ನು ಹೊಂದಿದ್ದ ಕಳ್ಳಭಟ್ಟಿ ಸಾರಾಯಿ ಸೇವಿಸಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ 100ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.

ಅತಿಹೆಚ್ಚು ಭಾಧಿತವಾಗಿರುವ ಸಹರಣಪುರದಲ್ಲಿ ಶನಿವಾರ ವರೆಗೆ ಮೃತಪಟ್ಟವರ ಸಂಖ್ಯೆ 64ಕ್ಕೇರಿದೆ. 50ಕ್ಕೂ ಅಧಿಕ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸರಣಿ ಸಾವುಗಳು ಶುಕ್ರವಾರದಿಂದ ವರದಿಯಾಗುತ್ತಿದ್ದು, ರೂರ್ಕೆಲಾ ಸಮೀಪದ ಭಗವಾನ್‌ಪುರದ ಬಾಲಪುರ ಗ್ರಾಮದಲ್ಲಿ ಮೊದಲು ಸಾವು ಸಂಭವಿಸಿದೆ. ತೆಹ್ರಾವಿ ಸಲುವಾಗಿ ಗುರುವಾರ ಬಾಲಪುರ, ಸಹರಣಪುರದ ಸುತ್ತಮುತ್ತಲ ಗ್ರಾಮಗಳ ಹಾಗೂ ಭಗವಾನ್‌ಪುರ ಗ್ರಾಮಸ್ಥರು ಸೇರಿದ್ದರು.

ಆದರೆ ಶನಿವಾರ ಈ ಸಾವಿನ ಸಂಖ್ಯೆ ಏರುತ್ತಲೇ ಸಾಗಿದ್ದು, ಇತರ ಗ್ರಾಮಗಳಲ್ಲೂ ಜನ ಸಾಯುತ್ತಿರುವ ವರದಿಗಳು ಬಂದಿವೆ. ಸಹರಣಪುರದ ಮಂದಿ ಈ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ. ಆದರೆ ಅಲ್ಲೂ ಸಾವು ಸಂಭವಿಸಿದೆ. ಈ ಮದ್ಯವನ್ನು ಎಲ್ಲಿ ತಯಾರಿಸಲಾಗಿದೆ ಹಾಗೂ ಎಲ್ಲಿ ಭಟ್ಟಿ ಇಳಿಸಲಾಗಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹರಿದ್ವಾರ್ ಎಸ್‌ಎಸ್‌ಪಿ ಜನಮೇಜಯ ಖಂಡೂರಿ ವಿವರಿಸಿದ್ದಾರೆ.

ಈ ವಿಷಪೂರಿತ ಮದ್ಯ ಸರಬರಾಜು ಮಾಡಿದ ಶಂಕೆಯಲ್ಲಿ ಏಳು ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಈ ಪೈಕಿ ಇಬ್ಬರು ಮೃತಪಟ್ಟಿದ್ದು, ಉಳಿದ ಐದು ಮಂದಿಯ ವಿಚಾರಣೆ ನಡೆದಿದೆ ಎಂದು ವಿವರಿಸಿದ್ದಾರೆ.

ಇತ್ತೀಚಿನ ವರದಿಗಳ ಪ್ರಕಾರ ಬಂಧಿತರ ಸಂಖ್ಯೆ 175ಕ್ಕೇರಿದೆ. ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ 92697 ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಂಡಿದ್ದಾರೆ. 297 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉತ್ತರ ಪ್ರದೇಶದ ಗಡಿ ಗ್ರಾಮಗಳಲ್ಲಿ ಈ ವಿಷಪೂರಿತ ಮದ್ಯ ತಯಾರಿಸಲಾಗಿತ್ತು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News