ದೇಶದಲ್ಲಿ ಏಕ ಸಂಸ್ಕೃತಿ ಪ್ರತಿಪಾದಿಸುವ ಸಾಹಿತ್ಯ ಗಟ್ಟಿಯಾಗುತ್ತಿದೆ: ಜನಪರ ಸಾಹಿತ್ಯ ವೇದಿಕೆ ಮುಖಂಡ ರುದ್ರಯ್ಯ

Update: 2019-02-11 18:02 GMT

ಚಿಕ್ಕಮಗಳೂರು, ಫೆ.11: ಜನರ ಸಂಭ್ರಮ ಹಾಗೂ ಸಂಕಟಗಳನ್ನು ಪ್ರತಿನಿಧಿಸಬೇಕಾದ ಸಾಹಿತ್ಯಗಳು ಸದ್ಯ ಮರೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಪ್ರಸಕ್ತ ದೇಶಾದ್ಯಂತ ಕೋಮುವಾದ, ಜಾತಿವಾದವನ್ನು ಪ್ರತಿನಿಧಿಸುವ ಸಾಹಿತ್ಯಿಕ ಕಾರ್ಯಕ್ರಮಗಳು ವಿಜೃಂಭಿಸುತ್ತಿವೆ. ಇದು ದೇಶದ ಸಾಮಾಜಿಕ ಏಳಿಗೆಗೆ ಮಾರಕವಾಗಿ ಪರಿಣಮಿಸಲಿದೆ ಎಂದು ಜನಪರ ಸಾಹಿತ್ಯ ವೇದಿಕೆ ಮುಖಂಡ ರುದ್ರಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಬತ್ತರ ದಶಕದ ಸಾಹಿತ್ಯ ನಾಡಿನ ಸಂಭ್ರಮ ಹಾಗೂ ಸಂಕಟಗಳನ್ನು ಪ್ರತಿನಿಧಿಸುವಂತಹ ಸಾಹಿತ್ಯಗಳಾಗಿದ್ದವು. ಇಂತಹ ಸಾಹಿತಿಗಳ ಸಾಹಿತ್ಯದಿಂದಾಗಿ ನೂರಾರು ಜನಪರ ಚಳವಳಿಗಳು ಜನ್ಮತಾಳಿದವು. ಆದರೆ ಪ್ರಸಕ್ತ ಸಾಹಿತ್ಯ ಸಮ್ಮೇಳನಗಳು ಕೇವಲ ಸಂಭ್ರಮದ ಸಾಹಿತ್ಯ ಕಾರ್ಯಕ್ರಮಗಳಾಗುತ್ತಿದ್ದು, ಜನರ ಸಂಕಟಗಳಿಗೆ ಸ್ಪಂದಿಸುವ ಸಾಹಿತ್ಯದ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜನಪರ ಸಾಹಿತ್ಯ ವೇದಿಕೆ ಹಾಗೂ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆಯಲ್ಲಿ ನಗರದ ಅಂಬೇಡ್ಕರ್ ಭವನದಲ್ಲಿ ಫೆ.18-19ರಂದು ನಾಡಿನ ಜನರ ಸಂಕಟಗಳಿಗೆ ಸ್ಪಂದಿಸುವ ಜನಪರ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳು ನಡೆಯಲಿವೆ ಎಂದರು. 

ಜನಪರ ಸಾಹಿತ್ಯ ವೇದಿಕೆ ಹಾಗೂ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆಯಿಂದ ಫೆ.18 ಮತ್ತು 19ರಂದು ಎರಡು ದಿನಗಳ ಕಾಲ ನಡೆಯುವ ಜನಪರ ಸಾಹಿತ್ಯ ಸಮ್ಮೇಳನದಲ್ಲಿ 6 ಗೋಷ್ಠಿಗಳು ನಡೆಯಲಿವೆ. ಈ ಗೋಷ್ಠಿಗಳ ಮೂಲಕ ಜನರ ಸಂಕಟಗಳನ್ನು ಪ್ರತಿನಿಧಿಸುವ ವೈಚಾರಿಕತೆಯ ಚರ್ಚೆಗಳು ನಡೆಯಲಿವೆ. ಅಂಬೇಡ್ಕರ್ ಭವನದಲ್ಲಿ ಸಾಹಿತಿ ಪೂರ್ಣಚಂದ್ರ ತೇಜಸ್ವಿ ವೇದಿಕೆಯಲ್ಲಿ ಸಮ್ಮೇಳನ ನಡೆಯಲಿದ್ದು, "ನೆಲದ ನಾದದೊಂದಿಗೆ, ಬೆವರಿನ ಬರಹದೊಂದಿಗೆ, ಶ್ರಮದ ಸಂಸ್ಕೃತಿಯೊಂದಿಗೆ ಸಮ್ಮೇಳನಕ್ಕೆ ಬನ್ನಿ" ಎಂಬ ಘೋಷ ವಾಕ್ಯದೊಂದಿಗೆ ಸಮ್ಮೇಳನಕ್ಕೆ ಎಲ್ಲರನ್ನೂ ಆಹ್ವಾನಿಸಲಾಗುತ್ತಿದೆ ಎಂದ ಅವರು, ಫೆ.18ರಂದು ಬೆಳಗ್ಗೆ 10ಕ್ಕೆ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಸಮ್ಮೇಳನದ ಮೊದಲ ದಿನದಂದು" ಕನ್ನಡ ಸಾಹಿತ್ಯದ ಬಿಕ್ಕಟ್ಟುಗಳು ಹಾಗೂ ಪರಿಹಾರಗಳು ಗೋಷ್ಠಿ ನಡೆಯಲಿದೆ. ಬಳಿಕ ರಾಜ್ಯದ ವಿವಿಧ ಕಲಾ ತಂಡಗಳಿಂದ ಕಲಾ ಪ್ರದರ್ಶನ ಹಾಗೂ ಕಲಾ ಗೋಷ್ಠಿ ನಡೆಯಲಿದೆ ಎಂದರು.

ಫೆ.19ರಂದು "ಸಾಂಸ್ಕೃತಿಕ ಬಿಕ್ಕಟ್ಟುಗಳು ಹಾಗೂ ಪರ್ಯಾಯ" ಗೋಷ್ಠಿ ನಡೆಯಲಿದ್ದು, ಬಳಿಕ ರಾಜ್ಯ ಮಟ್ಟದ ಕವಿಗೋಷ್ಠಿ ನಡೆಯಲಿದೆ ಎಂದ ಅವರು, ಈ ಗೋಷ್ಠಿಗಳಲ್ಲಿ ನಾಡಿನ ಹೆಸರಾಂತ ಸಾಹಿತಿಗಳು, ಚಿಂತಕರಾದ ಡಿ.ಎಂ.ಪುಟ್ಟಯ್ಯ, ಮಾನಸಯ್ಯ, ಡಾ.ಶರೀಫಾ, ಡಾ.ಅರುಣ್ ಜೋಳದ, ಪ್ರಜಾವಾಣಿ ದಿನ ಪತ್ರಿಕೆಯ ಹನೀಫ್, ಸಭೀಯಾ ಭೂಮಿಗೌಡ, ಚಿಕ್ಕಮಗಳೂರಿನ ಡಾ.ಮಹೇಶ್ಚಂದ್ರ ದತ್ತ, ಡಾ.ಸುಂದರೇಶ್ ಮತ್ತಿತರರ ಭಾಗವಹಿಸಲಿದ್ದಾರೆ. ಸಮ್ಮೇಳನ ಗೋಷ್ಠಿಗಳ ಚರ್ಚೆಯಲ್ಲಿ ಪ್ರತಿನಿಧಿಗಳೂ ಭಾಗವಹಿಸಬಹುದು. ಪ್ರತಿನಿಧಿಗಳಿಗೆ ತಲಾ 100 ರೂ. ಶುಲ್ಕ ನಿಗದಿ ಪಡಿಸಲಾಗಿದೆ ಎಂದ ಅವರು, ಪ್ರಗತಿಪರರ, ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಸಾಹಿತ್ಯ ಪ್ರಿಯರು, ಹೋರಾಟಗಾರರ, ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನ ಯಶಸ್ವಿಗೆ ಸಹಕರಿಸಬೇಕೆಂದು ಅವರು ತಿಳಿಸಿದರು.

ಇದೇ ವೇಳೆ ಜನಪರ ಸಾಹಿತ್ಯ ಸಮ್ಮೇಳನದ ಭಿತ್ತಿಪತ್ರವನ್ನು ಬಿಡುಗಡೆ ಮಾಡಲಾಯಿತು. ಸುದ್ದಿಗೋಷ್ಠಿಯಲ್ಲಿ ಜನಪರ ಸಾಹಿತ್ಯ ವೇದಿಕೆಯ ಸಂಚಾಲಕರಾದ ಜಗದೀಶ್, ಹರೀಶ್, ಶೇಖರ್ ಉಪಸ್ಥಿತರಿದ್ದರು.

ದೇಶ, ಭಾಷೆ ಸೇರಿದಂತೆ ಶೋಷಣೆ, ಬಡತನ, ಕೋಮುವಾದ, ಜಾತಿವಾದದಂತಹ ಸಾಮಾಜಿಕ, ರಾಜಕೀಯ ಪರಿಸ್ಥಿತಿಗಳು ಈ ಹಿಂದೆ ಸಾಹಿತ್ಯ ಹಾಗೂ ಸಾಹಿತ್ಯದ ವೇದಿಕೆಗಳಲ್ಲಿ ಚರ್ಚಾ ವಿಷಯಗಳಾಗುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದ ಈ ವೈಶಿಷ್ಟ್ಯ ಮರೆಯಾಗುತ್ತಿದ್ದು, ದೇಶಾದ್ಯಂತ ಸಂಭ್ರಮದ ಸಾಹಿತ್ಯ ಹಾಗೂ ಏಕ ಸಂಸ್ಕೃತಿಯನ್ನೇ ವೈಭವೀಕರಿಸುವ ಸಾಹಿತ್ಯ ಹಾಗೂ ಸಾಹಿತ್ಯದ ಕಾರ್ಯಕ್ರಗಳು ಗಟ್ಟಿಯಾಗುತ್ತಿವೆ. ಬಂಡಾಯ ಸಾಹಿತ್ಯ, ದಲಿತ ಸಾಹಿತ್ಯಗಳು ಮಂಕಾಗುತ್ತಿವೆ. ಸಾಹಿತ್ಯ ಪರಿಷತ್‍ನ ಸಮ್ಮೇಳನಗಳು ಹಾಗೂ ಕಾರ್ಯಕ್ರಮಗಳಲ್ಲಿ ದುಡಿಯುವ ವರ್ಗಗಳು, ಶೋಷಣೆ, ಬಡತನ, ಜಾತಿವಾದ, ಕೋಮುವಾದ ಮೊದಲಾದ ಸಾಮಾಜಿಕ ವಿಷಯಗಳ ಬಗ್ಗೆ ಚರ್ಚೆಯಾಗುತ್ತಿಲ್ಲ.
- ರುದ್ರಯ್ಯ, ಜನಪರ ಸಾಹಿತ್ಯ ವೇದಿಕೆ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News