ದಿಂಡ ಹಣೆಗೆ ಬಡಿದ ಚೆಂಡು ವಿಶ್ರಾಂತಿಗೆ ವೈದ್ಯರ ಸಲಹೆ

Update: 2019-02-11 18:35 GMT

ಕೋಲ್ಕತಾ, ಫೆ.11: ಈಡನ್‌ಗಾರ್ಡನ್ಸ್‌ನಲ್ಲಿ ಸೋಮವಾರ ಮುಶ್ತಾಕ್ ಅಲಿ ಟ್ವೆಂಟಿ-20 ಟೂರ್ನಿಗಾಗಿ ನಡೆದ ಅಭ್ಯಾಸ ಪಂದ್ಯವೊಂದರಲ್ಲಿ ತನ್ನದೇ ಬೌಲಿಂಗ್‌ನಲ್ಲಿ ರಿಟರ್ನ್ ಕ್ಯಾಚ್ ಪಡೆಯುವ ಯತ್ನದಲ್ಲಿದ್ದ ಬಂಗಾಳದ ವೇಗದ ಬೌಲರ್ ಅಶೋಕ್ ದಿಂಡಾ ಹಣೆಗೆ ಚೆಂಡು ಬಡಿದಿರುವ ಘಟನೆ ನಡೆದಿದೆ. ಬ್ಯಾಟ್ಸ್‌ಮನ್ ಬೀರೇಂದರ್ ವಿವೇಕ್ ಸಿಂಗ್ ಅವರು ದಿಂಡಾ ಎಸೆದ ಚೆಂಡನ್ನು ನೇರವಾಗಿ ಹೊಡೆದಾಗ ದಿಂಡಾ ಚೆಂಡನ್ನು ಹಿಡಿಯಲು ಯತ್ನಿಸಿದರು. ಆದರೆ, ಚೆಂಡು ಅವರ ಕೈಯಿಂದ ಜಾರಿ ಅವರ ಹಣೆಗೆ ಬಡಿಯಿತು. ಆಗ ಅವರು ಸ್ಥಳದಲ್ಲೇ ಕುಸಿದುಬಿದ್ದರು. ಡ್ರೆಸ್ಸಿಂಗ್ ರೂಮ್‌ಗೆ ವಾಪಸಾಗುವ ಮೊದಲು ತನ್ನ ಓವರ್‌ನ್ನು ಪೂರ್ಣಗೊಳಿಸಿದ್ದರು ಎಂದು ಬಂಗಾಳದ ಸಹಾಯಕ ಸಿಬ್ಬಂದಿ ಹೇಳಿದ್ದಾರೆ. ಮುನ್ನಚ್ಚರಿಕಾ ಕ್ರಮವಾಗಿ ದಿಂಡಾಗೆ ಸಿಟಿ ಸ್ಕಾನಿಂಗ್ ನಡೆಸಿದ ವೈದ್ಯರು ಯಾವುದೇ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ದಿಂಡಾಗೆ ಎರಡು ದಿನ ವಿಶ್ರಾಂತಿಗೆ ಸೂಚಿಸಿದ್ದಾಗಿ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2011ರ ಮುಶ್ತಾಕ್ ಅಲಿ ಚಾಂಪಿಯನ್ ಬಂಗಾಳ ಫೆ.21 ರಂದು ಕಟಕ್‌ನಲ್ಲಿ ಮಿರೊರಾಂ ವಿರುದ್ಧ ಆಡುವ ಮೂಲಕ ಟಿ-20 ಅಭಿಯಾನ ಆರಂಭಿಸಲಿದೆ. ಕಳೆದ ಋತುವಿನಲ್ಲಿ ಸ್ವದೇಶದಲ್ಲಿ ನಡೆದ ಟೂರ್ನಿಯಲ್ಲಿ ಫೈನಲ್‌ಗೆ ತಲುಪಲು ವಿಫಲವಾಗಿದ್ದ ಬಂಗಾಳ ಸೂಪರ್‌ಲೀಗ್ ‘ಬಿ’ ಗುಂಪಿನಲ್ಲಿ ಮೂರನೇ ಸ್ಥಾನ ಪಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News