ಯಾರದೋ ಹಣ, ಯಲ್ಲಮ್ಮನ ಜಾತ್ರೆ

Update: 2019-02-12 05:06 GMT

ದೇಶವನ್ನು ತಲ್ಲಣಿಸುವಂತೆ ಮಾಡಿದ, ಮಹಿಳೆಯರ ಮೇಲೆ ನಡೆಯುವ ಬರ್ಬರ ಅತ್ಯಾಚಾರಗಳ ವಿರುದ್ಧ ಧ್ವನಿಯೆತ್ತುವಂತೆ ಮಾಡಿದ ‘ನಿರ್ಭಯಾ ಪ್ರಕರಣ’ ಸುಲಭವಾಗಿ ಮರೆಯುವಂತಹದ್ದಲ್ಲ. ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಬೇರೆ ಬೇರೆ ನೆಲೆಗಳಲ್ಲಿ ಚರ್ಚಿಸುವುದಕ್ಕೆ ಮತ್ತು ಕಾನೂನುಗಳನ್ನು ಜಾರಿಗೊಳಿಸುವುದಕ್ಕೆ ಈ ಪ್ರಕರಣ ಕಾರಣವಾಯಿತು. ಬರೇ ದಿಲ್ಲಿ ಮಾತ್ರವಲ್ಲ, ದೇಶಾದ್ಯಂತ ಪ್ರಕರಣದ ವಿರುದ್ಧ ಆಕ್ರೋಶ ಕೇಳಿ ಬಂದವು. ಒಂದು ರೀತಿಯಲ್ಲಿ ಅಂದಿನ ಯುಪಿಎ ಸರಕಾರವನ್ನು ಮುಜುಗರಕ್ಕೆ ಸಿಲುಕಿಸಿದ್ದ ಪ್ರಕರಣ ಇದು. ಈ ಕಾರಣದಿಂದಲೇ ಸರಕಾರ ಬಜೆಟ್‌ನಲ್ಲಿ ‘ನಿರ್ಭಯಾ ನಿಧಿ’ಯೊಂದನ್ನು ಘೋಷಿಸಿತು. ದೇಶಾದ್ಯಂತ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸಲು ಅಗತ್ಯ ಉಪಕ್ರಮಗಳ ಜಾರಿಗಾಗಿ 2013ರಲ್ಲಿ ಯುಪಿಎ ಸರಕಾರ ನಿರ್ಭಯಾ ನಿಧಿಯನ್ನು ಸ್ಥಾಪಿಸಿತು. ಆದರೆ ಈ ನಿಧಿ ಸರಿಯಾದ ದಾರಿಯಲ್ಲಿ ಸದ್ಬಳಕೆಯಾಗುತ್ತಿಲ್ಲ ಎನ್ನುವ ಆರೋಪ ಆರಂಭದಿಂದಲೇ ಕೇಳಿ ಬರುತ್ತಿತ್ತು. ಇದೀಗ ಸಂಸದೀಯ ಸಮಿತಿಯು ಇನ್ನೊಂದು ಆರೋಪವನ್ನು ಮಾಡಿದೆ. ಸಂತ್ರಸ್ತ ಮಹಿಳೆಯರಿಗಾಗಿ ವ್ಯಯವಾಗಬೇಕಾದ ನಿಧಿ ಕಟ್ಟಡಗಳ ನಿರ್ಮಾಣಕ್ಕೆ ಬಳಕೆಯಾಗಿದೆ ಎನ್ನುವ ಅಂಶವನ್ನು ಅದು ಬಹಿರಂಗಪಡಿಸಿದೆ. ನಿರ್ಭಯಾ ನಿಧಿಯ ಸ್ಥಾಪನೆಯ ಉದ್ದೇಶವನ್ನೇ ಇದು ಅಪಹಾಸ್ಯ ಮಾಡಿದೆ.

ಮೋದಿ ಆಡಳಿತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ ಎನ್ನುವ ವರದಿ ಕೇಳಿ ಬರುತ್ತಿದೆ. ಮಹಿಳೆ, ಸಂಸ್ಕೃತಿ ಎಂದು ಮಾತನಾಡುವ ಮೋದಿ ಸರಕಾರ, ಈ ನಿಧಿಗೆ ಹೆಚ್ಚು ಹಣವನ್ನು ಬಿಡುಗಡೆ ಮಾಡಬೇಕಾಗಿತ್ತು. ದುರದೃಷ್ಟವಶಾತ್ ಹಣ ಬಿಡುಗಡೆಯಾಗುವುದು ಪಕ್ಕಕ್ಕಿರಲಿ, ಹಣವನ್ನು ಬೇರೆ ಯೋಜನೆಗಳಿಗೆ ರವಾನಿಸುವ ಮೂಲಕ ಮಹಿಳೆಯರ ಕುರಿತಂತೆ ತನ್ನ ಕಾಳಜಿಯೇನು ಎನ್ನುವುದನ್ನು ಸಾಬೀತು ಮಾಡಿದೆ. ಈ ರೀತಿಯಲ್ಲಿ ಅನುದಾನಗಳು ದುರ್ವ್ಯಯವಾಗುತ್ತಿರುವುದು ಕೇವಲ ನಿರ್ಭಯಾ ನಿಧಿಗಷ್ಟೇ ಸೀಮಿತವಿಲ್ಲ.ಸಾಮಾಜಿಕ ಕಲ್ಯಾಣಗಳಿಗಾಗಿ ಮೀಸಲಾಗಿರುವ ಬಹುತೇಕ ನಿಧಿಗಳು ಸದ್ಬಳಕೆಯಾಗುತ್ತಿಲ್ಲ. ಮುಖ್ಯವಾಗಿ ಪರಿಶಿಷ್ಟ ಜಾತಿ ವರ್ಗಗಳ ಏಳಿಗೆಗಾಗಿ ಮೀಸಲಿಟ್ಟ ಹಣ ಖಜಾನೆಗೆ ಮರಳುವ ಕುರಿತಂತೆ ಇತ್ತೀಚೆಗೆ ದಲಿತ ಮುಖಂಡರೊಬ್ಬರು ಆತಂಕ ವ್ಯಕ್ತಪಡಿಸಿದ್ದರು. ಹಾಗೆಯೇ ದಲಿತರ ಅಭಿವೃದ್ಧಿಗೆ ಮೀಸಲಾಗಿರುವ ಹಣವನ್ನು ಬೇರೆ ಯೋಜನೆಗಳಿಗೆ ಬಳಸುವ ಕುರಿತಂತೆಯೂ ಆರೋಪಗಳಿವೆ. ದಲಿತರ ಅಭಿವೃದ್ಧಿಯ ನಿಧಿ ಬಳಕೆಯಾಗದೇ ಮರಳಿ ಖಜಾನೆ ಸೇರುವುದರ ಹಿಂದೆ ಅಧಿಕಾರಿಗಳ ದುರುದ್ದೇಶಗಳಿವೆ. ಆ ನಿಧಿಯನ್ನು ದಲಿತರ ಏಳಿಗೆಗೆ ಬಳಸುವುದರ ಕುರಿತಂತೆಯೇ ಇವರಿಗೆ ಅಸಹನೆಯಿದೆ. ವಿವಿಧ ಇಲಾಖೆಗಳ ಮುಖ್ಯಸ್ಥರಲ್ಲಿ ಬಹುತೇಕ ಮೇಲ್ವರ್ಗದ ಜನರೇ ಇರುವುದು ಇದಕ್ಕೆ ಕಾರಣವಾಗಿರಬಹುದು.
 
 ಮೋದಿ ಸರಕಾರ ಸ್ವಚ್ಛತಾ ಆಂದೋಲನಕ್ಕಾಗಿ ದೇಶದ ಜನರ ಮೇಲೆ ತೆರಿಗೆಯನ್ನು ವಿಧಿಸಿತು. ಆದರೆ ಈ ತೆರಿಗೆಯ ಫಲಿತಾಂಶ ಮಾತ್ರ ದೇಶಕ್ಕೆ ದೊರಕಿಲ್ಲ. ಸ್ವಚ್ಛತೆಗಾಗಿ ಮೀಸಲಿಟ್ಟ ನಿಧಿಯಲ್ಲಿ ದೊಡ್ಡ ಭಾಗ ವೆಚ್ಚವಾಗುವುದು ಜಾಹೀರಾತಿಗಾಗಿ. ಇದಾದ ಬಳಿಕ ಸಭೆ, ಸಮಾರಂಭ, ರಾಜಕಾರಣಿಗಳ ಪ್ರಹಸನಗಳಿಗಾಗಿ ವೆಚ್ಚವಾಗುತ್ತದೆ. ಅಳಿದುಳಿದ ಹಣ ಅಧಿಕಾರಿಗಳ ಜೇಬು ಸೇರುತ್ತದೆ. ಆದರೆ ನಿಜಕ್ಕೂ ಈ ದೇಶದ ಸ್ವಚ್ಛತೆಯಲ್ಲಿ ಭಾಗವಹಿಸಿದವರಿಗೆ ಆದ ಪ್ರಯೋಜನಗಳೇನು? ಸ್ವಚ್ಛತೆಯ ಕಾರ್ಯದಲ್ಲಿ ನೇರವಾಗಿ ಭಾಗವಹಿಸುತ್ತಿರುವವರು ಪೌರ ಕಾರ್ಮಿಕರು. ಅವರಿಂದಾಗಿಯೇ ನಮ್ಮ ನಗರ, ಬೀದಿಗಳು ಶುಚಿಯಾಗಿವೆ. ಇಂದಿಗೂ ಈ ಪೌರಕಾರ್ಮಿಕರಿಗೆ ಅತ್ಯಾಧುನಿಕ ಸಲಕರಣೆಗಳನ್ನು ಒದಗಿಸಲು ಸರಕಾರ ವಿಫಲವಾಗಿದೆ. ಕಾರ್ಮಿಕರಿಗೆ ಆಧುನಿಕ ಸಲಕರಣೆ ನೀಡಿರುವ ಲೆಕ್ಕಗಳನ್ನಷ್ಟೇ ನೀಡಲಾಗುತ್ತಿದೆ. ಆದರೆ ಅದು ಕಾರ್ಮಿಕರ ಕೈಗೆ ತಲುಪುತ್ತಿಲ್ಲ. ಆ ಹಣ ಯಾರ್ಯಾರದೋ ಪಾಲಾಗುತ್ತಿದೆ. ‘ಸ್ವಚ್ಛತೆ’ಯ ಕುರಿತಂತೆ ಪದೇ ಪದೇ ಮಾತನಾಡುವ ಪ್ರಧಾನಿ ಮೋದಿಯವರು ಈ ಸ್ವಚ್ಛತೆಯಲ್ಲಿ ನೇರವಾಗಿ ಭಾಗವಹಿಸುತ್ತಿರುವ ಪೌರ ಕಾರ್ಮಿಕರ ಪರವಾಗಿ, ಅವರ ಅಭಿವೃದ್ಧಿಯ ಪರವಾಗಿ ಯಾವತ್ತೂ ಮಾತನಾಡಿಲ್ಲ. ಮಲದ ಗುಂಡಿಯಲ್ಲಿ ಬಿದ್ದು ಸಾಯುವ ದಲಿತರ ಸಂಖ್ಯೆ ಇನ್ನೂ ಇಳಿದಿಲ್ಲ.

ಹೀಗೆ ಮೃತರಾದವರ ಕುಟುಂಬಕ್ಕೆ ಕನಿಷ್ಠ 20 ಲಕ್ಷ ರೂಪಾಯಿ ಪರಿಹಾರ ಘೋಷಣೆಯನ್ನಾದರೂ ಮಾಡಿದ್ದಿದ್ದರೆ ಸ್ವಚ್ಛತಾ ಆಂದೋಲನಕ್ಕೆ ಸಂಗ್ರಹಿಸಿದ ತೆರಿಗೆ ಸಾರ್ಥಕವಾಗಿ ಬಿಡುತ್ತಿತ್ತು. ಸ್ವಚ್ಛತೆಗಾಗಿ ಮೀಸಲಿಟ್ಟ ಹಣದ ಶೇ. 1ರಷ್ಟು ಪಾಲು ಕೂಡ ಪೌರ ಕಾರ್ಮಿಕರನ್ನು ತಲುಪುತ್ತಿಲ್ಲ. ಬಡವರ ಆರೋಗ್ಯಕ್ಕಾಗಿ ಮೀಸಲಿಟ್ಟ ಹಣದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಇದೀಗ ಆಯುಷ್ ಮೂಲಕ ಸರಕಾರಿ ಆಸ್ಪತ್ರೆಯನ್ನು ದುರ್ಬಲಗೊಳಿಸಲಾಗಿದೆ. ಈ ಹಿಂದೆ ಅಲೋಪತಿ ಔಷಧಿಗಾಗಿ ಸರಕಾರಿ ಆಸ್ಪತ್ರೆ ಗುರುತಿಸಲ್ಪಡುತ್ತಿತ್ತು. ಇದೀಗ ಆಯುರ್ವೇದ, ಹೋಮಿಯೋಪತಿ, ಯುನಾನಿಯಂತಹ ಔಷಧಿಗಳಿಗೂ ಸರಕಾರ ಹಣವನ್ನು ಹಂಚುತ್ತಿದೆ. ಇದರಿಂದಾಗಿ ಬಡವರಿಗೆ ಸಿಗುತ್ತಿದ್ದ ಪರಿಣಾಮಕಾರಿ ಔಷಧಿಗಳಿಗೆ ಧಕ್ಕೆಯಾಗಿದೆ. ಈಗಾಗಲೇ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಟ್ಟ ನಿಧಿ ಇಳಿಕೆಯಾಗಿದ್ದು, ಆ ಹಣದಲ್ಲೂ ಆಯುಷ್ ತಮ್ಮ ಪಾಲನ್ನು ಪಡೆಯುತ್ತಿದೆೆ. ಆದರೆ ಬಹುತೇಕ ರೋಗರುಜಿನಗಳಿಗೆ ಬಡವರು ಅಲೋಪತಿಯನ್ನೇ ಅನುಸರಿಸುತ್ತಿದ್ದಾರೆ.

ಆಯುರ್ವೇದ, ಯುನಾನಿ, ಹೋಮಿಯೋಪತಿ ಇತ್ಯಾದಿಗಳು ರೋಗಿಗಳ ವೈಯಕ್ತಿಕ ಆಯ್ಕೆ ಮಾತ್ರವಾಗಬೇಕು. ಅದರ ಮೇಲೆ ನಂಬಿಕೆಯಿದ್ದವರು, ವಿಶ್ವಾಸ ಹೊಂದಿದವರು ಆ ಕಡೆಗೆ ಹೋಗಲಿ. ಆದರೆ ಬಡವರನ್ನು ಬಲವಂತವಾಗಿ ಆಯುಷ್ ಕಡೆಗೆ ತಳ್ಳಬಾರದು. ಯಾಕೆಂದರೆ ಆಯುಷ್‌ನಲ್ಲಿ ಎಷ್ಟೋ ರೋಗಗಳಿಗೆ ಔಷಧಿಯೇ ಇಲ್ಲ. ಹೆರಿಗೆ, ಕ್ಷಯ, ಏಡ್ಸ್, ಕ್ಯಾನ್ಸರ್ ಇತ್ಯಾದಿ ರೋಗಗಳ ಮುಂದೆ ಆಯುಷ್ ವೌನವಾಗುತ್ತದೆ. ಅಷ್ಟೇ ಅಲ್ಲ, ಕೆಲವು ರೋಗಗಳಿಗೆ ಅವುಗಳು ನೀಡುವ ಔಷಧಿ ಪರಿಣಾಮಕಾರಿ ಎನ್ನುವುದು ಇನ್ನೂ ಸಾಬೀತಾಗಿಲ್ಲ. ಹೈನೋದ್ಯಮದಲ್ಲಿ ದೇಶದ ಲಕ್ಷಾಂತರ ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಅವರೆಲ್ಲ ಕಂಗಾಲಾಗಿದ್ದಾರೆ. ಗೋಸಾಕಣೆಗೆಂದು ಸರಕಾರ ಮೀಸಲಿಟ್ಟ ಹಣವನ್ನು ನಕಲಿ ಗೋರಕ್ಷಕರು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಗೋವುಗಳ ವ್ಯಾಪಾರವನ್ನು ತಡೆದು, ಗೋಶಾಲೆಗಳನ್ನು ತೆರೆಯಲು ಹೊರಟ ಸರಕಾರದ ಅವೈಜ್ಞಾನಿಕ ಕ್ರಮದ ನೇರ ಫಲಾನುಭವಿಗಳು ರೈತರು. ಇಂದು ರೈತರಿಗೆ ಕೊಡಬೇಕಾದ ಹಣವನ್ನು ಗೋಶಾಲೆಗಳು ತಮ್ಮದಾಗಿಸಿಕೊಳ್ಳುತ್ತಿವೆ. ನಕಲಿ ಗೋರಕ್ಷಕರು ಅ ಹಣವನ್ನು ದೋಚುತ್ತಿದ್ದಾರೆ. ಇದೇ ಸಂದರ್ಭದಲ್ಲಿ ‘ಸಾವಯವ ಕೃಷಿ’ಯ ಹೆಸರಿನಲ್ಲೂ ಕೃಷಿಕರ ಹಣವನ್ನು ರಾಜಕಾರಣಿಗಳು, ಉದ್ಯಮಿಗಳು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ದುರ್ಬಲರಿಗೆ, ಕೃಷಿಕರಿಗೆ, ಮಹಿಳೆಯರಿಗಾಗಿ ಸರಕಾರ ನಿಧಿಯನ್ನು ಸ್ಥಾಪಿಸಿದರಷ್ಟೇ ಅದರ ಹೊಣೆಗಾರಿಕೆ ಮುಗಿಯುವುದಿಲ್ಲ. ಆ ಹಣ ಸದ್ಬಳಕೆಯಾದರೆ ಮಾತ್ರ ದೇಶ ಅಭಿವೃದ್ಧಿಯ ಕಡೆಗೆ ಸಾಗೀತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News